More

    ಮಕ್ಕಳೆದುರು ಅರೆಬೆತ್ತಲಾಗಿದ್ದ ಪ್ರಕರಣ: ರೆಹನಾ ಫಾತಿಮಾಗೆ ಕೇರಳ ಹೈಕೋರ್ಟ್​ನಿಂದ ಬಿಗ್​ ರಿಲೀಫ್​!

    ತಿರುವನಂತಪುರ: ಮಹಿಳಾ ಹಕ್ಕುಗಳ ಕಾರ್ಯಕರ್ತೆ ರೆಹನಾ ಫಾತಿಮಾ ವಿರುದ್ಧದ ಪೊಕ್ಸೊ ಪ್ರಕರಣವನ್ನು ಕೇರಳದ ಹೈಕೋರ್ಟ್​ ಸೋಮವಾರ ವಜಾಗೊಳಿಸಿದೆ.

    ನ್ಯಾಯಮೂರ್ತಿ ಕೌಶರ್​ ಎಡಪ್ಪಗಥ್​ ಅವರು ಪ್ರಕರಣವನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ದೇಹದ ಸ್ವಾಯತ್ತತೆಯ ಪ್ರಾಮುಖ್ಯತೆಯನ್ನು ಗಮನಿಸಿದ ನ್ಯಾಯಮೂರ್ತಿಗಳು ಸಮಾಜದಲ್ಲಿ ಪುರುಷ ಮತ್ತು ಮಹಿಳೆಯ ದೇಹದ ಬಗ್ಗೆ ಇಬ್ಬಗೆಯ ನೀತಿಗಳಿವೆ ಎಂದು ಅಭಿಪ್ರಾಯ ಪಟ್ಟರು.

    ಯಾವುದೇ ತಪ್ಪಿಲ್ಲ

    ಇಲ್ಲಿ ಯಾವುದೇ ದುರುದ್ದೇಶವಿಲ್ಲ. ಬದಲಾಗಿ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನವಾಗಿದೆ. ಮಕ್ಕಳಿಗೆ ನಗ್ನ ದೇಹವನ್ನು ಸಾಮಾನ್ಯೀಕರಿಸಲು ಮತ್ತು ಅದರ ಬಗ್ಗೆ ಸಂವೇದನಾಶೀಲರಾಗಲು ತಾಯಿಯು ತನ್ನ ದೇಹವನ್ನು ಕ್ಯಾನ್ವಾಸ್‌ನಂತೆ ತನ್ನ ಮಕ್ಕಳಿಗೆ ಪೇಟಿಂಗ್​ ಮಾಡಲು ಅನುಮತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇರಳ ಹೈಕೋರ್ಟ್ ಒತ್ತಿಹೇಳಿದೆ.

    ಆಸೆಯ ವಸ್ತುವನ್ನಾಗಿ ಮಾಡಲಾಗಿದೆ

    ನಮ್ಮ ಸಮಾಜದಲ್ಲಿರುವ ದ್ವಂದ್ವ ನೀತಿಯನ್ನು ಟೀಕಿಸಿದ ನ್ಯಾಯಾಲಯ, ಗಂಡು ಮತ್ತು ಹೆಣ್ಣಿನ ನಗ್ನತೆಯನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. ಪುಲಿಕಲಿ ಮತ್ತು ತೆಯ್ಯಂನಂತಹ ಆಚರಣೆಗಳಲ್ಲಿ ಪುರುಷರ ದೇಹದ ಮೇಲೆ ಚಿತ್ರಿಸುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಮಹಿಳೆಯ ನಗ್ನ ದೇಹವನ್ನು ಆಸೆಯ ವಸ್ತುವನ್ನಾಗಿ ಮಾಡಲಾಗಿದೆ. ಅರ್ಜಿದಾರಳು ಅಪ್‌ಲೋಡ್ ಮಾಡಿರುವ ವಿಡಿಯೋ ಉದ್ದೇಶವು ಇಂತಹ ದ್ವಂದ್ವ ನೀತಿಗಳನ್ನು ಬಹಿರಂಗಪಡಿಸುವುದು ಮತ್ತು ತನ್ನ ಮಕ್ಕಳಿಗೆ ದೇಹದ ಸೂಕ್ಷ್ಮತೆಯ ಬಗ್ಗೆ ಅರಿವು ನೀಡುವುದಾಗಿದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.

    ಏನಿದು ಪ್ರಕರಣ?

    ರೆಹನಾ 2020ರ ಜೂನ್​ 19ರಂದು ತನ್ನ ಯೂಟ್ಯೂಬ್​ ಚಾನಲ್​ನಲ್ಲಿ ಬಾಡಿ ಆರ್ಟ್ಸ್​ ಪಾಲಿಟಿಕ್ಸ್​ (#BodyArtPolitics) ಎಂಬ ಅಡಿಬರಹದೊಂದಿಗೆ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿದೆ. ವಿಡಿಯೋ ಮಾಡಿದ್ದರ ಉದ್ದೇಶದ ಬಗ್ಗೆ ತಿಳಿಸಿದ್ದ ರೆಹನಾ, ಲೈಂಗಿಕತೆ ಮತ್ತು ನಗ್ನತೆ ನಿಷೇಧವಾಗಿರುವ ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂದು ಪುನರುಚ್ಚರಿಸುವುದಕ್ಕಾಗಿ ಈ ವಿಡಿಯೋವನ್ನು ಮಾಡಿದ್ದಾಗಿ ಹೇಳಿದ್ದರು. ಲೈಂಗಿಕತೆ ಬಗ್ಗೆ ಪ್ರಸ್ತುತ ಸಮಾಜಕ್ಕೆ ತಪ್ಪು ಸಂದೇಶ ನೀಡಲಾಗುತ್ತಿದೆ. ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವಂತೆಯೇ, ನೋಡುವವರ ದೃಷ್ಟಿಯಲ್ಲಿಯೇ ಅಶ್ಲೀಲತೆಯೂ ಇದೆ ಎಂದು ರೆಹನಾ ಬರೆದುಕೊಂಡಿದ್ದರು.

    ಪ್ರಕರಣ ದಾಖಲು

    ಇದಾದ ಬಳಿಕ ರೆಹನಾ ವಿರುದ್ದ ಪೊಕ್ಸೊ ಕಾಯಿದೆಯ ಸೆಕ್ಷನ್​ 13 (ಅಶ್ಲೀಲ ಉದ್ದೇಶಗಳಿಗಾಗಿ ಮಗುವನ್ನು ಬಳಸುವುದು), ಸೆಕ್ಷನ್​ 14 (ಅಶ್ಲೀಲ ಉದ್ದೇಶಗಳಿಗಾಗಿ ಮಗುವನ್ನು ಬಳಸಿದ್ದಕ್ಕಾಗಿ ಶಿಕ್ಷೆ) ಮತ್ತು ಸೆಕ್ಷನ್​ 15 (ಮಕ್ಕಳ ಅಶ್ಲೀಲ ವಿಷಯವನ್ನು ಸಂಗ್ರಹಿಸುವುದು ಅಥವಾ ಹೊಂದಿರುವುದು) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಇದಿಷ್ಟೇ ಅಲ್ಲದೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67B (d) (ಮಗುವನ್ನು ಒಳಗೊಂಡ ಅಶ್ಲೀಲ ಲೈಂಗಿಕ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಮತ್ತು ಬಾಲಾಪರಾಧಿ ನ್ಯಾಯ ಕಾಯಿದೆಯ ಸೆಕ್ಷನ್ 75 (ಮಗುವನ್ನು ನಿರ್ಲಕ್ಷಿಸುವ ಶಿಕ್ಷೆ) ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

    ಜಾಮೀನು ಅರ್ಜಿ ತಿರಸ್ಕೃತ

    ಈ ಪ್ರಕರಣದಲ್ಲಿ ರೆಹಾನಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು. ಆಕೆಯು ತನ್ನ ಮನೆಯೊಳಗೆ ತನಗೆ ಇಷ್ಟವಾದ ರೀತಿಯಲ್ಲಿ ತನ್ನ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಲು ಸ್ವತಂತ್ರಳಾಗಿದ್ದರೂ ಕೂಡ ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಜಾಲತಾಣದಲ್ಲಿ ಪ್ರಕಟಿಸಿದ್ದು ಅಪರಾಧ ಎಂದು ಪರಿಗಣಿಸಿತ್ತು. ಸುಪ್ರೀಂಕೋರ್ಟ್ ಕೂಡ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠವು ವಿಡಿಯೋದಲ್ಲಿ ಅಶ್ಲೀಲತೆಯನ್ನು ಹರಡುವ ಕೃತ್ಯವನ್ನು ಒಳಗೊಂಡಿದೆ ಎಂದು ಗಮನಿಸಿತ್ತು. ಆದರೆ, ಇದೀಗ ಕೇರಳ ಹೈಕೋರ್ಟ್​ ಪ್ರಕರಣವನ್ನೇ ವಜಾಗೊಳಿಸಿ ರೆಹನಾಗೆ ಬಿಗ್​ ರಿಲೀಫ್​ ನೀಡಿದೆ.

    ವಿವಾದ ಹೊಸದೇನಲ್ಲ

    ಅಂದಹಾಗೆ ರೆಹನಾ ಅವರು ಬಿಎಸ್​ಎನ್​ಎಲ್​ ಮಾಜಿ ಉದ್ಯೋಗಿಯಾಗಿದ್ದಾರೆ. ಇವರಿಗೆ ವಿವಾದಗಳು ಹೊಸದೇನಲ್ಲ. ಅಯ್ಯಪ್ಪ ಭಕ್ತರ ನಂಬಿಕೆಗೆ ನೋವುಂಟು ಮಾಡುವ ಫೇಸ್​ಬುಕ್​ ಪೋಸ್ಟ್​ ಹಾಕಿದ ಆರೋಪದಲ್ಲಿ ಈ ಹಿಂದೆ ಬಂಧಿತರಾಗಿ 18 ದಿನ ಜೈಲುವಾಸ ಅನುಭವಿಸಿದ್ದರು. ಅಲ್ಲದೆ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಬಳಿಕ 2018ರ ಅಕ್ಟೋಬರ್​ನಲ್ಲಿ ರೆಹನಾ ಸಹ ಶಬರಿಮಲೆಗೆ ಭೇಟಿ ನೀಡುವ ಪ್ರಯತ್ನ ಮಾಡಿ, ಬಂಧಿತರಾಗಿ ಬಿಡುಗಡೆಯಾಗಿದ್ದರು. (ಏಜೆನ್ಸೀಸ್​)

    ಅರೆಬೆತ್ತಲೆ ದೇಹದ ಮೇಲೆ ಮಕ್ಕಳು ಡ್ರಾಯಿಂಗ್ ಮಾಡಿದ್ದರಲ್ಲಿ ಅಶ್ಲೀಲತೆ ಏನಿದೆ? ಸರ್ಕಾರಕ್ಕೆ ರೆಹನಾ ತಿರುಗೇಟು!

    ಮನೆ ಖಾಲಿ ಮಾಡಮ್ಮ ರೆಹನಾ! ಮಕ್ಕಳ ಮುಂದೆ ಅರೆಬೆತ್ತಲೆಯಾದವಳಿಗೆ ಸಂಕಷ್ಟದ ಮೇಲೆ ಸಂಕಷ್ಟ!

    ನಾಲ್ಕು ಗೋಡೆಗಳ ನಡುವೆ ಇರಲಿ: ಮಕ್ಕಳ ಮುಂದೆ ಅರೆಬೆತ್ತಲೆಯಾದ ರೆಹಾನಾಗೆ ಹೈಕೋರ್ಟ್​ ಶಾಕ್! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts