More

    ಶುದ್ಧ ಕುಡಿಯುವ ನೀರು ಯೋಜನೆಗೆ ಗ್ರಹಣ

    ವಿಜಯಾಚಾರ್ಯ ಪುರೋಹಿತ ಕೆಂಭಾವಿ: ಸರ್ಕಾರ ಜಲಜೀವನ್ ಮಷಿನ್ (ಜೆಜೆಎಂ) ಯೋಜನೆ ಮೂಲಕ ಪ್ರತಿ ಹಳ್ಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಬೃಹತ್ ಯೋಜನೆ ಹಮ್ಮಿಕೊಂಡು ಈಗಾಗಲೇ ಯಶಸ್ಸು ಕಂಡಿದೆ. ಈ ಯೋಜನೆಯಿಂದ ನೀರೇ ಕಾಣದ ಅದೆಷ್ಟೋ ಹಳ್ಳಿಗಳಿಗೆ ನಿರಂತರ ನೀರು ಹರಿಯುತ್ತಿದೆ. ಆದರೆ ಪುರಸಭೆಯ ಕೇಂದ್ರ ಸ್ಥಾನವಾದ ಪಟ್ಟಣದಲ್ಲಿ ಎರಡು ವರ್ಷ ಹಿಂದೆ ಆರಂಭಿಸಿದ್ದ ಶುದ್ಧ ಕುಡಿಯುವ ನೀರಿನ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.

    ನಗರೋತ್ಥಾನ-೨ ಹಾಗೂ ಕೆಕೆಆರ್‌ಡಿಬಿ ಅನುದಾನದಲ್ಲಿ ೪.೩೨ ಕೋಟಿ ರೂ. ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ಹಿಲ್‌ಟಾಪ್ ಕಾಲನಿಯಲ್ಲಿ ನಿರ್ಮಿಸುತ್ತಿರುವ ಶುದ್ಧ ನೀರಿನ ಘಟಕಕ್ಕೆ ನೀರು ಹೊತ್ತೊಯ್ದು ಅಲ್ಲಿ ಶುದ್ಧೀಕರಿಸಿ ಜನರಿಗೆ ತಲುಪಿಸುವ ವ್ಯವಸ್ಥೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಎರಡು ವರ್ಷದ ಹಿಂದೆಯೇ ಹಸಿರು ನಿಶಾನೆ ತೋರಿಸಿದ್ದರು.

    ಬೃಹತ್ ಪ್ರಮಾಣದ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಾಲುವೆಯಿಂದ ಪೈಪ್‌ಲೈನ್, ಶುದ್ಧೀಕರಣದ ಕಟ್ಟಡ, ವಿದ್ಯುತ್ ಕಾಮಗಾರಿ ಸೇರಿ ಹಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನುಳಿದ ಕೆಲಸಗಳು ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

    ಪಾನಪ್ರಿಯರ ತಾಣವಾದ ಪಂಪ್ ಹೌಸ್: ಇದೇ ಕಾಮಗಾರಿಗೆ ಸಂಬಂಧಿಸಿದಂತೆ ಕಾಲುವೆ ಬಳಿ ನಿರ್ಮಿಸಿದ ಪಂಪ್‌ಹೌಸ್‌ನಲ್ಲಿ ಮದ್ಯ ಪ್ರಿಯರ ಮೋಜು ಮಸ್ತಿ ಶುರುವಾಗಿ ನಿತ್ಯ ಮದ್ಯದ ಬಾಟಲಿಗಳು ಈ ಕೋಣೆಯಲ್ಲಿ ಹರಿದಾಡುತ್ತಿವೆ. ಕಾಲುವೆ ಪಕ್ಕದ ರಸ್ತೆಗೆ ಹೊಂದಿಕೊಂಡು ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ನಿತ್ಯ ಪಾರ್ಟಿ ನಡೆಯುತ್ತಿದ್ದು, ಕಾಮಗಾರಿ ನಿರ್ವಹಿಸುತ್ತಿರುವ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಸಿಬೇಕೆಂಬುದು ಜನರ ಒತ್ತಾಯವಾಗಿದೆ.

    ಈಗಾಗಲೇ ಎಲ್ಲ ಕಾಮಗಾರಿ ಪೂರ್ಣಗೊಂಡಿದ್ದು, ಶುದ್ಧ ನೀರಿನ ಯಂತ್ರ ಮತ್ತು ವಿದ್ಯುತ್ ಪರಿವರ್ತಕ ಅಳವಡಿಸುವುದು ಮಾತ್ರ ಬಾಕಿ ಇದೆ. ಬರುವ ಜನವರಿಯಲ್ಲಿ ಎಲ್ಲ ಕೆಲಸ ಪೂರ್ಣಗೊಳಿಸಿ ಜನತೆಗೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
    | ಶಂಕರಗೌಡ ಎಇ ಕರ್ನಾಟಕ ನೀರು ಸರಬರಾಜು ಮತ್ತು ಒಳಚಂರಡಿ ಮಂಡಳಿ ಯಾದಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts