More

    ಮಕ್ಕಳಿಂದ ಪ್ರಶ್ನಿಸುವ ಮನೋಭಾವ ದೂರ

    ಸಾಗರ: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನಿಗಳ ಕೊಡುಗೆ ಮಹತ್ತರ ಪಾತ್ರವಹಿಸಿದೆ. ವಿಜ್ಞಾನಿಗಳ ಕೊಡುಗೆಯಿಂದ ದೇಶವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಬೆಂಗಳೂರಿನ ಜೆಎನ್‌ಸಿಎಎಸ್‌ಆರ್ ಇಟಿಯು ಸಂಯೋಜಕ ವಿನಾಯಕ ಪತ್ತಾರ್ ಹೇಳಿದರು.

    ಸಾಗರ ವಿಜ್ಞಾನ ವೇದಿಕೆ, ಸಿಎನ್‌ಆರ್ ರಾವ್ ಎಜುಕೇಷನ್ ಫೌಂಡೇಷನ್ ಸಹಯೋಗದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ತರಬೇತಿ ಶಿಬಿರದಲ್ಲಿ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ವಿಶೇಷ ಹೆಜ್ಜೆ ಇಡುತ್ತಿದೆ. ವಿಜ್ಞಾನಿ ಆಗುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಾನು ಪಾಲ್ಗೊಳ್ಳಬೇಕೆನ್ನುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
    ಪ್ರತಿನಿತ್ಯದ ಜೀವನದಲ್ಲಿ ವಿಜ್ಞಾನದ ಅಂಶ ಒಳಗೊಂಡಿರುತ್ತದೆ. ಆದರೆ ಸರಿಯಾದ ಗಮನಿಸುವಿಕೆ ಇರುವುದಿಲ್ಲ. ದಿನವೂ ಸೋಲಾರ್ ಬಳಕೆ ಮಾಡುತ್ತಿದ್ದರೂ ಅದರ ವೈಜ್ಞಾನಿಕ ರಚನೆ ಬಗ್ಗೆ ನಾವು ಯೋಚಿಸಿರುವುದೇ ಇಲ್ಲ. ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಯುವಜನರು ವೈಜ್ಞಾನಿಕ ಆಲೋಚನಾ ಕ್ರಮ ಬೆಳೆಸಿಕೊಳ್ಳಬೇಕು ಎಂದರು.
    ಪ್ರಶ್ನಿಸುವ ಮನೋಪ್ರವೃತ್ತಿಯನ್ನೇ ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ವೈಜ್ಞಾನಿಕ ಮನೋಭಾವ ಪ್ರಯೋಗ, ಸಂಶೋಧನೆಗಳನ್ನು ಪರಿಚಯಿಸುವ ಮೂಲಕ ಅರಿವು ಮೂಡಿಸಬೇಕು. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆದರೆ ಉಳಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಯಾರು ಎನ್ನುವ ಸಮಸ್ಯೆ ಹುಟ್ಟುತ್ತದೆ. ಅಲ್ಲದೆ ಆ ಕ್ಷೇತ್ರದಲ್ಲಿ ಶೂನ್ಯ ಆರಂಭವಾಗುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.
    ಅಮೆರಿಕದಂತಹ ದೇಶಗಳು ಹೊಸ ಸಂಶೋಧನೆಗಳಿಗೆ ಹೆಚ್ಚಿನ ಹಣ ತೆಗೆದಿರಿಸುತ್ತವೆ. ಪ್ರಯೋಗ ಮತ್ತು ಸಂಶೋಧನೆಗಳ ಮೂಲಕವೇ ಎಲ್ಲ ಕ್ಷೇತ್ರಗಳಲ್ಲಿಯೂ ಹೊಸ ಹೆಜ್ಜೆ ಇಡುವ ಸಾಧ್ಯತೆಗಳಿವೆ. ಇಲ್ಲವಾದಲ್ಲಿ ಸಕ್ರಿಯ ಮತ್ತು ಪ್ರಯೋಗಶೀಲತೆ ಕಳೆದುಕೊಂಡುಬಿಡುತ್ತೇವೆ. ಪ್ರಪಂಚದಲ್ಲಿ ನಡೆಯುವ ಹೊಸ ಸಂಶೋಧನೆಗಳಿಗೆ ತೆರೆದುಕೊಳ್ಳಬೇಕಾದರೆ ಇಂತಹ ಪ್ರಯೋಗಾತ್ಮಕ ತಿಳವಳಿಕೆ ಮೂಡಿಸುವ ಅಗತ್ಯವಿದೆ ಎಂದರು.
    ಸಾಗರ ವಿಜ್ಞಾನ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್.ಎಲ್.ಎಸ್.ರಾವ್ ಮಾತನಾಡಿ, ವಿದ್ಯಾರ್ಥಿಗಳು ಮೂಲ ವಿಜ್ಞಾನ ವಿಷಯ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಅತ್ಯಂತ ಅವಶ್ಯಕ. ವಿಜ್ಞಾನಿಗಳಾಗಿ ದೇಶಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು. ಮೂಲ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಪದವಿ, ಸ್ನಾತಕೋತ್ತರ ಪದವಿ ಹಂತಗಳಲ್ಲಿ ವಿಜ್ಞಾನವನ್ನು ಪ್ರಮುಖ ವಿಷಯವಾಗಿ ಅಧ್ಯಯನ ನಡೆಸಬೇಕು ಎಂದು ತಿಳಿಸಿದರು.
    ಸಾಗರ ವಿಜ್ಞಾನ ವೇದಿಕೆ ನಿರ್ದೇಶಕ ವಿ.ಸಿ.ಪಾಟೀಲ್ ಮಾತನಾಡಿದರು. ಅಧ್ಯಕ್ಷ ಡಾ. ಎಚ್.ಎಸ್.ಜೀವನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಂ.ಎಂ.ರವಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts