ಪಡುಬಿದ್ರಿ: ನೂತನ ಕಾಪು ತಾಲೂಕು ಪಂಚಾಯಿತಿ ಪ್ರಥಮ ಅಧ್ಯಕ್ಷೆಯಾಗಿ ಬಿಜೆಪಿಯ ಶಶಿಪ್ರಭಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರೆ, ಕಾಂಗ್ರೆಸ್ ಪಕ್ಷದ ಯು.ಸಿ ಶೇಖಬ್ಬ ಉಪಾಧ್ಯಕ್ಷರಾಗಿ ಚುನಾಯಿತರಾದರು.
ಆಗಸ್ಟ್ 10ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಹೈಕೋರ್ಟ್ ತಡೆಯಾಜ್ಞೆ ಹಿನ್ನೆಲೆ ಫಲಿತಾಂಶ ಘೋಷಣೆ ತಡೆಹಿಡಿಯಲ್ಪಟ್ಟಿತ್ತು. ನ್ಯಾಯಾಲಯ ಆದೇಶದಂತೆ ಕಾಪು ಪುರಸಭೆ ಸಭಾಂಗಣದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಮಂಗಳವಾರ ಫಲಿತಾಂಶ ಘೋಷಣೆ ಮಾಡಿದರು.
ಉಡುಪಿ ತಾಪಂನಿಂದ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಪಂನಲ್ಲಿ ಕಾಂಗ್ರೆಸ್ 7 ಹಾಗೂ ಬಿಜೆಪಿಯ 5 ಸೇರಿ 12 ಸದಸ್ಯರಿದ್ದಾರೆ. ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾಗಿದ್ದ ತಾಪಂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಏಕ ಮಾತ್ರ ಅಭ್ಯರ್ಥಿ ಶಶಿಪ್ರಭಾ ಶೆಟ್ಟಿ ಆಯ್ಕೆ ಖಚಿತವಾಗಿತ್ತು. ಆದರೆ ಹಿಂದುಳಿದ ವರ್ಗ ಅ ಮಹಿಳೆ ಅಭ್ಯರ್ಥಿ ಇಲ್ಲದ ಪಕ್ಷದಲ್ಲಿ ಬಿ ಮಹಿಳೆ ಅಭ್ಯರ್ಥಿ ಆಯ್ಕೆಗೆ ಅವಕಾಶವಿದೆ ಎಂಬ ಚುನಾವಣಾಧಿಕಾರಿ ನೋಟಿಸ್‌ನ ಲಾಭ ಪಡೆದು ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯಾಗಿ ರೇಣುಕಾ ಪುತ್ರನ್ ಅವರನ್ನು ಕಣಕ್ಕಿಳಿಸಿ, ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಯು. ಸಿ. ಶೇಖಬ್ಬ ಮತ್ತು ಬಿಜೆಪಿಯಿಂದ ಕೇಶವ ಮೊಯ್ಲಿ ನಾಮಪತ್ರ ಸಲ್ಲಿಸಿದ್ದರು. ಅಂದು ಚುನಾವಣಾ ಪ್ರಕ್ರಿಯೆಯಲ್ಲಿ ರೇಣುಕಾ ಪುತ್ರನ್ ನಾಮಪತ್ರ ತಿರಸ್ಕೃತವಾಗಿತ್ತು. ಏಕಮಾತ್ರ ಅಭ್ಯರ್ಥಿಯಾಗಿ ಉಳಿದಿದ್ದ ಶಶಿಪ್ರಭಾ ಅಧ್ಯಕ್ಷೆಯಾಗಿ ಹಾಗೂ 7 ಸದಸ್ಯರ ಮತದಿಂದ ಕಾಂಗ್ರೆಸ್‌ನ ಶೇಖಬ್ಬ ಉಪಾಧ್ಯಕ್ಷರಾಗಿ ಚುನಾಯಿತರಾದರು.