More

    ಕಟ್ಟಿದ ಮನೆಗಳ ಹಂಚಿಕೆಯಿಲ್ಲ : ಕೊಡಗಿನಲ್ಲಿ ನೆರೆ ಸಂತ್ರಸ್ತರಿಗೆ ಕಟ್ಟಿಕೊಟ್ಟ ಶ್ರೇಯಸ್ಸು ಪಡೆಯಲು ನಾಯಕರ ಮೇಲಾಟ

    ರಾಮನಗರ: ಕೊಡಗಿನಲ್ಲಿ ಪ್ರವಾಹ ಪೀಡಿತರಿಗೆ ಮನೆ ಕಟ್ಟಿಕೊಟ್ಟ ಶ್ರೇಯಸ್ಸು ಪಡೆಯಲು ಹಾಲಿ ಮತ್ತು ಹಿಂದಿನ ಸರ್ಕಾರಗಳ ಪ್ರಮುಖರ ನಡುವೆ ಮಾತಿನ ಮೇಲಾಟ ನಡೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ನಿರ್ಮಾಣಗೊಂಡರೂ ಲಾನುಭವಿಗಳಿಗೆ ಹಸ್ತಾಂತರ ಮಾಡದೇ ಉಳಿದಿರುವ ಮನೆಗಳ ಬಗ್ಗೆ ಮಾತ್ರ ಯಾರೂ ಚಕಾರವೆತ್ತುತ್ತಿಲ್ಲ.

    ಹೌದು, ರಾಮನಗರದ ವಸತಿ ರಹಿತರಿಗೆ ಮನೆ ಕೊಡುವ ಕಾರ್ಯಕ್ಕೆ 2007ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ಆದರೆ ಮನೆಗಳು ನಿರ್ಮಾಣಗೊಂಡು ದಶಕ ಕಳೆಯುತ್ತಿದ್ದರೂ ಇವುಗಳನ್ನು ಲಾನು ಭವಿಗಳಿಗೆ ಹಂಚಿಕೆ ಮಾಡುವ ಪ್ರಹಸನಗಳು ನಡೆಯುತ್ತಿರುವುದು ಬಿಟ್ಟರೆ, ತಮ್ಮದೇ ಮನೆಗೆ ಗೃಹ ಪ್ರವೇಶ ಮಾಡಬೇಕು ಎನ್ನುವ ನೂರಾರು ಲಾನುಭವಿಗಳ ಆಸೆ ಕೇವಲ ಆಸೆಯಾಗಿಯೇ ಉಳಿದಿದೆ.

    ಉತ್ತರ ಏನ್ ಕೊಡ್ತೀರಿ?: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ವಸತಿ ನೀಡುವ ಯೋಜನೆಗೆ ಪ್ರತಿ ಮನೆ ಆಕಾಂಕ್ಷಿಗಳಿಂದ 5,100 ರೂ.ಗಳನ್ನು ಸಂಗ್ರಹಿಸಲಾಗಿತ್ತು. 1,430 ಜನ ಅರ್ಜಿ ಸಲ್ಲಿಸಿದ್ದರು. ನಗರದ ಹೊರವಲಯದಲ್ಲಿರುವ ದೊಡ್ಡಮಣ್ಣುಗುಡ್ಡೆ ಪ್ರದೇಶದಲ್ಲಿ ಒಟ್ಟು 30 ಬ್ಲಾಕ್‌ಗಳಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ 240 ಮನೆಗಳು ನಿರ್ಮಾಣಗೊಂಡಿವೆ. ಆದರೂ ಇವುಗಳನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡದ ಹಿನ್ನೆಲೆಯಲ್ಲಿ ಪಾಳು ಬಿದ್ದಿವೆ. ಮನೆಗಳ ಮೇಲ್ಛಾವಣಿ ಹಾಗೂ ಹಾಲ್‌ನಲ್ಲಿ ಹಾಕಿರುವ ಸಿಮೆಂಟ್ ಕಿತ್ತು ಬೀಳುತ್ತಿದೆ. ಈ ಬಗ್ಗೆ ಕೇಳಿದರೆ ಯಾರಿಂದಲೂ ಸರಿಯಾದ ಉತ್ತರ ಸಿಗುತ್ತಿಲ್ಲ.

    ಬರೀ ನಾಟಕ: ಮನೆ ಹಂಚಿಕೆ ವಿಚಾರದಲ್ಲಿ ರಾಜಕಾರಣಿಗಳು ನಾಟಕವಾಡುತ್ತಿದ್ದಾರೆ ಎನ್ನುವುದು ಬಹಳಷ್ಟು ಬಾರಿ ಮನವರಿಕೆಯಾಗಿದೆ. ಇದೇ ತಿಂಗಳ 10 ಮತ್ತು 12ರಂದು ಮನೆಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಒಮ್ಮೆ ಶಿಷ್ಟಾಚಾರ ಪಾಲನೆಯಾಗಲಿಲ್ಲ ಎನ್ನುವ ಕಾರಣಕ್ಕೆ ಮುಂದೂಡಲ್ಪಟ್ಟರೆ, ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರು ರಾಮನಗರಕ್ಕೆ ಬಂದರೂ ಮನೆ ಹಂಚಿಕೆ ಕಾರ್ಯದಿಂದ ದೂರವೇ ಉಳಿದರು. ಇನ್ನು ಇದಕ್ಕೂ ಮೊದಲು ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಾಮ್‌ಕೇವಾಸ್ತೆ ಎನ್ನುವಂತೆ ನಗರದ ಅಂಬೇಡ್ಕರ್ ಭವನದಲ್ಲಿ ಲಾಟರಿ ಮೂಲಕ ಕೆಲವು ಫಲಾನುಭವಿಗಳನ್ನು ಆಯ್ಕೆ ಮಾಡಿ ಹೋದರು. ಆದರೆ ಮನೆಗಳು ಮಾತ್ರ ಫಲಾನುಭವಿಗಳ ಕೈ ಸೇರಲೇ ಇಲ್ಲ.

    ಮನೆ ಕೊಡೋ ಕೆಲಸ ಮಾಡಿ: ಮನೆ ಕೊಡುವವರಿಗೆ ನಿರಾಶ್ರಿತರ ನೋವಿನ ಬಗ್ಗೆ ಅರಿವಿಲ್ಲ ಎನ್ನುವುದು ಅವರ ವರ್ತನೆಗಳಿಂದಲೇ ವ್ಯಕ್ತವಾಗುತ್ತಿದೆ. ನಮಗೆ ಮನೆ ಕೊಡಿ, ಬಾಡಿಗೆ ಮನೆ ಜೀವನ ಕಷ್ಟವಾಗಿದೆ, ಬರುವ ಚಿಕ್ಕಾಸಿನ ದುಡಿಮೆ ಬದುಕನ್ನು ಬರಡಾಗಿಸಿದೆ ಎನ್ನುವ ಅರ್ಜಿದಾರರ ಕೂಗು ರಾಜಕಾರಣಿಗಳ ಕಿವಿಗೆ ಮುಟ್ಟಿದಂತೆ ಕಾಣುತ್ತಿಲ್ಲ. ಈಗಲಾದರೂ ನೊಂದವರ ಬದುಕಿಗೆ ದನಿಯಾಗುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿದೆ. ಇಲ್ಲವಾದರೆ ಈಗಾಗಲೇ ಶಿಥಿಲಾವಸ್ಥೆಯತ್ತ ದಾಪುಗಾಲಿಟ್ಟಿರುವ ದೊಡ್ಡಮಣ್ಣು ಗುಡ್ಡೆಯ ಮನೆಗಳು ಮಣ್ಣು ಸೇರುವುದು ಖಂಡಿತ.

    ಕುಮಾರಣ್ಣ ಇತ್ತ ಗಮನಿಸಿ: ಮನೆ ಇಲ್ಲದವರಿಗೆ ಮನೆ ಕೊಡಬೇಕು ಎನ್ನುವುದು ಎಚ್.ಡಿ.ಕುಮಾರಸ್ವಾಮಿ ಅವರ ಕನಸು. ನಿಮಗೆ ರಾಜಕೀಯ ಜನ್ಮ ನೀಡಿದ ರಾಮನಗರದ ನೂರಾರು ಕುಟುಂಬಗಳು ಅರ್ಜಿ ಹಾಕಿ ಮನೆಗಾಗಿ ಕಾಯುತ್ತಿವೆ. ಕೊಡಗಿನಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ತೋರಿದ ಕಾಳಜಿಯನ್ನು ರಾಮನಗರದಲ್ಲೂ ಮನೆ ನಿರ್ಮಾಣಕ್ಕೆ ತೋರಿದ್ದೀರಿ. ಆದರೆ ಇವುಗಳ ಹಂಚಿಕೆಗೆ ಏಕಿಷ್ಟು ಮೀನಮೇಷ ಎನ್ನುವುದನ್ನು ನೀವೇ ಸಾರ್ವಜನಿಕವಾಗಿ ಬಹಿರಂಗ ಪಡಿಸಿ. ಇಲ್ಲವೇ ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ. ಇಲ್ಲವಾದರೆ ಮನೆ ಕೊಡಬೇಕು ಎನ್ನುವ ನಿಮ್ಮ ಕನಸು ಬಡವರ ಕಣ್ಣೀರಿನಲ್ಲಿ ಕರಗಿ ಹೋಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts