More

    ಕಾವೇರಿ ಅಜ್ಜಿಗೆ ಸಿಕ್ಕಿತು ಬೆಚ್ಚಗಿನ ಸೂರು!

    ಕುಂದಾಪುರ: ಅಜ್ಜಿಗೆ ಎಪ್ಪತ್ತೈದು.. ಸ್ವಾತಂತ್ರ್ಯೋತ್ಸವಕ್ಕೂ ಎಪ್ಪತ್ತೈದು. ಸ್ವಾತಂತ್ರೊೃೀತ್ಸವ ಸುವರ್ಣ ಮಹೋತ್ಸವ ಸವಿ ನೆನಪಿಗೆ ಅಜ್ಜಿ ಕನಸಿಗೆ ಮನೆ ಪ್ರವೇಶವಾಗಿದೆ. ಸಂಧ್ಯಾ ಸಮಯದಲ್ಲಿ ಮುರುಕಲು ಗೂಡಿನಿಂದ ಬೆಚ್ಚಗಿನ ಸೂರು ಸೇರಿದ ಕಾವೇರಜ್ಜಿ ಕನಸು ನನಸಾಗಿದೆ.

    ಕುಂದಾಪುರ ತಾಲೂಕು ನಾಡಾ ಗ್ರಾಮ ಹೊರ್ಣಿಮನೆ ಕಾವೇರಿ ಮೊಗವೀರ (75) ಏಕಾಂಗಿಯಾಗಿ ಭದ್ರತೆ ಇಲ್ಲದ ಪ್ಲಾಸ್ಟಿಕ್ ಸೀಟ್ ಹೊದಿಸಿದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಕಾವೇರಿ ಅಜ್ಜಿ ಜೀವನ ಆರಂಭವಾಗುವುದೇ ತೊಟ್ಟಿಲು ಮದುವೆ ಮೂಲಕ. ತನ್ನ ಪತಿ ಹೆಸರು ಗಣಪ ಎನ್ನೋದು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಆಡುವ ವಯಸ್ಸಲ್ಲೇ ವಿಧವೆ ಪಟ್ಟ ಸಿಕ್ಕಿತ್ತು.

    ಕೆಲಸ ಮಾಡುತ್ತಿದ್ದ ಕಾರ್ಖಾನೆ ಮುಚ್ಚಿದ್ದರಿಂದ ಮತ್ತೆ ಬೀದಿಗೆ ಬಂದರು. ಬಳಿಕ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸಿದರು. ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂರನೆಯವರು ಕಾವೇರಿ. ಒಬ್ಬರು ಸಹೋದರಿ ಮೃತಪಟ್ಟಿದ್ದಾರೆ. ಅಜ್ಜಿಗೆ ಕುಟುಂಬದ ಮೂಲವಾಗಿ 48 ಸೆಂಟ್ಸ್ ಜಾಗವಿದ್ದು, ಅದನ್ನ ನಾಲ್ವರಿಗೂ ಸಮನಾಗಿ ವಿಂಗಡಿಸಿ, ಅಜ್ಜಿ ಹೆಸರಲ್ಲಿ 12 ಸೆಂಟ್ಸ್ ಜಾಗ ವಿಭಜಿಸಿ ಹಕ್ಕುಪತ್ರ ಕೊಡಲಾಗಿದೆ. ಅಜ್ಜಿಯನ್ನು ಕೊನೆಕಾಲದಲ್ಲಿ ನೋಡಿಕೊಳ್ಳುವವರಿಗೆ ಮನೆ, ಜಾಗ ಸೇರುವಂತೆ ಮಾಡಲಾಗಿದೆ. ಅಜ್ಜಿಗೆ ಕಾಲು ಸರಿಯಾಗಿಲ್ಲ. ಮನೆ ವರಾಂಡಕ್ಕೆ ಬಾಗಿಲು ಅಳವಡಿಸಬೇಕಿದ್ದು, ಅದಕ್ಕೆ ದಾನಿಗಳ ನೆರವು ಯಾಚಿಸಲಾಗಿದೆ.

    ಕಾವೇರಿ ಅಜ್ಜಿ ಮನೆ ಕಷ್ಟದ ಬದುಕಿನ ಬಗ್ಗೆ ಗ್ರಾಪಂ ಸದಸ್ಯ ಉದಯ ಜೋಗಿ ಗಮನಕ್ಕೆ ತಂದಿದ್ದರು. ಗ್ರಾಮ ಪಂಚಾಯಿತಿ ಮನೆ ಮಂಜೂರು ಮಾಡಿ, 1.20 ಲಕ್ಷ ರೂ. ಅನುದಾನ ನೀಡಿತ್ತು. ಅಚ್ಚುಕಟ್ಟಾದ ಎಲ್ಲ ವ್ಯವಸ್ಥೆ ಇರುವ ಮನೆ ಕಟ್ಟಿ ಕೊಡಬೇಕು ನಿರ್ಧರಿಸಿ ದಾನಿಗಳ ಹಾಗೂ ಮೊಗವೀರ ಸಂಘಟನೆ ಸಹಕಾರದಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ಕಿಚನ್, ಬೆಡ್ ರೂಮ್, ಅಟ್ಯಾಚ್ ಬಾತ್ ರೂಮ್, ವರಾಂಡ ಎಲ್ಲ ಇರುವ ಮನೆ ನಿರ್ಮಿಸಿಕೊಟ್ಟು, ದೇಶದ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಿದ್ದೇವೆ.
    – ಪ್ರಭಾಕರ್, ಅಧ್ಯಕ್ಷ
    ಯುವ ಮೊಗವೀರ ಸಂಘಟನೆ ಹೆಮ್ಮಾಡಿ.

    ಗುಡಿಸಲಲ್ಲೇ ನನ್ನ ಜೀವನ ಕಳೆದು ಹೋಗುತ್ತದೆ ಎಂದುಕೊಂಡಿದ್ದೆ. ಆದರೆ ಮೊಗವೀರ ಸಂಘಟನೆ, ಹಾಡಿಗರಡಿ ದೈವಸ್ಥಾನ ಸಮಿತಿ, ನಾಗೇಶ್ ಕಾಂಚನ್, ಗ್ರಾಪಂ ಸದಸ್ಯ ಉದಯ ಜೋಗಿ ನನ್ನ ಕಷ್ಟಕ್ಕೆ ಬಂದಿದ್ದಾರೆ. ವಿಧವಾ ವೇತನ ಹಾಗೂ ಉಚಿತ ಅಕ್ಕಿ ಸಿಗುತ್ತಿದ್ದು ಹೇಗೋ ಜೀವನ ಕಳೆಯುತ್ತದೆ. ನನಗೆ ಹೊಸ ಮನೆ ಪ್ರವೇಶಿಸಿರುವುದು ಅತ್ಯಂತ ಸಂತಸದ ಕ್ಷಣ. ಸಂಧ್ಯಾ ಕಾಲದಲ್ಲಿರುವ ನನ್ನ ಕೊನೆಯ ದಿನಗಳ ಹೊಸ ಸೂರಲ್ಲಿ ಕಳೆಯಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞಳಾಗಿದ್ದೇನೆ.
    – ಕಾವೇರಿ ಮೊಗವೀರ
    ನಾಡಾ ಹೊರ್ಣಿಮನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts