More

    ಕ್ಷೇಮ ಕೇಂದ್ರದಲ್ಲಿ ಹಲವು ಸೇವೆ ಲಭ್ಯ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಮಾಹಿತಿ

    ಮಂಡ್ಯ: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ತಿಳಿಸಿದರು.
    ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಾಧ್ಯಮದವರಿಗೆ ಆಯೋಜಿಸಿದ್ದ ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಕೇಂದ್ರದಲ್ಲಿ ಸುಮಾರು 12ಕ್ಕೂ ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದೆ ಎಂದರು.
    ಪ್ರತೀ ಒಂದು ಸಾವಿರ ಜನರಿಗೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಅವರು ಆರೋಗ್ಯಾಧಿಕಾರಿಗೆ ವರದಿ ನೀಡುತ್ತಾರೆ. ಇದರೊಂದಿಗೆ ಪ್ರತೀ 5 ಸಾವಿರ ಜನರಿಗೆ ಒಬ್ಬರನ್ನು ಬಿಎಸ್ಸಿ ನರ್ಸಿಂಗ್ ಪದವಿ ಪಡೆದಿರುವರನ್ನು ನೇಮಕ ಮಾಡಲಾಗುತ್ತದೆ. ಅವರಿಗೆ ಸೂಕ್ತ ತರಬೇತಿ ನೀಡಲಾಗಿದ್ದು, ಕೆಲ ಆರೋಗ್ಯ ಸೇವೆಗಳನ್ನು ಇವರಿಂದ ಪಡೆಯಬಹುದಾಗಿದೆ. ಜತೆಗೆ ಅವರ ಬಳಿ ಮಧುಮೇಹ, ರಕ್ತದೊತ್ತಡ, ಹೈಪಟೈಟಿಸ್ ರೋಗಕ್ಕೆ ಸೇವೆಗಳನ್ನು ಪಡೆಯಬಹುದು. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಮನೆ ಬಾಗಿಲಿಗೆ ಔಷಧ ಒದಗಿಸುವ ವಿಶೇಷ ಯೋಜನೆಗೆ ಮಂಡ್ಯ ಸೇರಿದಂತೆ ಎಂಟು ಜಿಲ್ಲೆಗಳು ಒಳಪಟ್ಟಿದ್ದು, ಏಪ್ರಿಲ್‌ನಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.
    ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ವರದಿ ಪಡೆದು ಟೆಲಿಮೆಡಿಸಿನ್‌ನಲ್ಲಿ ಉತ್ತಮ ತಜ್ಞ ವೈದ್ಯರಿರುತ್ತಾರೆ. ಅವರನ್ನು ಸಂಪರ್ಕಿಸಿ ರಕ್ತದ ವರದಿಯನ್ನು ತೋರಿಸಿ ಅವರಿಂದ ಸಲಹೆ ಪಡೆದು ಚಿಕಿತ್ಸೆ ಪಡೆಯಬಹುದಾಗಿದೆ. ಹಿರಿಯರಿಗೆ ಆದ್ಯತೆ ಕೊಡುವುದು, ಪಾರ್ಶ್ವವಾಯು ರೋಗಕ್ಕೆ ಪೀಡಿತರಾಗಿ ಹಾಸಿಗೆ ಹಿಡಿದಿರುವವರು, ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕೊನೇ ಹಂತದಲ್ಲಿರುವವರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಕೊಠಡಿಯಲ್ಲಿ ವಿಶೇಷ ಆರೈಕೆ ಮಾಡಲಾಗುವುದು ಎಂದು ಹೇಳಿದರು.
    ತಂಬಾಕು ನಿಯಂತ್ರಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲಾಗುತ್ತಿದೆ. ಜಿಲ್ಲೆಯ 2753 ಶಾಲೆಗಳ ಪೈಕಿ 2530 ಶಾಲಾ-ಕಾಲೇಜುಗಳ ಸುತ್ತಮುತ್ತ ತಂಬಾಕು ಮುಕ್ತ ಪ್ರದೇಶವನ್ನಾಗಿ ಮಾಡಲಾಗಿದೆ. ಶೇ.100ಕ್ಕೆ 100ರಷ್ಟು ಶಾಲಾ ಕಾಲೇಜು ಆವರಣಗಳನ್ನು ತಂಬಾಕು ಮುಕ್ತವನ್ನಾಗಿ ಮಾಡಲಾಗಿದೆ. ಈ ಬಾರಿ ನಮಗೆ ಕೇಂದ್ರ ಸರ್ಕಾರದ ಪ್ರಶಸ್ತಿಯೂ ಲಭಿಸಿದೆ ಎಂದು ಹೇಳಿದರು.
    ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ಕ್ಷಯ ರೋಗ ಮತ್ತು ಎಚ್‌ಐವಿ ಕುರಿತಂತೆ ಪ್ರತಿಯೊಂದು ಗ್ರಾಮಗಳಲ್ಲೂ ಅರಿವು ಮೂಡಿಸಲಾಗುತ್ತಿದೆ. 2024ಕ್ಕೆ ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಕ್ಷಯ ರೋಗಕ್ಕೆ ಸಂಬಂಧಿಸಿದಂತೆ ರೋಗಿಗಳು ಕಂಡಬಂದಲ್ಲಿ ಅಂತಹವರನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇದರೊಂದಿಗೆ ರೋಗ ವಾಸಿಯಾಗುವವರೆಗೆ ಪ್ರತೀ ತಿಂಗಳು 500 ರೂಗಳನ್ನು ಉತ್ತಮ ಆಹಾರ ಸೇವಿಸಲು ನೀಡಲಾಗುತ್ತದೆ ಎಂದು ತಿಳಿಸಿದರು.
    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಭವಾನಿಶಂಕರ್, ಡಾ.ಅನಿಲ್‌ಕುಮಾರ್, ಡಾ.ವೇಣುಗೋಪಾಲ್, ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ್, ಕೆ.ರಾಜು ಇತರರಿದ್ದರು.
    ತಾಯಿಕಾರ್ಡ್, ನವಜಾತ ಶಿಶುವಿನ ಆರೈಕೆ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಶಿಶು ಕಾರ್ಯಕ್ರಮ, ನವಜಾತ ಶಿಶುಗಳ ಆರೈಕೆ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ರಕ್ತಹೀನತೆ, ಅನೀಮಿಯ ಮುಕ್ತ ಭಾರತ, ಅತಿಸಾರಬೇದಿ ನಿಯಂತ್ರಣ, ಭ್ರೂಣಲಿಂಗಪತ್ತೆ, ನವಜಾತ ಶಿಶು ಮತ್ತು ಮಕ್ಕಳ ಕಾಯಿಲೆ ನಿರ್ವಹಣಾ ಕಾರ್ಯಕ್ರಮ, ವಿಶ್ವ ಸ್ತನ್ಯಪಾನ ಸಪ್ತಾಹ, ನಮ್ಮ ಕ್ಲಿನಿಕ್, ಆಯುಷ್ಮಾನ್, ಇ ಸಂಜೀವಿನಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts