More

    ಸದ್ಯ ಬಾಡಿಗೆ ಇರುವ ವ್ಯಾಪಾರಸ್ಥರನ್ನೇ ಮುಂದುವರಿಸಿ

    ಸವಣೂರ: ಪಟ್ಟಣ ಪುರಸಭೆ ವ್ಯಾಪ್ತಿಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಸದ್ಯ ಬಾಡಿಗೆ ಇರುವ ವ್ಯಾಪಾರಸ್ಥರನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಹಾಗೂ ವ್ಯಾಪಾರಸ್ಥರು ಪುರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಅಧ್ಯಕ್ಷೆ ಶೈಲಾ ಮುದಿಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

    ಪಟ್ಟಣದಲ್ಲಿ ಹಲವು ವರ್ಷಗಳಿಂದ ವ್ಯಾಪಾರಸ್ಥರು ತಮ್ಮ ವ್ಯವಹಾರ ನಡೆಸಿಕೊಂಡು ಬಂದಿದ್ದಾರೆ. ಬಾಡಿಗೆಯನ್ನೂ ಸಕಾಲಕ್ಕೆ ಸಂದಾಯ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭಿಸುವ ಸೂಚನೆ ಬಂದಾಗ ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿ ದಾವೆ ಹೂಡಿದ್ದಾರೆ. ಸವಣೂರ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ.

    ಆದರೂ ಏಕಾಏಕಿ ನಿರ್ಣಯ ಕೈಗೊಂಡು ಹರಾಜು ನಡೆಸಲು ದಿನಾಂಕ ಗೊತ್ತುಪಡಿಸಿದ್ದಾರೆ. ಈಗ ಹೊರಡಿಸಿರುವ ಹರಾಜು ಪ್ರಕ್ರಿಯೆ ಸಹ ಅವೈಜ್ಞಾನಿಕವಾಗಿದ್ದು, ಅಂಗವಿಕಲರು, ಮಹಿಳೆಯರು, ಪತ್ರಕರ್ತರು ಹಾಗೂ ಹೋರಾಟಗಾರರನ್ನು ಕಡೆಗಣಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದರಿಂದ ಹರಾಜು ಪ್ರಕ್ರಿಯೆ ನಡೆಸುವುದು ಸರಿಯಲ್ಲ. ಈ ಕುರಿತಂತೆ ಮತ್ತೊಂದು ದಾವೆ ಹೂಡಲು ನಿರ್ಧರಿಸಲಾಗಿದೆ. ಆದ್ದರಿಂದ ಅಧಿಕಾರಿಗಳು ಹರಾಜು ಪ್ರಕಟಣೆ ರದ್ದುಪಡಿಸಿ ನ್ಯಾಯಾಲಯದ ತೀರ್ಪಿನಂತೆ ನಡೆದುಕೊಳ್ಳಬೇಕು. ಒಂದುವೇಳೆ ಪ್ರಕ್ರಿಯೆ ಮುಂದುವರಿಸಿದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

    ಕರವೇ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ ಈಳಗೇರ, ಪದಾಧಿಕಾರಿಗಳಾದ ವೀರೇಶ ಈಳಗೇರ, ರಾಮಣ್ಣ ಅಗಸರ, ನೂರಅಹ್ಮದ್ ಹಾವೇರಿ, ಮುಕೇಶ ಹೂಗಾರ, ಸುಭಾಸ ಅಚಲಕರ, ಕುಮಾರಸ್ವಾಮಿ ಹಿರೇಮಠ, ಇಂದ್ರಪ್ರಸಾದ ಜಮಾದರ, ಮಾರುತಿ ರಾಶಿನಕರ, ನಜೀರ ಆಡೂರ, ದೇವೇಂದ್ರ ಅಚಲಕರ, ಎಚ್.ಎಸ್. ಖಾಂಜಾದೆ, ಬಿ.ಜೆ. ಫಿದೋಸ್, ಜೀಲಾನಿ ಪಟವೇಗಾರ, ಪ್ರಕಾಶ ಹಂಚಾಟೆ, ಮಳಿಗೆಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರು ಇದ್ದರು.

    ಸವಣೂರ ಪುರಸಭೆ ಮುಖ್ಯಾಧಿಕಾರಿ ಮನವೊಲಿಕೆ: ಹರಾಜು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗ್ಗೆ ಪ್ರಾರಂಭವಾದ ಪ್ರತಿಭಟನೆ ಮಧ್ಯಾಹ್ನದವರೆಗೂ ನಡೆಯಿತು. ಪುರಸಭೆ ಉಪಾಧ್ಯಕ್ಷ ಅಲ್ಲಾದೀನ್ ಮನಿಯಾರ ಪ್ರತಿಭಟನಾನಿರತರನ್ನು ಮನವೊಲಿಸಲು ಮುಂದಾದರು. ಆದರೆ, ವ್ಯಾಪಾರಸ್ಥರು ಹರಾಜು ಹಿಂಪಡೆಯುವಂತೆ ಪಟ್ಟ ಹಿಡಿದರು. ನಂತರ ಮುಖ್ಯಾಧಿಕಾರಿ ಮನವೊಲಿಸಿ ಎಲ್ಲ ಸದಸ್ಯರ ತುರ್ತಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

    ಮಳಿಗೆ ಹರಾಜು ದಿಢೀರ್ ರದ್ದು: ಮಳಿಗೆಗಳ ಹರಾಜು ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದರೂ ಸವಣೂರ ಪುರಸಭೆ ಅಧಿಕಾರಿಗಳು ಹರಾಜನ್ನು ಮುಂದೂಡಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯಾಪಾರಿಗಳು ಸೋಮವಾರ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.

    ಮೂರು ಸಂಕೀರ್ಣಗಳ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿ ಹೆಸರಲ್ಲಿ ಡಿಡಿ ತೆಗೆದುಕೊಳ್ಳುವಂತೆ ಪ್ರಕಟಣೆ ನೀಡಲಾಗಿತ್ತು. ಅದರಂತೆ ಹಲವು ವ್ಯಾಪಾರಸ್ಥರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆದರೆ, ಅಧಿಕಾರಿಗಳು ಏಕಾಏಕಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಘೊಷಿಸಿದರು.

    ಇದರಿಂದ ಆಕ್ರೋಶಗೊಂಡ ವ್ಯಾಪಾರಸ್ಥರು, ಪುರಸಭೆ ಪ್ರಕಟಣೆ ನೀಡಿದ್ದರಿಂದ ಹಾಜರಾಗಿದ್ದೇವೆ. ಈಗ ಇದ್ದಕ್ಕಿದ್ದಂತೆ ಹರಾಜು ಪ್ರಕ್ರಿಯೆ ಮುಂದೂಡಿರುವುದು ಸರಿಯಲ್ಲ. ದಿನದ ವ್ಯಾಪಾರ ಬಂದ್ ಮಾಡಿ ಬಂದಿದ್ದೇವೆ. ಹರಾಜು ಪ್ರಕ್ರಿಯೆಯನ್ನು ಯಾವ ಕಾರಣಕ್ಕೆ ಮುಂದೂಡಲಾಗಿದೆ. ಮತ್ತೆ ಯಾವಾಗ ನಡೆಸುತ್ತೀರಿ ಎಂಬುದನ್ನು ಲಿಖಿತ ರೂಪದಲ್ಲಿ ನೀಡಬೇಕು. ತ್ವರಿತ ಗತಿಯಲ್ಲಿ ನಡೆಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts