More

    ಬಸರಾಳು ಕೆಪಿಎಸ್ ಬಿಸಿಯೂಟ ಸಮಸ್ಯೆಗೆ ತೆರೆ: ವಿಜಯವಾಣಿ ಸರಣಿ ವರದಿ ಪರಿಣಾಮ

    ಮಂಡ್ಯ: ತಾಲೂಕಿನ ಬಸರಾಳು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕೆಲ ದಿನಗಳಿಂದ ಕಗ್ಗಂಟಾಗಿದ್ದ ಬಿಸಿಯೂಟದ ಸಮಸ್ಯೆಗೆ ತೆರೆ ಬಿದ್ದಿದೆ. ಕಳಪೆ ಗುಣಮಟ್ಟದ ಆಹಾರ ಪದಾರ್ಥದ ಬಿಸಿಯೂಟವನ್ನು ಮಕ್ಕಳಿಗೆ ಕೊಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಜತೆಗೆ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಈ ಬಗ್ಗೆ ವಿಜಯವಾಣಿ ವಿಸ್ತೃತವಾಗಿ ಸರಣಿ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಸಮಸ್ಯೆಯನ್ನು ಬಗೆಹರಿಸಿದೆ.
    ಬಿಸಿಯೂಟದ ಜವಾಬ್ದಾರಿ ಹಸ್ತಾಂತರ: ಶಾಸಕ ಎಂ.ಶ್ರೀನಿವಾಸ್ ಅವರೇ ಎಸ್‌ಡಿಎಂಸಿ ಅಧ್ಯಕ್ಷರಾಗಿರುವ ಕೆಪಿಎಸ್ ಶಾಲೆಯಲ್ಲಿ ಬಿಸಿಯೂಟದ ಸಮಸ್ಯೆ ದೊಡ್ಡ ತಲೆನೋವಾಗಿತ್ತು. ಮೂರು ತಿಂಗಳಿನಿಂದ ಕಳಪೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ಪಾಲಕರು ಹಾಗೂ ಸಾರ್ವಜನಿಕರು ಶಾಲೆಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿದ್ದರು.
    ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒದರಿಂದ ಹತ್ತನೇ ತರಗತಿವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕೆಲ ದಿನದಿಂದ ಸಿಬ್ಬಂದಿವಿಲ್ಲವೆನ್ನುವ ನೆಪ ಹೇಳಿ ಬಿಸಿಯೂಟ ನಿಲ್ಲಿಸಲಾಗಿತ್ತು. ಪರಿಣಾಮ ಮಕ್ಕಳು ಮನೆಯಿಂದಲೇ ಊಟ ತರುವಂತಾಗಿತ್ತು. ಈ ಕುರಿತು ವಿಜಯವಾಣಿ ‘ಸೆ.17ರಂದು ಬಿಸಿಯೂಟದಲ್ಲಿ ಕಪ್ಪು, ಬಿಳಿ ಹುಳು, 21ರಂದು ಮಕ್ಕಳ ಊಟದಲ್ಲಿ ಭ್ರಷ್ಟಾಚಾರ ಸಲ್ಲದು’ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಜತೆಗೆ ನಿರಂತರವಾಗಿ ಫಾಲೋಅಪ್ ಸುದ್ದಿ ಮಾಡಲಾಗುತ್ತಿತ್ತು. ವಿಜಯವಾಣಿ ವರದಿ ಹಿನ್ನೆಲೆಯಲ್ಲಿ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು.
    ಕೆಪಿಎಸ್ ಶಾಲೆಯಲ್ಲಿ ಎರಡು ವಿಭಾಗದಲ್ಲಿ ಅಡುಗೆ ಮಾಡಲಾಗುತ್ತಿದೆ. ಅದರಂತೆ 9 ಮತ್ತು 10ನೇ ತರಗತಿವರೆಗೆ ಬಿಸಿಯೂಟ ಎಂದಿನಂತೆ ನಡೆಯುತ್ತಿದೆ. ಆದರೆ ಎಲ್‌ಕೆಜಿಯಿಂದ 8ನೇ ತರಗತಿವರೆಗೆ ಬಿಸಿಯೂಟ ಕೊಡುತ್ತಿರಲಿಲ್ಲ. ಈ ಕುರಿತು ಸೆ.24ರಂದು ಕೆಪಿಎಸ್ ಮಕ್ಕಳಿಗೆ ಬಿಸಿಯೂಟ ಸ್ಥಗಿತ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತು. ಇದರಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಶನಿವಾರ ಮಕ್ಕಳಿಗೆ ಬಿಸಿಯೂಟವನ್ನು ನೀಡಿದ್ದಾರೆ. ಹಾಲಿ ಇದ್ದ ಸಿಬ್ಬಂದಿ ಜತೆಗೆ ಹೊರಗಿನವರ ಸಹಾಯ ಪಡೆದು ಅಡುಗೆ ಸಿದ್ಧಪಡಿಸಿ ಮಕ್ಕಳಿಗೆ ಕೊಟ್ಟಿದ್ದಾರೆ. ಇದಲ್ಲದೆ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಪ್ರೌಢಶಾಲಾ ವಿಭಾಗಕ್ಕೆ ವಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts