More

    ಸಕ್ಕರೆನಾಡಲ್ಲಿ ವರ್ಷಾಂತ್ಯಕ್ಕೆ ನುಡಿಜಾತ್ರೆಗೆ ಸಿದ್ಧತೆ: ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ನೇತೃತ್ವದಲ್ಲಿ ಸಭೆ

    ಮಂಡ್ಯ: ಡಿಸೆಂಬರ್ ಎರಡನೇ ವಾರದ ಕೊನೆಯ ಮೂರು ದಿನ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಅಂತೆಯೇ ಈ ಆರ್ಥಿಕ ವರ್ಷದಲ್ಲಿಯೇ ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಆಯೋಜಿಸಲಾಗುವುದು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವು ಮಂಡ್ಯದಲ್ಲಿ ಆಗಬೇಕು ಎಂಬ ನಿರ್ಧಾರವನ್ನು ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ತೀರ್ಮಾನಿಸಲಾಗಿದೆ. ಇದರ ಅಂಗವಾಗಿ ಮೊದಲನೆಯ ಪೂರ್ವಭಾವಿ ಸಭೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಷತ್‌ನ ಪದಾಧಿಕಾರಿಗಳು ಮತ್ತು ಕನ್ನಡಪರ ಸಂಘಟನೆಗಳೊಂದಿಗೆ ಜತೆ ಚರ್ಚಿಸಲಾಗುವುದು ಎಂದರು.
    87ನೇ ಸಮ್ಮೇಳನಕ್ಕೆ 87 ಕನ್ನಡ ಪುಸ್ತಕ ಬಿಡುಗಡೆಗೊಳಿಸಲಾಗುವುದು. ಕನ್ನಡದ 87 ಸಾಧಕರನ್ನು ಸನ್ಮಾನಿಸಲಾಗುವುದು. ಸಮ್ಮೇಳನಕ್ಕೂ ಮೊದಲು ಕಾರ್ಯಕ್ರಮಕ್ಕೆ ಪ್ರಚಾರ ನೀಡಲು ಭುವನೇಶ್ವರಿ ಭಾವಚಿತ್ರವುಳ್ಳ ಕನ್ನಡ ರಥದ ರಾಜ್ಯಾದ್ಯಂತ ಮೆರವಣಿಗೆ ಮಾಡಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಹಾವೇರಿಯಲ್ಲಿ ಐತಿಹಾಸಿಕ ಸಮ್ಮೇಳನ ನಡೆಸಿದ್ದೇವೆ. ಆದರೂ ಕೆಲ ಲೋಪದೋಷಗಳಾದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮರುಕಳಿಸಬಾರದೆಂದು ಕಾರ್ಯಯೋಜನೆ ರೂಪಿಸಿಬೇಕಿದೆ. ಮುಂದಿನ ತಿಂಗಳಿನಿಂದಲೇ ಸಿದ್ಧತೆ ನಡೆಸಲಾಗುವುದು ಎಂದು ವಿವರಿಸಿದರು.
    ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಸಮ್ಮೇಳನಕ್ಕೆ ಮಂಡ್ಯ ಆಯ್ಕೆಯಾಗಿರುವುದು ತುಂಬಾ ಸಂತಸದ ವಿಚಾರ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳು, ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳ ತಂಡವಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹಿಂದಿನ ಸಮ್ಮೇಳನಗಳ ದಾಖಲೆಯನ್ನು ಮುರಿಯುತ್ತೇವೆ. ಪ್ರತಿ ಹಂತದಲ್ಲಿಯೂ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಲಾಗುವುದು ಎಂದರು.
    ದೇಶ, ವಿದೇಶ, ರಾಜ್ಯದ ವಿವಿಧೆಡೆಯಿಂದ ಬರುವ ಅತಿಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸೌಲಭ್ಯ ಒದಗಿಸಲಾಗುವುದು. ಪ್ರಮುಖವಾಗಿ ಜಾಗದ ಅವಶ್ಯಕತೆ ಇರುವುದರಿಂದ ಪರಿಶೀಲನೆ ನಡೆಸಲಾಗುವುದು. ವಿಧಾನಸಭಾ ಚುನಾವಣೆ ಕೆಲಸ ಮುಗಿಯುತ್ತಿದ್ದಂತೆ ಸಮ್ಮೇಳನದ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು. ಇನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳು, ಪರಿಷತ್ ಹಾಗೂ ಸಂಘಟನೆಗಳೊಂದಿಗೆ ಸಭೆ ಮಾಡಿ ಸರ್ವಾನುಮತ ಪಡೆದುಕೊಂಡೇ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
    ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಮಾತನಾಡಿ, ಕೇಂದ್ರ ಕಸಾಪ ಹಾಗೂ ಜಿಲ್ಲಾಡಳಿತದ ನಡುವಿನ ಸೇತುವೆಯಾಗಿ ಜಿಲ್ಲಾ ಕಸಾಪ ಕಾರ್ಯನಿರ್ವಹಿಸಲಿದೆ. ಸಮ್ಮೇಳನಕ್ಕೆ ಜಾಗ ಹಾಗೂ ಆಗಮಿಸುವವರಿಗೆ ವಸತಿ ಪ್ರಮುಖವಾಗಿರುವುದರಿಂದ ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಆಸಕ್ತಿ ವಹಿಸಬೇಕು. ಹೋಟೆಲ್ ಉದ್ಯಮಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಈ ಕುರಿತು ಚರ್ಚೆ ಮಾಡಬೇಕಿದೆ ಎಂದು ಮನವಿ ಮಾಡಿಕೊಂಡರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗಾರಾಜು, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಸ್.ಮುದ್ದೇಗೌಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಸ್ಥರು ಹಾಗೂ ಇಲಾಖಾ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts