More

    ಹರಿದು ಬರುತ್ತಿದೆ ಜನಸಾಗರ

    ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಬ್ರಹ್ಮಕಲಶೋತ್ಸವಕ್ಕೆ ಕಳೆದ ನಾಲ್ಕು ದಿನದಿಂದ ಜನಸಾಗರವೇ ಹರಿದು ಬರುತ್ತಿದೆ. ಪಾರ್ಕಿಂಗ್, ದೇವಳ ಒಳಭಾಗ, ಮತ್ತಿತರ ಕಡೆ ಯಾವುದೇ ಸಮಸ್ಯೆಯಾಗದ ರೀತಿ ಜನಸಂದಣಿ ನಿಭಾಯಿಸಲು ವ್ಯವಸ್ಥೆಗೊಳಿಸಲಾಗಿದೆ.
    ಶುಕ್ರವಾರ ಮಧ್ಯಾಹ್ನ ಸುಮಾರು 50 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ. 20 ಸಾವಿರಕ್ಕಿಂತಲೂ ಹೆಚ್ಚು ಜನ ಉಪಹಾರ ಸ್ವೀಕರಿಸಿದ್ದಾರೆ. ಪ್ರತೀ ದಿನ ರಾತ್ರಿ ಆಡಳಿತ ಮಂಡಳಿ ಮತ್ತು ಸಂಬಂಧಪಟ್ಟ ಸಮಿತಿಗಳ ಜತೆ ಸಭೆ ನಡೆಸಲಾಗುತ್ತಿದೆ. ಉಗ್ರಾಣ ತುಂಬಿ ತುಳುಕುತ್ತಿದೆ.

    ಸ್ವಚ್ಛತೆಗೆ ಆದ್ಯತೆ: ಪಾಕಶಾಲೆ ಹಾಗೂ ಭೋಜನ ಶಾಲೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಅದಕ್ಕಾಗಿಯೇ ನೂರಾರು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಊಟ ಹಾಗೂ ಫಲಹಾರದ ತಟ್ಟೆ ಬಟ್ಟಲುಗಳಿಗೆ ಸುಮಾರು 100ಕ್ಕಿಂತಲೂ ಹೆಚ್ಚು ಕಸದ ಬುಟ್ಟಿ ಇರಿಸಲಾಗಿದ್ದು, ಅದನ್ನು ವಾಹನದ ಮೂಲಕ ಸುಮಾರು ಒಂದು ಕಿ.ಮೀ ದೂರದಲ್ಲಿ ನಿರ್ಮಿಸಿದ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ಸಾಗಿಸಲಾಗುತ್ತಿದೆ.

    ಪತಂಜಲಿ ಯೋಗ ಸಮಿತಿಯ 500 ಮಂದಿ ಸ್ವಯಂಸೇವಕರು ಮುಂಜಾನೆ 5 ಗಂಟೆಗೆ ಕಟೀಲು ಕಾಲೇಜಿನಿಂದ ರಥಬೀದಿಯ ದೇವಳದ ಸುತ್ತಮುತ್ತ ಸ್ವಚ್ಛತೆ ಮಾಡುತ್ತಿದ್ದಾರೆ. ಭೋಜನ ಶಾಲೆಯಲ್ಲಿಯೂ ನಿರಂತರ ಸ್ವಚ್ಛತೆಯತ್ತ ಗಮನಹರಿಸಿದ್ದಾರೆ. ಪ್ರತೀ ರಾತ್ರಿ ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ 70ಕ್ಕೂ ಮಿಕ್ಕಿ ಕರಸೇವಕರು ಸ್ವಚ್ಛತೆಯನ್ನು ಕಾಪಾಡುವಲ್ಲಿ ಶ್ರಮವಹಿಸುತ್ತಿದ್ದಾರೆ. ಸ್ಥಳೀಯ ಸಮಿತಿ ಹಾಗೂ ಗ್ರಾಮಸ್ಥರು ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ಹಗಲಿರುಳು ಶ್ರಮ ವಹಿಸುತಿದ್ದಾರೆ.

    ಪ್ಲಾಸ್ಟಿಕ್ ಬಳಕೆಗೆ ಕಡಿವಾಣ: ಬ್ರಹ್ಮಕಲಶದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಪ್ರಯತ್ನಿಸಲಾಗಿದೆ. ಪೇಪರ್ ಲೋಟ, ತಟ್ಟೆ ಬಳಸಲಾಗುತ್ತಿದೆ. ನೀರಿನ ಬಾಟಲಿ ಬದಲು ನೀರಿನ ಜಾರ್ ಬಳಸಲಾಗುತ್ತಿದೆ. ಊಟ ಹಾಗೂ ಉಪಹಾರಕ್ಕೆ ಹಾಳೆ ತಟ್ಟೆ ಬಟ್ಟಲು ಪ್ಲೇಟ್ ಬಳಸಲಾಗುತ್ತಿದೆ. ಕಾಫಿ, ಚಾ, ಪಾನೀಯಗಳಿಗೂ ಕಾಗದದ ಲೋಟಗಳನ್ನೇ ಬಳಸಲಾಗುತ್ತಿದೆ. ಸಭಾ ಕಾರ್ಯಕ್ರಮದ ವೇದಿಕೆಯಲ್ಲೂ ಪಾಸ್ಟಿಕ್ ಬಾಟಲಿ ಬಳಸದೆ ಹಿತ್ತಾಳೆಯ ಮಗ್‌ಗಳಲ್ಲಿ ನೀರಿನ ವ್ಯವಸ್ಥೆ ಹಾಗೂ ಪ್ರಸಾದ ಮತ್ತಿತರ ಅಗತ್ಯತೆಗಳಿಗೆ ಬಟ್ಟೆಯ ಚೀಲಗಳನ್ನೇ ಬಳಸಲಾಗುತ್ತಿದೆ. ಪಂಚಕಜ್ಜಾಯಕ್ಕೂ ಪ್ಲಾಸ್ಟಿಕ್ ಲಕೋಟೆ ಬದಲು ಕಾಗದದ ಲಕೋಟೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts