More

    ದೇಹದಲ್ಲಿ ಹನಿ ರಕ್ತ ಇರುವವರಗೂ ಕನ್ನಡಕ್ಕಾಗಿ ಹೋರಾಟ: ಟಿ.ಎ.ನಾರಾಯಣಗೌಡ

    ಬೆಂಗಳೂರು : ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂಬ ಹಿಂದಿ ಮೂಲಭೂತವಾದಿಗಳ ಪ್ರಯತ್ನವನ್ನು ಸವಾಲಾಗಿ ಸ್ವೀಕರಿಸಲಾಗಿದ್ದು, ದೇಹದಲ್ಲಿ ಹನಿ ರಕ್ತ ಇರುವವರೆಗೂ ಕನ್ನಡ ನಾಡು ನುಡಿಗಾಗಿ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.

    ಕನ್ನಡ ಸಾಹಿತ್ಯ ಪರಿಷತ್ತಿ (ಕಸಾಪ) ನಲ್ಲಿ ಮಂಗಳವಾರ ನಡೆಸಿ ಕಾರ್ಯಕ್ರಮದಲ್ಲಿ ‘ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

    ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ನಗರದ ಪೇಟೇ ಬೀದಿಗಳಲ್ಲಿ ಇಂದು ಹಿಂದಿ ಮೂಲಭೂತವಾದಿಗಳೇ ತುಂಬಿಕೊಂಡಿದ್ದಾರೆ. ಅವರಿಗೆ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಬಳಸಿ ಎಂದು ಹೇಳಿದರೆ ರಾಜಧಾನಿಯಲ್ಲಿ ಕನ್ನಡಿಗರು ಕೇವಲ ಶೇ. 30 ಇದ್ದೀರಿ, ನಾವು ಬಹುಸಂಖ್ಯಾತರು. ಮುಂದೆ ನಿಮ್ಮ ಭಾಷೆಯನ್ನು ಹೇಗೆ ಕಾಪಾಡಿಕೊಳ್ಳುತ್ತೀರಿ ಎಂದು ಪ್ರಶ್ನಿಸುವಷ್ಟು ಉದ್ಧಟತನ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯರಾಜಧಾನಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಪ್ರಯತ್ನ ನಡೆದಿರುವ ಹಿಂದಿ ಮೂಲಭೂತವಾದಿಗಳು, ದೆಹಲಿಗೆ ಹೋಗಿ ರಾಷ್ಟ್ರಪತಿಗಳಿಗೆ ಮನವಿ ನೀಡಲು ಮುಂದಾಗಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದು, ಮನವಿ ಕೊಟ್ಟು ಮತ್ತೆ ಕರ್ನಾಟಕಕ್ಕೆ ಹೇಗೆ ಕಾಲಿಡುತ್ತೀರಿ ನಾವೂ ನೋಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ ಎಂದರು.

    ಕನ್ನಡ ನಾಮಲಕ ಅಭಿಯಾನ:ರಾಜ್ಯದ ಉದ್ದಗಲಕ್ಕೂ 70 ಲಕ್ಷಕ್ಕೂ ಅಧಿಕ ಕರವೇ ಕಾರ್ಯಕರ್ತರು ಇದ್ದಾರೆ. ಸರ್ಕಾರ ಇರಲಿ, ಯಾರೇ ಬರಲಿ ಕನ್ನಡದ ವಿಚಾರಕ್ಕೆ ಬಂದರೆ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕನ್ನಡ, ನಾಡು ನುಡಿ ಜಲದ ವಿಚಾರವಾಗಿ ಜೈಲಿಗೆ ಹೋಗಲು ಸಿದ್ಧ, ಎಂತಹುದೇ ಸವಾಲು ಎದುರಿಸಲು ಬದ್ಧ ಎಂದ ಅವರು, ಈ ನಿಟ್ಟಿನಲ್ಲಿ ಹಿಂದು ಮೂಲಭೂತವಾದಿಗಳ ನಡೆ ಖಂಡಿಸಿ, ರಾಜ್ಯದಾದ್ಯಂತ ಕನ್ನಡದ ನಾಮಲಕ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ನ. 1ರಿಂದ ಬೃಹತ್ ಅಭಿಯಾನ ಕೈಗೊಳ್ಳಲಾಗಿದೆ. ಇಲ್ಲಿ ವಾಸಿಸುವ ಎಲ್ಲರೂ ಈ ನೆಲದ ಕಾನುನು ಹಾಗೂ ನಿಯಮಗಳನ್ನು ಗೌರವಿಸಬೇಕು. ಅದನ್ನು ಹಿಂದಿ ವ್ಯಾಪಾರಿಗಳು ಅರಿತು ನಡೆಯಬೇಕು ಎಂದು ಎಚ್ಚರಿಕೆ ನೀಡಿದರು.

    ರಾಜಿಯಾಗದ ಮನೋಭಾವ:ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಕನ್ನಡದ ಹೋರಾಟಕ್ಕೆ ಸಾಹಿತ್ಯ, ಕಾವ್ಯ ಪರಂಪರೆಯೊಂದಿಗೆ ಕನ್ನಡ ನಾಡಿನ ನಾಡಿಯನ್ನು ಅರಿತವರು ಕನ್ನಡದ ಹೋರಾಟಗಾರರಾಗಬೇಕು. ಕನ್ನಡದ ವಿಚಾರ ಬಂದಾಗ ರಾಜಿಯಾಗದ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಗುಣಗಳು ನಾರಾಯಣ ಗೌಡರಲ್ಲಿವೆ. ಕನ್ನಡದ ಚಳವಳಿಯನ್ನು ರಾಜಧಾನಿಯಿಂದ ಹಳ್ಳಿಗಳಿಗೂ ಪಸರಿಸುವಂತೆ ಮಾಡಿದ್ದು ಅವರ ಹೆಗ್ಗಳಿಕೆ ಎಂದರು.

    ಸ್ನೇಹ-ಸಮರ: ಕವಿ ಪ್ರೊ. ದೊಡ್ಡರಂಗೇಗೌಡ ಮಾತನಾಡಿ, ನಾರಾಯಣ ಗೌಡರು ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎಂಬ ಘೋಷಣೆಗೆ ಬದ್ಧರಾದವರು. ಕನ್ನಡ, ಕಾವೇರಿ, ಆನ್‌ಲೈನ್ ಲಾಟರಿ ನಿಷೇಧ ಹೋರಾಟಗಳಲ್ಲಿ ಅವರ ಕೊಡುಗೆ ಹಿರಿದು. ಕನ್ನಡಕ್ಕೆ ಎಲ್ಲಿಯೇ ಅನ್ಯಾಯ ಆಗಲಿ ಧ್ವನಿ ಎತ್ತುವ ಅವರ ಹೋರಾಟಕ್ಕೆ ಈ ಪ್ರಶಸ್ತಿ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಹೇಳಿದರು.

    ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮಾತನಾಡಿ, ಕನ್ನಡ, ಕರ್ನಾಟಕದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರಿಗೂ ಕನ್ನಡ ಸಾಹಿತ್ಯ ಪರಿಷತ್ತು ಸೇರಿದೆ. ನಾರಾಯಣ ಗೌಡ ಅವರು ಕನ್ನಡ, ಕರ್ನಾಟಕವನ್ನು ವೀರಯೋಧರಂತೆ ರಕ್ಷಣೆ ಮಾಡುತ್ತಿದ್ದಾರೆ. ಎಲ್ಲರೂ ವೀರರು, ಶೂರರು ಆಗಲು ಸಾಧ್ಯವಿಲ್ಲ. ನಾರಾಯಣ ಗೌಡರು ಕನ್ನಡಕ್ಕಾಗಿ ಮುನ್ನುಗ್ಗುತ್ತಿದ್ದಾರೆ. ಅವರ ಕನ್ನಡದ ಹೋರಾಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹ ಇರುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಯೋಗಿ ಸ್ವಾಮೀಜಿ, ನ್ಯಾಯಾಧೀಶ ಶಿವಲಿಂಗೇಗೌಡ, ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಪದ್ಮನಿ ನಾಗರಾಜು, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಇತರರು ಇದ್ದರು.
    =======================
    ಕುವೆಂಪು, ಡಾ. ರಾಜ್ ಪ್ರೇರಣೆ:
    ‘ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ’ ಸ್ವೀಕರಿಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ, ಡಾ. ರಾಜ್‌ಕುಮಾರ್ ಅವರ ಚಿತ್ರಗಳು ನನ್ನ ಕನ್ನಡ ಹೋರಾಟಕ್ಕೆ ಪ್ರೇರಣೆ. ದಲಿತ, ರೈತ ಚಳವಳಿ, ನಾಡು, ನುಡಿಯ ಹೋರಾಟಕ್ಕೆ ಕುವೆಂಪು ಸ್ಫೂರ್ತಿ. ಅವರ ರೋಮಾಂಚಕಾರಿ ಪದ್ಯಗಳು ಹೋರಾಟದ ಕಿಚ್ಚು ಹೆಚ್ಚಿಸುವಂತಹವು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವ ಈ ಪ್ರಶಸ್ತಿಯನ್ನು ನನ್ನ ತಂದೆ ತಾಯಿಗೆ ಅರ್ಪಿಸುತ್ತೇವೆ ಎಂದರು.
    ಗೌರವಿಸಲಾಯಿತು. – ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಯೋಗಿ ಸ್ವಾಮೀಜಿ, ನ್ಯಾಯಾಧೀಶ ಶಿವಲಿಂಗೇಗೌಡ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಪದ್ಮನಿ ನಾಗರಾಜು, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts