More

    ಕೃಷಿ ಅಭಿಯಾನ ರಾಜ್ಯಕ್ಕೇ ಮಾದರಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಹೇಳಿಕೆ

    ಉಡುಪಿ: ಭಾರತೀಯತೆಯಲ್ಲಿ ಕೃಷಿ ಮತ್ತು ಋಷಿ ಸಂಸ್ಕೃತಿ ಪ್ರಧಾನ ಭಾಗ. ಪ್ರಕೃತಿಯ ಆರಾಧನೆಯ ಜತೆಯಲ್ಲಿ ಕೃಷಿ ಸಂಸ್ಕೃತಿ ಬೆಳೆದಿದೆ. ಹೀಗಾಗಿಯೇ ಮಣ್ಣು, ಕಲ್ಲು, ಮರ, ನೀರಿನಲ್ಲಿ ದೇವರನ್ನು ಕಂಡ ಏಕೈಕ ದೇಶ ಭಾರತ. ಪ್ರಸ್ತುತ ಉಡುಪಿಯ ಕೃಷ್ಣನ ನಾಡಿನಲ್ಲಿ ಕೃಷಿಗೆ ಪ್ರಧಾನ ದೈವ ಬಲರಾಮನ ಆರಾಧನೆ ನಡೆಯುತ್ತಿದ್ದು, ಈ ಅಭಿಯಾನ ರಾಜ್ಯಕ್ಕೇ ಮಾದರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
    ಪರ್ಕಳ ಸಣ್ಣಕ್ಕಿಬೆಟ್ಟಿನಲ್ಲಿ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಹಡಿಲು ಭೂಮಿ ಕೃಷಿ ಅಭಿಯಾನದಲ್ಲಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

    ಕೃಷಿಕನೂ ಋಷಿಗೆ ಸಮಾನ. ಹೀಗಾಗಿ ಗುರುಕುಲ ಪದ್ಧತಿಯಲ್ಲಿ ಕೃಷಿ ಸಂಸ್ಕೃತಿ ಅಡಕವಾಗಿತ್ತು. ಮೆಕಾಲೆ ಶಿಕ್ಷಣದಿಂದ ಯುವ ಜನತೆ ಕೃಷಿಯಿಂದ ದೂರವಾಗುತ್ತಿದ್ದು, ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಗದ್ದೆಗಳು ಹಡಿಲು ಬೀಳಲು ಇದು ಪ್ರಮುಖ ಕಾರಣ ಎಂದರು.
    ಬಿಜೆಪಿ ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ. ಈ ರಾಜ್ಯದಲ್ಲಿ ಮೊದಲ ರೈತರ ಬಜೆಟ್ ಮಂಡನೆ ಮಾಡಿದವರು ಯಡಿಯೂರಪ್ಪ. ರೈತ ಗೀತೆಗೆ ಗೌರವ ಕೊಟ್ಟವರು ಯಡಿಯೂರಪ್ಪ. ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಕಿಸಾನ್ ಸಮ್ಮಾನ್ ನಿಧಿಗೆ ಹೆಚ್ಚುವರಿ 4 ಸಾವಿರ ನೀಡಿದವರು ಯಡಿಯೂರಪ್ಪ ಎಂದು ಮುಖ್ಯಮಂತ್ರಿಯನ್ನು ಶ್ಲಾಘಿಸಿದರು.

    ಮಾಹೆ ಸಹ ಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಶಾಸಕ ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್‌ರಾಜ್ ಹೆಗ್ಡೆ, ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀನಿವಾಸ ಉಪಾಧ್ಯಾಯ, ಹೆರ್ಗ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಮೊದಲಾದವರು ಉಪಸ್ಥಿತರಿದ್ದರು.

    ಕೇದಾರ ಕಜೆ ಬ್ರಾಂಡ್
    ಹಡಿಲು ಭೂಮಿ ಕೃಷಿ ಯೋಜನೆಯಲ್ಲಿ ಸುಮಾರು 15 ಲಕ್ಷ ಕೆ.ಜಿ. ಭತ್ತ ಇಳುವರಿ ನಿರೀಕ್ಷಿಸಲಾಗಿದ್ದು, ಉಡುಪಿ ಕೇದಾರ ಕಜೆ ಹೆಸರಿನಲ್ಲಿ ಬ್ರಾಂಡ್ ಮಾಡಿ ಮಾರಾಟ ಮಾಡಲಾಗುವುದು. ಮುಂದಿನ ವರ್ಷ ರೈತರೇ ಸಾವಯವ ಭತ್ತ ಬೆಳೆಯಬೇಕು. ಅದನ್ನು ಟ್ರಸ್ಟ್ ವತಿಯಿಂದ 22 ರೂ. ನೀಡಿ ಖರೀದಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

    ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ
    ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ. ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ. ಪಕ್ಷದ ಹಿರಿಯರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದೇನೆ. ರಾಜಕೀಯಕ್ಕೆ ಬರುವ ಇಚ್ಛೆ ನನಗೆ ಇರಲಿಲ್ಲ. ಕೃಷಿಕನಾಗಿ ಬದುಕಬೇಕು ಎಂದು ಬಯಸಿದ್ದೆ. ಭಗವಂತ ಕೆಲವೊಮ್ಮೆ ಒಳ್ಳೆಯದು ಬರೆಯುತ್ತಾನೆ ಎಂದು ನಳಿನ್ ಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts