More

    ಗೊಂದಲ ಬೇಡ: ಲಸಿಕೆ ವಿಷಯವನ್ನು ರಾಜಕೀಯದಿಂದ ದೂರ ಇಡಿ..

    ಕರೊನಾ ಎರಡನೇ ಅಲೆಯ ವಿರುದ್ಧ ಪ್ರಬಲ ಹೋರಾಟ ನಡೆಯುತ್ತಿದೆ. ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳುವುದೇ ಕರೊನಾ ವಿರುದ್ಧ ಪ್ರಬಲ ಅಸ್ತ್ರ ಎಂದು ವೈದ್ಯಕೀಯ ರಂಗದ ತಜ್ಞರು ಹೇಳಿದ್ದಾರೆ. ಹೀಗಾಗಿ, ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಲಸಿಕೆಗೆ ಭಾರಿ ಬೇಡಿಕೆ ಏರ್ಪಟ್ಟಿದೆ. ಹಂತ-ಹಂತವಾಗಿ ಲಸಿಕೆ ಅಭಿಯಾನ ವೇಗವನ್ನೂ ಪಡೆಯುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಹೋಗಿ ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಿ, ಅದನ್ನು ಜನರಿಗೆ ವಿತರಿಸಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಸ್ಥಳೀಯ ಅಭಿವೃದ್ಧಿಗಾಗಿ ಶಾಸಕರಿಗೆ ನೀಡಲಾಗುವ ಹಣವನ್ನು ಸಂಗ್ರಹಿಸಿ ರಾಜ್ಯದ ಜನರಿಗೆ ಉಚಿತ ಲಸಿಕೆ ನೀಡಲು ಕೆಪಿಸಿಸಿಯಿಂದ 100 ಕೋಟಿ ರೂ. ನೀಡುವುದಾಗಿ ಅದು ಘೋಷಿಸಿದೆ. ಇದರ ಹಿಂದೆ ನಿಜವಾದ ಕಳಕಳಿ ಇದ್ದಲ್ಲಿ ಇಂಥ ಪ್ರಸ್ತಾವನೆ ಗಂಭೀರವಾಗಿ ಪರಿಗಣಿಸಬಹುದಿತ್ತೇನೋ. ಆದರೆ, ‘ರಾಜ್ಯ ಸರ್ಕಾರ ಲಸಿಕೆ ನೀಡಲು ವಿಫಲವಾಗಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದರಿಂದ, ಇದು ಬರೀ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗುತ್ತದೆ. ಲಸಿಕೆ ಅಭಿಯಾನ ವೇಗ ಪಡೆಯಬೇಕು ಎಂಬ ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಈ ಸಂದರ್ಭದಲ್ಲಿ ವಾಸ್ತವ ಸಂಗತಿಗಳನ್ನು ಗ್ರಹಿಸುವ ಅಗತ್ಯವಿದೆ. ಲಸಿಕೆಗಳ ಉತ್ಪಾದನೆ ಮತ್ತು ಪೂರೈಕೆಗೆ ಅದರದ್ದೇ ಆದ ಸಾಮರ್ಥ್ಯ ಇರುತ್ತದೆ. ಕೆಲವೇ ದಿನಗಳಲ್ಲಿ ಇಡೀ ರಾಜ್ಯ ಅಥವಾ ರಾಷ್ಟ್ರಕ್ಕೆ ಬೇಕಾಗುವಷ್ಟು ಲಸಿಕೆ ಉತ್ಪಾದಿಸಲು, ಪೂರೈಸಲು ಸಾಧ್ಯವಿಲ್ಲ. ಹಾಗಂತ ಲಸಿಕೆ ಕಂಪನಿಗಳು, ಸರ್ಕಾರ ಕೈಕಟ್ಟಿ ಕುಳಿತಿವೆ ಎಂದರ್ಥವಲ್ಲ. ಆಗಸ್ಟ್​ನಿಂದ ಡಿಸೆಂಬರ್​ವರೆಗೆ 216 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದ್ದು, ವರ್ಷಾಂತ್ಯದ ಹೊತ್ತಿಗೆ ಎಲ್ಲರಿಗೂ ಕರೊನಾ ತಡೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಈ ನಡುವೆ ಜಾಗತಿಕ ಟೆಂಡರ್ ಕರೆದು ತಕ್ಷಣವೇ ಲಸಿಕೆ ತರಿಸಿಕೊಳ್ಳಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ದೇಶೀಯ ಕಂಪನಿಗಳಿಗೆ ಮೂರು ಕೋಟಿ ಡೋಸ್ ಲಸಿಕೆಗೆ ಆದೇಶ ನೀಡಿದ್ದು, ಅದು ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಜಾಗತಿಕ ಟೆಂಡರ್ ಮೊರೆ ಹೋಗಿದೆ. 18ರಿಂದ 44 ವರ್ಷ ವಯೋಮಿತಿಯವರಿಗೆ ಸಾರ್ವಜನಿಕವಾಗಿ ನೀಡುವ ಲಸಿಕೆಯನ್ನು ರಾಜ್ಯ ಸರ್ಕಾರವೇ ಹಣ ನೀಡಿ ಖರೀದಿಸಬೇಕಾಗುತ್ತದೆ. ಸರ್ಕಾರ ಈಗಾಲೇ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡುವುದಾಗಿ ಘೋಷಿಸಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಭಾರತ್ ಬಯೋಟೆಕ್​ನಿಂದ ಕೊವ್ಯಾಕ್ಸಿನ್ ಉತ್ಪಾದನೆಯಾಗಲಿದೆ. ಹೀಗೆ ಹಲವು ನೆಲೆಯಲ್ಲಿ ಪ್ರಯತ್ನಗಳು ನಡೆಯುತ್ತಿದ್ದು, ಫಲಿತಾಂಶವೂ ಕಂಡುಬರುತ್ತಿದೆ. ಆದರೆ, ಲಸಿಕೆ ವಿತರಣೆ ವಿಷಯದಲ್ಲಿ ಒಂದು ಸಮರ್ಪಕ ವ್ಯವಸ್ಥೆ ರೂಪಿಸಿಕೊಂಡು, ಗೊಂದಲಗಳಿಗೆ ತೆರೆ ಎಳೆಯುವ ಕರ್ತವ್ಯ ಸರ್ಕಾರದ್ದು. ಒಟ್ಟಾರೆ ಲಸಿಕೆ ಅಭಿಯಾನದಂಥ ಸೂಕ್ಷ್ಮ ವಿಷಯ ರಾಜಕೀಯದ ದಾಳವಾಗದಿರಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts