More

    ಸಾರಿಗೆ ನೌಕರರ ಮುಷ್ಕರ ಅಂತ್ಯ!

    ಬೆಂಗಳೂರು: 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ 15 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ನೌಕರರ ಮುಷ್ಕರ ಕೊನೆಗೂ ಅಂತ್ಯವಾಗಿದೆ. ಯಾವುದೇ ಬೇಡಿಕೆ ಈಡೇರದೆ, ಸಂಧಾನ ಮಾತುಕತೆ ನಡೆಯದೆ ಮುಷ್ಕರ ಕೊನೆಗೊಳ್ಳುವಂತಾಗಿದೆ.

    ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಹೆಚ್ಚಿನ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಅದರಿಂದ ಮುಷ್ಕರದ ನೇತೃತ್ವ ವಹಿಸಿದ್ದ ನೌಕರ ಸಂಘಟನೆಗೆ ಭಾರಿ ಮುಖಭಂಗವಾಗುವಂತಾಗಿತ್ತು.

    ಹೀಗಾಗಿ ನೌಕರ ಮುಖಂಡರು ಅನಿವಾರ್ಯ ಕಾರಣದಿಂದ ಇದೀಗ ಮುಷ್ಕರ ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ. ತಾತ್ಕಾಲಿಕವಾಗಿ ಮುಷ್ಕರದಿಂದ ಹಿಂದೆ ಸರಿಯುತ್ತಿದ್ದು, ಮುಂದೆ ಮತ್ತೆ ಮುಷ್ಕರ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

    ಅತಂತ್ರ ಸ್ಥಿತಿಯಲ್ಲಿ ಕ್ರಮಕ್ಕೊಳಗಾದ ನೌಕರರು: ಮುಷ್ಕರದಲ್ಲಿ ಪಾಲ್ಗೊಂಡು, ಇತರರನ್ನು ಮುಷ್ಕರಕ್ಕೆ ಪಾಲ್ಗೊಳ್ಳುವಂತೆ ಉತ್ತೇಜಿಸಿದ ಕಾರಣಕ್ಕಾಗಿ 1,900ಕ್ಕೂ ಹೆಚ್ಚಿನ ತರಬೇತಿ ಮತ್ತು ಕಾಯಂ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಜತೆಗೆ 2,900ಕ್ಕೂ ಹೆಚ್ಚಿನ ನೌಕರರನ್ನು ಅಮಾನತು ಮಾಡಲಾಗಿತ್ತು. ಸರ್ಕಾರ ಅಥವಾ ನಿಗಮಗಳಿಂದ ನೌಕರರ ವಿರುದ್ಧದ ಕ್ರಮ ಹಿಂಪಡೆಯುವ ಯಾವುದೇ ಭರವಸೆ ಪಡೆಯದೆ ಮುಷ್ಕರ ಹಿಂಪಡೆಯಲಾಗಿದೆ. ಹೀಗಾಗಿ ಕ್ರಮಕ್ಕೆ ಒಳಗಾಗಿರುವ ನೌಕರರೆಲ್ಲ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

    ಡಿಸಿಎಂ ಶ್ರೀ ಲಕ್ಷ್ಮಣ ಸವದಿ ಅವರ ಪತ್ರಿಕಾ ಪ್ರಕಟಣೆ:

    ಸರ್ಕಾರದ ಮನವಿಗೆ ಓಗುಟ್ಟು ಇಂದು ಸಂಜೆಯ ವೇಳೆಗೆ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಸುಮಾರು 13 ಸಾವಿರದಷ್ಟು ಬಸ್ಸುಗಳು ಸಂಚರಿಸಿರುವುದರಿಂದ ಸಾರ್ವಜನಿಕರು ಸಮಾಧಾನ ಪಡುವಂತಾಯಿತು. ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಈ ಬಗ್ಗೆ ನಾನು ಧನ್ಯವಾದಗಳನ್ನು ತಿಳಿಸಬಯಸುತ್ತೇನೆ.

    ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಾರಿಗೆ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಸುಮಾರು 13 ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿ ಕೋವಿಡ್‍ನಂತಹ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾರಿಗೆ ಸೇವೆ ಲಭ್ಯವಾಗಿ ನಿಟ್ಟುಸಿರು ಬಿಡುವಂತಾಯಿತು. ಹೀಗೆ ಕರ್ತವ್ಯ ಪ್ರಜ್ಞೆ ಮೆರೆದವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಅದೇರೀತಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲೀಕರಲ್ಲಿ ಕೋರಿಕೊಂಡಾಗ ಅವರೂ ಸಹ ತುಂಬು ಹೃದಯದಿಂದ ಸಹಕಾರ ನೀಡಿದ್ದನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

    ನಾಳೆಯಿಂದ ನಮ್ಮ ನೌಕರ ಬಾಂಧವರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಸುಗಮಗೊಳ್ಳುತ್ತದೆ ಎಂಬ ವಿಶ್ವಾಸ ಮೂಡುವಂತಾಗಿರುವುದು ಸಂತೋಷದ ಸಂಗತಿಯಾಗಿದೆ. ಮುಷ್ಕರದ ಸಂದರ್ಭದಲ್ಲಿಯೂ ಹಲವು ಮಂದಿ ಸಾರಿಗೆ ನೌಕರರು ಸರ್ಕಾರದ ಮನವಿಗೆ ಸ್ಪಂದಿಸಿ ಕರ್ತವ್ಯಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಈ ಸಂಕಷ್ಟದ ಕಾಲದಲ್ಲಿಯೂ ಸೇವೆ ಒದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಇಂತಹವರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವತ್ತ ನಮ್ಮ ಸರ್ಕಾರ ಯಾವತ್ತೂ ಸಹಾನುಭೂತಿ ಹೊಂದಿರುತ್ತದೆ ಎಂಬುದನ್ನು ಮತ್ತೊಮ್ಮೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ.

    ಇಡೀ ದೇಶದಲ್ಲೇ ನಮ್ಮ ಸಾರಿಗೆ ನಿಗಮಗಳಿಗೆ ವಿಶೇಷವಾದ ವರ್ಚಸ್ಸಿದೆ. ಈ ವರ್ಚಸ್ಸನ್ನು ಬೆಳೆಸುವಲ್ಲಿ ಅನೇಕ ಮಹಾನೀಯರುಗಳ ಪರಿಶ್ರಮ ಮತ್ತು ಕೊಡುಗೆಗಳಿವೆ. ಆದ್ದರಿಂದ ಅವರ ಶ್ರಮವನ್ನು ಗೌರವಿಸುತ್ತಾ, ನಾಡಿನಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಎಲ್ಲಾ ನೌಕರರ ಜವಾಬ್ದಾರಿಯಾಗಿದೆ. ಇದರಿಂದ ಕರ್ನಾಟಕದ ಸರ್ಕಾರಿ ಸಾರಿಗೆಯ ಗತ ವೈಭವ ಮತ್ತೆ ಮರುಕಳಿಸಲು ಸಾಧ್ಯವಾಗುತ್ತದೆ.

    ನೆಲಮಂಗಲ ಬಾರ್‌ಗೆ ಎಂಟ್ರಿ ಕೊಟ್ರು ಜಿಲ್ಲಾಧಿಕಾರಿ- ಎಣ್ಣೆ ಬಿಟ್ಟು ದುಡ್ಡೂ ಕೊಡದೇ ಇದ್ದವರು ಪರಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts