More

    ನಾಳೆ ಕಟೀಲು ಮೇಳಗಳ ಕೊನೇ ಸೇವೆಯಾಟ

    ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ವರ್ಷದ ತಿರುಗಾಟಕ್ಕೆ ಪತ್ತನಾಜೆಯ ಮರುದಿನ ಮೇ 25ರಂದು ಸಾಂಪ್ರದಾಯಿಕ ರೀತಿಯಲ್ಲಿ ತೆರೆಬೀಳಲಿದೆ.
    ಮೇಳಗಳು ಮಾ.18ರಿಂದ ತಿರುಗಾಟ ನಿಲ್ಲಿಸಿದ್ದು, 67 ದಿನಗಳಿಂದ ಕಟೀಲು ದೇವಳ ವಠಾರದಲ್ಲಿರುವ ಕಲಾವಿದರ ವಿಶ್ರಾಂತಿ ಸಭಾಂಗಣದ ಚೌಕಿಯಲ್ಲಿ ಆರೂ ಮೇಳಗಳ ದೇವರಿಗೆ ತ್ರಿಕಾಲ ಪೂಜೆ ನಡೆಯುತ್ತಿತ್ತು. ಅಲ್ಲದೆ ಸಾಯಂಕಾಲ ಸೀಮಿತ ಕಲಾವಿದರಿಂದ ಬಾಲಗೋಪಾಲ ವೇಷಗಳಿಂದ ಮೇಳದ ದೇವರಿಗೆ ಆರತಿ ಬೆಳಗಿ ಸೇವೆ ನಡೆಯುತ್ತಿತ್ತು.

    ಸೀಮಿತ ಕಲಾವಿದರಿಂದ ಸೇವೆ: ಸೋಮವಾರ ಚೌಕಿಪೂಜೆ ಬಳಿಕ ದೇಗುಲ ವಠಾರದಲ್ಲಿ ಸಂಪ್ರದಾಯದಂತೆ ಕನಿಷ್ಠ ಹನ್ನೆರಡು ಸ್ತ್ರೀ, ಪುರುಷ ವೇಷಗಳನ್ನೊಳಗೊಂಡು ಶ್ರೀನಿವಾಸ ಕಲ್ಯಾಣ ಯಕ್ಷಗಾನ ಸೇವೆಯಾಟ ಸೀಮಿತ ಕಲಾವಿದರಿಂದ ನಡೆಯಲಿದೆ. ಬಾಲಗೋಪಾಲ ವೇಷ ಆರೂ ಮೇಳಗಳ ಹನ್ನೆರಡು ಕಲಾವಿದರು ಹಾಗೂ ಹಿಮ್ಮೇಳದ ಒಂದು ತಂಡದ ಹೊರತಾಗಿ ಭಕ್ತರಿಗೆ, ಕಲಾವಿದರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ದೇಗುಲದ ಒಳಗಡೆ ಗೆಜ್ಜೆ ಬಿಚ್ಚುವ ಪ್ರಕ್ರಿಯೆ ನಡೆಯಲಿವೆ.

    402 ಆಟ ರದ್ದು: ಆರು ಮೇಳಗಳು ಪ್ರತಿವರ್ಷ 900ರಷ್ಟು ಪ್ರದರ್ಶನ ನೀಡುತ್ತಿದ್ದವು. ಈ ಬಾರಿ 118 ದಿನದ ತಿರುಗಾಟದಲ್ಲಿ 708 ಪ್ರದರ್ಶನಗಳಾಗಿವೆ. 67 ದಿನಗಳ ಪ್ರದರ್ಶನ, 402 ಸೇವೆಯಾಟಗಳು ರದ್ದುಗೊಂಡಿವೆ.

    77 ಲಕ್ಷ ರೂ. ಆದಾಯ: ದೇಗುಲಕ್ಕೆ ಕಳೆದ ಬಾರಿ ಸುಮಾರು 1 ಕೋಟಿ ರೂ. ಆದಾಯ ಮೇಳಗಳಿಂದ ಬಂದಿದ್ದರೆ, ಈ ಬಾರಿಯ ಆದಾಯ ಸುಮಾರು 77 ಲಕ್ಷ ರೂ. ತಿರುಗಾಟ ನಿಂತ ದಿನದಿಂದ ಪತ್ತನಾಜೆವರೆಗೆ ಸಿಬ್ಬಂದಿಯ ಸರಾಸರಿ ವೇತನವನ್ನು ಭರಿಸುವುದಾಗಿ ದೇಗುಲದ ಆಡಳಿತ ಮಂಡಳಿ ಘೋಷಿಸಿತ್ತು. 6 ಮೇಳಗಳಲ್ಲಿ 300ರಷ್ಟು ಕಲಾವಿದರು, ಸಹಾಯಕರಿದ್ದು, ವೇತನಕ್ಕಾಗಿ 75 ಲಕ್ಷ ರೂ.ಗಳನ್ನು ಇದಕ್ಕಾಗಿ ಮೀಸಲಿಡಲಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts