More

    ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡಾಭಿಮಾನ ಹೆಚ್ಚಳ: ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಪ್ರಾಯ

    ಮಂಡ್ಯ: ಕನ್ನಡಿಗರು ಒಂದೆಡೆ ಸೇರಲು ಕನ್ನಡ ಸಾಹಿತ್ಯ ಪರಿಷತ್ ಕಾರಣವಾಗಿದೆ. ಮಾತ್ರವಲ್ಲದೆ ಜನರಲ್ಲಿ ಕನ್ನಡಾಭಿಮಾನ ಹೆಚ್ಚಿಸಲು ಪರಿಷತ್ ಕಾರಣವಾಗಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಭಿಪ್ರಾಯಪಟ್ಟರು.
    ನಗರದ ಕಸಾಪ ಕಚೇರಿಯಲ್ಲಿ ಆಯೋಜಿಸಿದ್ದ ಮಂಡ್ಯ ತಾಲೂಕು ಕಸಾಪ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕವಿಗಳು ಸಾಹಿತ್ಯದ ಮೂಲಕ ಇತಿಹಾಸವನ್ನು ಪರಿಚಯಿಸುತ್ತಾರೆ. ಸಾಹಿತಿಗಳು ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುತ್ತಾರೆ. ಇದು ಓದುಗರನ್ನು ಮೇಲ್ಮಟ್ಟಕ್ಕೆ ಕರೆದೊಯ್ಯುತ್ತದೆ. ಸಾಹಿತಿಗಳು ಲೌಕಿಕ ಅನುಭವಕ್ಕೆ ಅಲೌಕಿಕ ಬೆಳಕನ್ನು ನೀಡುತ್ತಾರೆ. ಇದರಿಂದ ಜೀವನಕ್ಕೆ ಒಂದು ಸತ್ವ ದೊರೆಯುತ್ತದೆ. ಕನ್ನಡ ಭಾಷೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದುವರೆಸುತ್ತಾ ಬಂದಿದೆ ಎಂದು ನುಡಿದರು.
    ಇಂದಿನ ಸಾಮಾಜಿಕ ಪರಿಸರ ವಿಸ್ತಾರವಾಗುತ್ತಿದ್ದು, ಯುವಜನತೆ ಮೊಬೈಲ್ ಮತ್ತು ಟಿವಿ, ಕಂಪ್ಯೂಟರ್ ಪರದೆಗಳ ಮೊರೆ ಹೋಗಿದ್ದಾರೆ. ಇದರಿಂದಾಗಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯವನ್ನು ಕ್ರಿಯಾತ್ಮಕವಾಗಿ ಮುಂದುವರೆಸಲು ಶಾಲಾ ವಿದ್ಯಾರ್ಥಿಗಳ ಕಡೆ ಹಾಗೂ ಕನ್ನಡದ ಅಭಿವೃದ್ಧಿಗಾಗಿ ಸಾಹಿತ್ಯ ಮನೆ ಮನೆಗಳತ್ತ ಸಾಗುವಂತಹ ಕಾರ್ಯಕ್ರಮ ರೂಪಿಸಬೇಕು. ಬಹುತೇಕ ಸಾಹಿತಿಗಳು ಶಿಕ್ಷಣ ತಜ್ಞರಾಗಿದ್ದಾರೆ. ಶಿಕ್ಷಣದ ಮೂಲಕ ಕನ್ನಡ ಬೆಳೆಸಬೇಕು ಎಂದು ತಿಳಿಸಿದರು.
    ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ಸಾಹಿತ್ಯವನ್ನು ತಾಲೂಕಿಗೆ ವಿಸ್ತರಿಸಲು ಏನೇನು ಮಾಡಬೇಕು ಎಂದು ಯೋಚಿಸಿ ಸಾಹಿತ್ಯದ ಮೇಲಿನ ಪ್ರೀತಿ ಇಟ್ಟುಕೊಂಡು ಮುಂದುವರಿಯಬೇಕು. ಕಾಲಕ್ಕನುಸಾರವಾಗಿ ಕೆಲಸ ಮಾಡಬೇಕು. ಸಾರ್ವಜನಿಕ ಕಾರ್ಯಕ್ರಮಗಳಿಗಿಂತ ಶಾಲೆ ಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮ ನಡೆಸುವುದು ಉಚಿತ. ಇದರಿಂದ ಮುಂದಿನ ಜನಾಂಗದ ಮೂಲಕ ಕನ್ನಡ ತೆಗೆದುಕೊಂಡು ಹೋಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
    ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಮಂಜು ಮುತ್ತೇಗೆರೆ ಕನ್ನಡ ಧ್ವಜವನ್ನು ನೂತನ ಅಧ್ಯಕ್ಷ ಚಂದ್ರಲಿಂಗು ಗಾಣದಾಳು ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಧನಂಜಯ ದರಸಗುಪ್ಪೆ, ಎಂ.ಬಿ.ರಮೇಶ್ ವಿದ್ಯಾನಗರ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರ ಕಸಾಪ ಅಧ್ಯಕ್ಷೆ ಸುಜಾತಾ ಕೃಷ್ಣ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ನಾಗೇಶ್, ಮಳವಳ್ಳಿ ತಾಲೂಕು ಕಸಾಪ ಅಧ್ಯಕ ಚೇತನ್ ಕುಮಾರ್ ನೆಟ್ಕಲ್, ಶ್ರೀರಂಗಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಬಲ್ಲೇನಹಳ್ಳಿ, ಉಪನ್ಯಾಸಕ ಲೋಕೇಶ್ ಬೆಕ್ಕಳಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts