More

    ನಟ ಉಮೇಶ್‌ಗೆ ರಾಜ್‌ಕುಮಾರ್ ಪ್ರಶಸ್ತಿ

    ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕೊಡಮಾಡುವ ‘ಡಾ. ರಾಜ್‌ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

    ವರನಟ ಡಾ. ರಾಜ್‌ಕುಮಾರ್ ತಮಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅದರ ಸಂಪೂರ್ಣ ಮೊತ್ತವನ್ನು ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿದರು. ನಂತರದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಇನ್ನಷ್ಟು ಮೊತ್ತವನ್ನು ಸೇರಿಸಿ ದತ್ತಿನಿಧಿ ಮೊತ್ತ ಹಾಗೂ ಮಹತ್ವ ಹೆಚ್ಚಿಸಿದರು.

    ತೊಟ್ಟಿಲ ಮಗುವಾಗಿದ್ದಾಗಲೇ ರಂಗಭೂಮಿ ಪ್ರವೇಶಿಸಿದ ಉಮೇಶ್ ಅವರು ಕೆ. ಹಿರಣ್ಣಯ್ಯ ಮಿತ್ರ ಮಂಡಲಿ, ಗುಬ್ಬಿ ಕಂಪನಿಯಲ್ಲಿ ಬಾಲನಟರಾಗಿ ಪ್ರಸಿದ್ಧಿ ಪಡೆದಿದ್ದರು. ಪುಟ್ಟಣ್ಣ ಕಣಗಾಲ್ ಅವರ ‘ಕಥಾ ಸಂಗಮ’ ಮೂಲಕ ಬೆಳ್ಳಿತೆರೆಗೆ ಮರಳಿ ಈವರೆಗೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಹೆಸರು ತಂದುಕೊಟ್ಟದ್ದು ಹಾಸ್ಯ ಪಾತ್ರಗಳು. ರಾಜ್‌ಕುಮಾರ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ‘ಸೀತಾಪತಿ ಸಿಟಿ ಲೈಫ್’ ಧಾರಾವಾಹಿ ರಾಜ್‌ಕುಮಾರ್ ಅಚ್ಚುಮೆಚ್ಚಾಗಿತ್ತು. ಹಾರ್ಮೋನಿಯಂ ವಾದಕ, ಗಾಯಕರೂ ಆಗಿರುವ ಉಮೇಶ್ ಬರಹಗಾರರೂ ಹೌದು. ಕಿರುತೆರೆಗೆ ಧಾರಾವಾಹಿಗಳನ್ನು ಬರೆದು ನಿರ್ದೇಶಿಸಿರುವ ಉಮೇಶ್, 80ನೇ ವಯಸ್ಸಿನಲ್ಲೂ ಅಭಿನಯದಲ್ಲಿ ಸಕ್ರಿಯರಾಗಿದ್ದಾರೆ.

    ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು, ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಮತ್ತು ದತ್ತಿ ದಾನಿಗಳ ಪರವಾಗಿ ಎಸ್.ಎ. ಚಿನ್ನೇಗೌಡ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts