More

    ಕೆಎಟಿ ಆದೇಶಕ್ಕೂ ಕಿಮ್ಮತ್ತಿಲ್ಲ, ವರ್ಗಾವಣೆ ಸಿಗದೆ ‘ವಿಎ’ಗಳು ಕಂಗಾಲು

    ರವಿ ಎಸ್. ಬಳೂಟಗಿ ಹುಬ್ಬಳ್ಳಿ:
    ಗ್ರಾಮ ಲೆಕ್ಕಾಧಿಕಾರಿ (ವಿಎ) ಹುದ್ದೆಯನ್ನು ಗ್ರಾಮ ಆಡಳಿತಾಧಿಕಾರಿ ಎಂದು ಬದಲಿಸಿ ಭರ್ಜರಿ ನೇಮಕಾತಿಗಾಗಿ ಕಂದಾಯ ಇಲಾಖೆ ಸಿದ್ಧ್ದತೆ ನಡೆಸಿದ್ದರೆ, ಇನ್ನೊಂದೆಡೆ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಎಗಳು ವರ್ಗಾವಣೆಗಾಗಿ ಕಾದು ಕಾದು ಹೈರಾಣಾಗಿದ್ದಾರೆ.
    ಸೇವಾ ಜೇಷ್ಠತೆ ಪೂರೈಸಿರುವ ಹಾಗೂ ಸೇವಾಜೇಷ್ಠತೆ ಬಿಟ್ಟುಕೊಡಲು ತಯಾರಿದ್ದರೂ ವರ್ಗಾವಣೆ ಸಾಧ್ಯವಾಗುತ್ತಿಲ್ಲ. 8 ವರ್ಷ, 10 ವರ್ಷ ಸೇವೆ ಸಲ್ಲಿಸಿದರೂ ವರ್ಗಾವಣೆಗೆ ಕಂದಾಯ ಇಲಾಖೆ ಸಮ್ಮತಿಸುತ್ತಿಲ್ಲ. ನೌಕರರಾಗಿರುವ ಪತಿ-ಪತಿ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶವೇ ಇಲ್ಲದಂತಾಗಿದೆ. ಇತ್ತೀಚೆಗೆ ಡೆಪ್ಯೂಟೇಷನ್ ಮೇಲೆ ಸ್ವಂತ ಊರಿಗೆ ವರ್ಗವಾದವರನ್ನೂ ಮೂಲ ಸ್ಥಳಕ್ಕೆ ಮರು ನಿಯೋಜನೆ ಮಾಡಲಾಗಿದೆ. 25ಕ್ಕೂ ಹೆಚ್ಚು ಪತಿ-ಪತ್ನಿ ಪ್ರಕರಣ, ಡೆಪ್ಯೂಟೇಷನ್ ಸೇರಿ 400ಕ್ಕೂ ಹೆಚ್ಚು ಅಭ್ಯರ್ಥಿಗಳ ವರ್ಗಾವಣೆ ನಿರೀಕ್ಷೆಯಲ್ಲಿದ್ದಾರೆ.
    ಪತಿ- ಪತ್ನಿ ತಾಪತ್ರಯ: ಕಂದಾಯ ಇಲಾಖೆ ಧೋರಣೆಯಿಂದ ನೌಕರ ದಂಪತಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದಾರೆ. ಪತಿ ಒಂದು ಕಡೆ, ಪತ್ನಿ ಇನ್ನೊಂದು ಕಡೆ, ತಂದೆ- ತಾಯಿಗಳು ಮತ್ತೊಂದು ಊರಿನಲ್ಲಿದ್ದಾರೆ. ಇದರಿಂದ ಕೌಟುಂಬಿಕ ಸಮಸ್ಯೆ ಉಲ್ಬಣಿಸಿ ದಿಕ್ಕೇ ತೋಚದಂತಾಗಿದ್ದಾರೆ.
    ಪತಿ ಅಥವಾ ಪತ್ನಿ ಇವರಲ್ಲಿ ಯಾರಾದರೂ ಒಬ್ಬರಿಂದ ವರ್ಗಾವಣೆಗೆ ಕೋರಿಕೆ ಬಂದಲ್ಲಿ ಹುದ್ದೆಯ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಘಟಕದಲ್ಲಿನ ಅದೇ ಕೇಡರ್‌ನ ಸಮಾನ ಹುದ್ದೆಗೆ ಷರತ್ತುಗಳಿಗೊಳಪಟ್ಟು ವರ್ಗಾವಣೆ ಮಾಡಬಹುದು ಎಂದು ಸರ್ಕಾರ ವರ್ಗಾವಣೆ ನೀತಿಯಲ್ಲಿ ಹೇಳಿದೆ. ಇದರನ್ವಯ ಶಿಕ್ಷಕ ದಂಪತಿಗೆ ವರ್ಗಾವಣೆ ಸುಲಭವಾಗಿ ಸಿಗುತ್ತಿದೆ. ಪೊಲೀಸ್ ಇಲಾಖೆಯಲ್ಲೂ ಕೆಲ ದಿನಗಳ ಹಿಂದೆ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಗೆ ಗೃಹ ಸಚಿವರು ಆದೇಶಿಸಿದ್ದಾರೆ. ಶಿಕ್ಷಕರು, ಪೊಲೀಸರಿಗೆ ಇರುವ ಅವಕಾಶ ನಮಗೇಕಿಲ್ಲ?. ಎಂಬುದು ಗ್ರಾಮ ಲೆಕ್ಕಾಧಿಕಾರಿಗಳ ಪ್ರಶ್ನೆ.
    ಕೆಎಟಿಗೂ ಮೊರೆ: ವಿಎಗಳು ಹಾಲಿ ಕೆಲಸ ಮಾಡುತ್ತಿರುವ ಸ್ಥಳದಿಂದ ಬಿಡುಗಡೆಗಾಗಿ ಆಯಾ ತಹಸೀಲ್ದಾರ್, ಜಿಲ್ಲಾಧಿಕಾರಿ ಸಹಮತ ನೀಡಿರುವ ಪತ್ರವನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ. ಕೆಲವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಬಾಗಿಲು ತಟ್ಟಿದ್ದು, ಅರ್ಜಿದಾರರ ಪರವಾಗಿಯೇ ಕೆಎಟಿ ಆದೇಶವನ್ನೂ ನೀಡಿದೆ. ಆದರೆ, ಕೆಎಟಿ ಆದೇಶವನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಂದಾಯ ಸಚಿವರು, ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಅನೇಕರು ಹುದ್ದೆ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

    ಕೇಡರ್ ತೊಡಕು
    ಗ್ರಾಮ ಲೆಕ್ಕಾಧಿಕಾರಿಗಳನ್ನು ಆಯಾ ಜಿಲ್ಲಾಧಿಕಾರಿಯೇ ನೇಮಕಾತಿ ಮಾಡಿಕೊಳ್ಳುತ್ತಾರೆ. ವಿಎಗಳು ಯಾವ ಜಿಲ್ಲೆಯಲ್ಲಿ ನೇಮಕವಾಗಿದ್ದಾರೋ ಅದೇ ಜಿಲ್ಲೆಯಲ್ಲಿ ಕೆಲಸ ಮಾಡಬೇಕಿದೆ. ಅವರು ಬಡ್ತಿ ಪಡೆದು ಕಂದಾಯ ನಿರೀಕ್ಷಕ (ಆರ್‌ಐ) ಹುದ್ದೆಗೇರಿದರೂ ಇದೇ ನಿಮಯ. ಶಿರಸ್ತೇದಾರ್ ಆದಾಗ ವಿಭಾಗದ ವ್ಯಾಪ್ತಿಯಲ್ಲಿ ಮಾತ್ರ ವರ್ಗಾವಣೆಗೆ ಅವಕಾಶವಿದೆ. ಅಲ್ಲಿಂದ ಉಪ ತಹಸೀಲ್ದಾರ್ ಹುದ್ದೆಗೆ ಬಡ್ತಿ ಹೊಂದಿದಾಗ ಅಭ್ಯರ್ಥಿಯ ಕೇಡರ್ ಬದಲಾಗುತ್ತದೆ. ಆಗ ಕರ್ನಾಟಕದ ಯಾವ ಜಿಲ್ಲೆಗೆ ಬೇಕಾದರೂ ವರ್ಗಾವಣೆ ಪಡೆಯಬಹುದು ಎನ್ನುತ್ತವೆ ಕಂದಾಯ ಇಲಾಖೆಯ ಮೂಲಗಳು.

    ನನಗೆ ನಾಲ್ಕು ವರ್ಷ ಹೆಣ್ಣುಮಗಳು, ಏಳು ತಿಂಗಳ ಗಂಡು ಮಗುವಿದೆ. ಪತಿಯೂ ಸರ್ಕಾರಿ ನೌಕರ. ಅತ್ತೆಗೆ 83 ವರ್ಷವಾಗಿದ್ದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಊರಿಗೆ ಹೋಗಿ ಬರಲು ಬಹಳ ಪ್ರಯಾಸವಾಗುತ್ತದೆ. ಪತಿ ನನ್ನೊಂದಿಗೆ ಬಂದಿರಲು ಆಗುತ್ತಿಲ್ಲ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಕಷ್ಟ ಅನುಭವಿಸುತ್ತಿದ್ದೇನೆ. ಹೀಗಾಗಿ ಶಿಶುಪಾಲನೆ ರಜೆ ಪಡೆದಿದ್ದೇನೆ.
    -ಮಹಿಳಾ ಗ್ರಾಮ ಲೆಕ್ಕಾಧಿಕಾರಿ

    ನಮ್ಮ ಊರಿನಿಂದ 500 ಕಿ.ಮೀ. ದೂರದ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದೇನೆ. ಏಳು ವರ್ಷಗಳ ಸೇವೆ ಪೂರೈಸಿದ್ದೇನೆ. ಪತಿಯೂ ಸರ್ಕಾರಿ ನೌಕರಿಯಲ್ಲಿದ್ದು ನಮ್ಮ ತಂದೆ-ತಾಯಿಗೆ ಆರೋಗ್ಯ ಸಮಸ್ಯೆಯಿದೆ. ಪತಿ ವಾಸಿಸುತ್ತಿರುವ ಜಿಲ್ಲೆಗೆ ಅಂತರ್ ಜಿಲ್ಲಾ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದು, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಮ್ಮತಿ ನೀಡಿದ್ದಾರೆ. ಆದರೆ ಸರ್ಕಾರದ ಮಟ್ಟದಲ್ಲಿ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಮಾನವೀಯ ನೆಲೆಯಲ್ಲಾದರೂ ನಮ್ಮ ಅರ್ಜಿ ಪರಿಗಣಿಸಬೇಕು.
    -ಮಹಿಳಾ ಗ್ರಾಮ ಲೆಕ್ಕಾಧಿಕಾರಿ

    ಕೋಟ್-3
    ಗ್ರಾಮ ಲೆಕ್ಕಾಧಿಕಾರಿಗಳನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡುವಂತಿಲ್ಲ. ಹೀಗಾಗಿ ಆರು ತಿಂಗಳಿಂದ ಯಾವುದೇ ವರ್ಗಾವಣೆ ಮಾಡಿಲ್ಲ. ಹಿಂದೆ ಕೆಲವರು ಡೆಪ್ಯೂಟೇಷನ್ ಮೇಲೆ ಬೇರೆ ಜಿಲ್ಲೆಗೆ ಹೋಗಿರಬಹುದು. ನಿಯಮಾವಳಿ ಪ್ರಕಾರ ವರ್ಗಾವಣೆ ಸಾಧ್ಯವಿಲ್ಲ. ಕೆಎಟಿ ಆದೇಶ ನನ್ನ ಗಮನಕ್ಕೆ ಬಂದಿಲ್ಲ. ಕೆಎಟಿ ವರ್ಗಾವಣೆ ಪರವಾಗಿ ಆದೇಶ ಹೊರಡಿಸಿದ್ದರೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ.
    -ರಾಜೇಂದ್ರಕುಮಾರ ಕಟಾರಿಯಾ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts