More

    ಹಿಂದೆಂದೂ ಕಂಡರಿಯದಂತಹ ಭೀಕರ ಬರಗಾಲ: ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರಕ್ಕೆ ಆಗ್ರಹ

    ಮಂಡ್ಯ: ಬರದಿಂದ ತತ್ತರಿಸಿರುವ ಜನರಿಗೆ ಸೂಕ್ತ ಪರಿಹಾರ ರೂಪಿಸುವಂತೆ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್‌ರಾಜ್ ಒತ್ತಾಯಿಸಿದರು.

    ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರ ತಲೆದೋರಿದ್ದು, ಈ ಬರದ ಬರೆಗೆ ಜನತೆ ತತ್ತರಿಸಿದ್ದಾರೆ. ಆಳುವ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಜಿಲ್ಲೆಯಲ್ಲಿ ಕಬ್ಬು, ರೇಷ್ಮೆ, ಭತ್ತ, ರಾಗಿ, ಜೋಳ ಇತರೆ ಬೆಳೆಗಳು ನೀರಿಲ್ಲದೆ ಒಣಗಿ ಹಾಳಾಗಿದೆ. ಭೂಮಿಗೆ ಬಿತ್ತನೆ ಹಾಕಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖರ್ಚು ಮಾಡಿದ ಹಣವೂ ಬಂದಿಲ್ಲ. ಸರ್ಕಾರಗಳು ಸೂಕ್ತರ ಪರಿಹಾರವನ್ನೂ ರೂಪಿಸಿಲ್ಲ. ತಕ್ಷಣ ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ರೈತರು ಸಾಲ ಮಾಡಿ ಕೊಳವೆ ಬಾವಿ ಕೊರೆಸಿ ನೀರು ಬರದೆ ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ. ಕೂಲಿ ಮಾಡಿ ಜೀವನ ನಡೆಸಲು ಕೂಲಿ ಸಹ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ 150 ದಿನ ಕೆಲಸ ಕೊಡಬೇಕೆಂಬ ನಿಯಮವಿದ್ದರೂ, ಅದು ಜಾರಿಯಾಗುತ್ತಿಲ್ಲ. ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಕೆಆರ್‌ಎಸ್‌ನಿಂದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ಹಾಗೂ ಕಾಡು ಪ್ರಾಣಿಗಳಿಗಾದರೂ ರಕ್ಷಿಸಲು ಮುಂದಾಗಬೇಕು. ಪಂಚಾಯಿತಿ ಮಟ್ಟದಲ್ಲಿ ಮೇವು ಸಂಗ್ರಹಿಸಿ ಹಂಚಬೇಕು. ಹಸು-ಎಮ್ಮೆಗಳು ಬಿಸಿಲಿನ ಝಳಕ್ಕೆ ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

    ಮುಖಂಡರಾದ ಲಿಂಗರಾಜಮೂರ್ತಿ, ಟಿ.ಎಸ್.ಸಿದ್ದೇಗೌಡ, ಗುರುಸ್ವಾಮಿ, ಸತೀಶ್, ರಾಮಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts