More

    ಕಾರ್ತಿಕ ಕಾಟೆ ಪರಾಕ್ರಮ

    ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಮಲ್ಲಮ್ಮ ಉತ್ಸವದ ನಿಮಿತ್ತ ಶನಿವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿ ನೋಡುಗರ ಮೈನವಿರೇಳಿಸಿತು.

    ಕುಸ್ತಿ ಕಣದಲ್ಲಿ ಜಟ್ಟಿಗಳು ತಮ್ಮ ಶಕ್ತಿ ಪ್ರದರ್ಶಿಸಿದರು. ಜಟ್ಟಿಗಳ ತೋಳ್ಬಲ, ಡಾವ್, ಪೇಚಗಳನ್ನು ಕಂಡು ಕುಸ್ತಿ ಪ್ರೇಮಿಗಳು ಶಿಳ್ಳೆ, ಚಪ್ಪಾಳೆ ಮೂಲಕ ಪೈಲ್ವಾನರನ್ನು ಹುರಿದುಂಬಿಸಿದರು. ಹಲಗೆ ವಾದಕರು ವಿಶಿಷ್ಟ ರೀತಿಯಲ್ಲಿ ವಾದ್ಯ ನುಡಿಸಿ ಗಮನ ಸೆಳೆದರು.

    ಪುರುಷರ ವಿಭಾಗ: ಪುರುಷರ ವಿಭಾಗದ ಮೊದಲ ಜೋಡಿ ಕುಸ್ತಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಟು ಹರಿಯಾಣದ ಬಂಟಿ ಜತೆ ಸೆಣಸಿದ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ ವಿಜಯಿಯಾದರು. ಎರಡನೇ ಜೋಡಿಯಲ್ಲಿ ಕರ್ನಾಟಕ ಕೇಸರಿ ಸಂಗಮೇಶ ಬಿರಾದಾರ ಕುಹಳ್ಳಿ ಹಾಗೂ ಇಂಚಲಕರಂಜಿಯ ಓಂಕಾರ ಬಾತಮಾರೆ ನಡುವೆ ಕುಸ್ತಿ ಸಮ ಬಲದಲ್ಲಿ ಅಂತ್ಯವಾಯಿತು.

    ಮೂರನೇ ಜೋಡಿಯಲ್ಲಿ ಹರಿಯಾಣದ ನಿತಿನ್‌ಕುಮಾರ ಜತೆ ಸೆಣಸಿದ ದಸರಾ ಕೇಸರಿ ಬಸಪ್ಪ ಚಿಮ್ಮಡ ವಿಜಯಿಯಾದರು. ನಾಲ್ಕನೇ ಜೋಡಿ ಕುಸ್ತಿಯಲ್ಲಿ ಅಭಿಜಿತ ಕಣೇರಿ ಜತೆ ಸೆಣಸಿದ ನಾಗರಾಜ ಬಸಿಡೋಣಿ ಜಯಶಾಲಿಯಾದರು. ಐದನೇ ಜೋಡಿಯಲ್ಲಿ ಕೊಲ್ಲಾಪುರದ ತುಷಾರ ಶಿಂಧೆ ಎದುರು ಹುಸೇನ್ ಮುಲ್ಲಾ ಗೆಲುವಿನ ನಗೆ ಬೀರಿದರು. ಪರುಷರ ವಿಭಾಗದಲ್ಲಿ ಒಟ್ಟು 30 ಜೋಡಿ ಕುಸ್ತಿಗಳು ನಡೆದವು.

    ಮಹಿಳಾ ವಿಭಾಗ: ಮಹಿಳಾ ವಿಭಾಗದ ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಪಟು ಕೋಮಲಾ ಗುಳೆ ಹಾಗೂ ರಾಷ್ಟ್ರೀಯ ಕುಸ್ತಿಪಟು ಪೂಜಾ ದಳವಿ ಕುಸ್ತಿ ತುರುಸಿನಿಂದ ನಡೆಯುವಾಗ ಪೂಜಾ ಅವರ ಕೈಗೆ ಪೆಟ್ಟಾಗಿದ್ದರಿಂದ ಕುಸ್ತಿಯನ್ನು ಸಮಬಲ ಎಂದು ಘೋಷಿಸಲಾಯಿತು.

    ಎರಡನೇ ಜೋಡಿಯಲ್ಲಿ ಮೂಡಬಿದರೆಯ ಆಳ್ವಾಸ್ ಕುಸ್ತಿ ಪಟು ಹರ್ಷಿತಾ ಜತೆ ಸೆಣಸಿದ ಗುಜರಾತ್ ನಿತ್ಯಾ ತೋಮರ ವಿಜಯಶಾಲಿಯಾದರು. ಮೂರನೇ ಜೋಡಿಯಲ್ಲಿ ಮೂಡಬಿದರೆಯ ಆಳ್ವಾಸ್ ಪೈಲ್ವಾನ್ ಜತೆ ಸೆಣಸಿದ ಸಹನಾಳನ್ನು ಅಂತಾರಾಷ್ಟ್ರೀಯ ಕುಸ್ತಿ ಪಟು ಎಚ್.ಪ್ರೇಮಾ ಪರಾಭವಗೊಳಿಸಿದರು. ನಾಲ್ಕನೇ ಜೋಡಿಯಲ್ಲಿ ರಾಷ್ಟ್ರೀಯ ಕುಸ್ತಿಪಟು ಸೋನಿಯಾ ಜಾಧವ ಹಾಗೂ ಪೈಲ್ವಾನ್ ಗೀತಾ ನಿಸಾಳೆ ಕುಸ್ತಿ ಸಮವಾಯಿತು.

    ಶಾಸಕ ಮಹಾಂತೇಶ ಕೌಜಲಗಿ, ಎಸಿ ಶಿವಾನಂದ ಭಜಂತ್ರಿ, ಜಿಪಂ ಸದಸ್ಯ ಈರಣ್ಣ ಕರೀಕಟ್ಟಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದರು. ನಿಂಗಪ್ಪ ಕರಿಕಟ್ಟಿ, ಶಂಕರೆಪ್ಪ ತುರಮರಿ, ಕಲಗೌಡ ಪಾಟೀಲ, ಮುದಕಪ್ಪ ದೊಡವಾಡ, ವಿಠ್ಠಲ ಪಿಸೆ, ರಾಚಯ್ಯ ರೊಟ್ಟಯ್ಯನವರ, ಗಂಗಪ್ಪ ತುರಾಯಿ, ಮಡ್ಡೆಪ್ಪ ಹುಂಬಿ, ರಫೀಕ್ ಹಜರತಿ, ಬಸವರಾಜ ಬಿಲ್‌ಶಿವಣ್ಣವರ, ಬಾಳಪ್ಪ ಚವರದ ಇದ್ದರು. ಮಹಾಂತೇಶ ಶಿ. ತುರಮರಿ, ರಾಜೇಸಾಬ ಉಗರಗೋಳ, ಸುರೇಶ ಕಾಮಣ್ಣವರ, ಶ್ರೀಶೈಲ ಬೈಲವಾಡ, ಶರಣಗೌಡ ಬಿಲೇರಿ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts