More

    ಕಾರಟಗಿ ಗ್ರಾಮಲೆಕ್ಕಾಧಿಕಾರಿ ಅಮಾನತು

    ಕಾರಟಗಿ: ಇಲ್ಲಿನ ತಹಸಿಲ್ ಕಚೇರಿಯಲ್ಲಿ ಒಂದು ನೂರು ಕಡತಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಸೋಮನಾಥನನ್ನು ಅಮಾನತುಗೊಳಿಸಿ ಹೊರಡಿಸಿರುವ ಜಿಲ್ಲಾಧಿಕಾರಿ ಆದೇಶದಿಂದ ದಾಖಲೆಗಳ ತಿದ್ದುಪಡಿ ಅಕ್ರಮ ಬಯಲಾಗಿದೆ.

    ಕಾರಟಗಿ-ಸಿದ್ದಾಪುರ ಹೋಬಳಿಗಳಲ್ಲಿ 2023 ಜ.1ರಿಂದ ಸೆ.5ರವರೆಗೆ ಪಹಣಿ ತಿದ್ದುಪಡಿ ಮಾಡಿದ 120 ಪ್ರಕರಣಗಳ ಪೈಕಿ ಕಚೇರಿಯಲ್ಲಿ ಕೇವಲ 20ಕಡತಗಳು ಲಭ್ಯವಾಗಿದ್ದು ಬರೊಬ್ಬರಿ ನೂರು ಕಡತಗಳು ಕಾಣೆಯಾಗಿರುವುದು ಕಂಡುಬಂದಿದೆ. ಅಲ್ಲದೇ ದಾಖಲೆಗಳಿಲ್ಲದೇ ತಿದ್ದುಪಡಿ ಮಾಡಲಾಗಿದೆಯೆಂದು ತಹಸೀಲ್ದಾರ್ ಹಾಗೂ ಉಪವಿಭಾಗೀಯ ಅಧಿಕಾರಿ ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪಹಣಿ ತಿದ್ದುಪಡಿ ಸಂಕಲನದ ವಿಷಯ ನಿರ್ವಾಹಕ ಹಾಗೂ ಕಚೇರಿ ಕಂದಾಯ ನಿರೀಕ್ಷರಾಗಿದ್ದ ಸೋಮನಾಥ (ಪ್ರಸ್ತುತ ಕಾರಟಗಿ ಗ್ರಾಮಲೆಕ್ಕಾಧಿಕಾರಿ) ಕರ್ತವ್ಯ ನಿರ್ವಹಿಸುತ್ತಿದ್ದಾಗ ಗಂಭೀರ ಸ್ವರೂಪದ ಲೋಪ ಎಸಗಿದ್ದಾರೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು 2021ರ ನಿಯಮ(3)ರ ಉಪನಿಯಮ 1(1)(2)(3), 2(3), 2(4)ನ್ನು ಉಲ್ಲಂಘಿಸಿದ್ದಾರೆ. ಇವರ ವಿರುದ್ಧ ಆರೋಪಗಳ ಬಗ್ಗೆ ಇಲಾಖೆ ವಿಚಾರಣೆ ಬಾಕಿ ಇರಿಸಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ)ಅನ್ವಯ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಜ.16ರಂದು ಆದೇಶ ಹೊರಡಿಸಿದ್ದಾರೆ. ಜತೆಗೆ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮಲೆಕ್ಕಾಧಿಕಾರಿಯನ್ನು ವೃತ್ತಕ್ಕೆ ವರ್ಗಾಯಿಸಿದ್ದಾರೆ.

    ಏನಿದು ಪ್ರಕರಣ

    ಕಾರಟಗಿ-ಸಿದ್ದಾಪುರ ಹೋಬಳಿಗಳಲ್ಲಿ 2023 ಜ.1ರಿಂದ ಸೆ.5ರವೆರೆಗೆ ಕಂದಾಯ ಅದಾಲತ್ ತಂತ್ರಾಶದಲ್ಲಿ ದಾಖಲಿಸಿದ ಮೋಜಿಣಿ ಸೇರಿದಂತೆ ಇತರ ತಿದ್ದುಪಡಿ ಮಾಡಿದ ಆದೇಶ ಪ್ರತಿಗಳ ದೃಢೀಕೃತ ನಕಲು ನೀಡುವಂತೆ ಪಟ್ಟಣದ ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ ಎಂಬುವವರು ಮಾಹಿತಿ ಹಕ್ಕಿನಡಿ 2023 ಸೆ.8ರಂದು ಮಾಹಿತಿ ಕೋರಿ ತಹಸಿಲ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಿಗೆ ಮಾಹಿತಿ ಕೊಡಲು ಕಚೇರಿಯಲ್ಲಿ ಕಡತಗಳೇ ಇರಲಿಲ್ಲ. ನೇರವಾಗಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಬೆಂಗಳೂರಿನ ಕಂದಾಯ ಆಯುಕ್ತಾಲಯದ ಭೂಮಿ ಉಸ್ತುವಾರಿ ಕೋಶದ ಜಿಲ್ಲಾಧಿಕಾರಿಗೆ ತಹಸೀಲ್ದಾರರು ಸೆ.20ರಂದು ಪತ್ರ ಬರೆದಿದ್ದರು. ಈ ಕುರಿತು ವಿಜಯವಾಣಿಯಲ್ಲಿ 2023 ಅ.4ರಂದು ಎ-ಗ್ರೇಡ್ ಕಡತಗಳು ಎಲ್ಲಿವೆ?, ಕಾರಟಗಿ ತಹಸಿಲ್ ಕಚೇರಿಯಲ್ಲಿ ಬಗೆದಷ್ಟೂ ಹುಳುಕು ಬಯಲು ಎನ್ನುವ ಶಿರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿ ಬಳಿಕ ಎಸಿ ಮಹೇಶ ಮಾಲಗಿತ್ತಿ ತಹಸಿಲ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ಉಪತಹಸೀಲ್ದಾರ್ ವರ್ಗಾವಣೆ

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವುದರಿಂದ ಅಂದಿನ ಭೂಮಿ ಶಿರಸ್ತೇದಾರ್ ಪ್ರಕಾಶ್ ನಾಯಕ (ಪ್ರಸ್ತುತ ಸಿದ್ದಾಪುರ ನಾಡಕಚೇರಿ ಉಪತಹಸೀಲ್ದಾರ್) ಅವರನ್ನು ಘಟನೋತ್ತರ ಮಂಜೂರಾತಿಯನ್ನು ನಿರೀಕ್ಷಣೆಯಲ್ಲಿಟ್ಟು ಇಲಾಖೆ ವಿಚಾರಣೆಯನ್ನು ನಡೆಸಲು ಉದ್ದೇಶಿಸಲಾಗಿದೆ. ಸದರಿ ನೌಕರನನ್ನು ಸಿದ್ದಾಪುರ ನಾಡಕಚೇರಿಯ ಉಪತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರಿಸುವುದು ಸೂಕ್ತವಲ್ಲವೆಂದು ತೀರ್ಮಾನಿಸಿ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳು 2013ರ ಕಂಡಿಕೆ 7(ಅ)ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಕುಷ್ಟಗಿ ತಹಸಿಲ್ ಕಚೇರಿಯಕಲ್ಲಿ ಖಾಲಿ ಇರುವ ಶಿರಸ್ತೇದಾರ್ ಹುದ್ದೆಗೆ ವರ್ಗಾಯಿಸಿ ಜಿಲ್ಲಾಧಿಕಾರಿ ನಲಿನ್ ಅತುಲ್ ಜ.16ರಂದು ಆದೇಶಿಸಿದ್ದಾರೆ. ಅಲ್ಲದೇ, ವರ್ಗಾವಣೆ ಆದೇಶದವನ್ನು ಸ್ವೀಕರಿಸಲು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts