More

    ಐಪಿಎಲ್ 2ನೇ ಇನಿಂಗ್ಸ್‌ನಲ್ಲೂ ಮಿಂಚಲು ಕನ್ನಡಿಗರ ಪಡೆ ಸಜ್ಜು

    ಬೆಂಗಳೂರು: ಐಪಿಎಲ್ 14ನೇ ಆವೃತ್ತಿಯ ವಿವಿಧ ತಂಡಗಳಲ್ಲಿ ಒಟ್ಟು 13 ಕನ್ನಡಿಗರಿದ್ದು, ಈ ಪೈಕಿ ಮೊದಲ ಭಾಗದಲ್ಲಿ 6 ಆಟಗಾರರಷ್ಟೇ ಕಣಕ್ಕಿಳಿಯುವ ಅವಕಾಶ ಪಡೆದಿದ್ದರು. ಪಂಜಾಬ್ ತಂಡದ ಪರ ನಾಯಕ ಕೆಎಲ್ ರಾಹುಲ್ (331) ಮತ್ತು ಮಯಾಂಕ್ ಅಗರ್ವಾಲ್ (260) ಆಡಿದ 7 ಪಂದ್ಯಗಳಲ್ಲಿ ರನ್ ಗಳಿಸಿ ಮಿಂಚಿದ್ದರು. ರಾಹುಲ್ ಗಾಯದಿಂದಾಗಿ ಮೊದಲ ಭಾಗದಿಂದ ಹೊರಬಿದ್ದಾಗ ಮಯಾಂಕ್ ಕೂಡ 1 ಪಂದ್ಯಕ್ಕೆ ನಾಯಕರಾಗಿದ್ದರು.

    ಆರ್‌ಸಿಬಿ ಪರ ಯುವ ಎಡಗೈ ಆರಂಭಿಕ ದೇವದತ್ ಪಡಿಕಲ್ (6 ಪಂದ್ಯಗಳಲ್ಲಿ 195 ರನ್) ಐಪಿಎಲ್‌ನಲ್ಲಿ ಚೊಚ್ಚಲ ಶತಕವನ್ನೂ ಸಿಡಿಸಿ ದೊಡ್ಡ ಇನಿಂಗ್ಸ್ ಆಡುವ ಸಾಮರ್ಥ್ಯ ಪ್ರದರ್ಶಿಸಿದ್ದರು. ಸನ್‌ರೈಸರ್ಸ್‌ ಪರ ಮನೀಷ್ ಪಾಂಡೆ 5 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 193 ರನ್ ಪೇರಿಸಿದರೂ, ಸಾಧಾರಣ ಸ್ಟ್ರೈಕ್‌ರೇಟ್‌ನಿಂದ (123.71) ನಿರಾಸೆ ಮೂಡಿಸಿದ್ದರು. ಕೆಕೆಆರ್ ಪರ ವೇಗಿ ಪ್ರಸಿದ್ಧಕೃಷ್ಣ 7 ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿ ಮಿಂಚಿದ್ದರೆ, ರಾಜಸ್ಥಾನ ಪರ ಸ್ಪಿನ್ನರ್ ಶ್ರೇಯಸ್ ಗೋಪಾಲ್ 2 ಪಂದ್ಯ ಆಡಿದರೂ ವಿಕೆಟ್ ಗಳಿಸಲು ಶಕ್ತರಾಗಿರಲಿಲ್ಲ.

    ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ರಾಜಸ್ಥಾನ ತಂಡದಿಂದ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ವರ್ಗಾವಣೆಗೊಂಡಾಗ ನಿರೀಕ್ಷೆಗಳು ಹೆಚ್ಚಾಗಿದ್ದವು. ಆದರೆ ಸಿಎಸ್‌ಕೆ ತಂಡ ಅವರಿಗೆ ಒಂದೂ ಪಂದ್ಯದಲ್ಲಿ ಅವಕಾಶ ನೀಡದೆ ಬೆಂಚು ಕಾಯಿಸಿತು. ಕಳೆದ ಹರಾಜಿನಲ್ಲಿ ಬರೋಬ್ಬರಿ 9.25 ಕೋಟಿ ರೂ.ಗೆ ಸಿಎಸ್‌ಕೆ ತಂಡ ಸೇರಿದ್ದ ಮತ್ತೋರ್ವ ಕನ್ನಡಿಗ ಕೆ. ಗೌತಮ್ ಕೂಡ ಬದಲಿ ಫೀಲ್ಡರ್ ಆಗಿ ಆಡಿದ್ದೇ ಬಂತು. ಪಂದ್ಯದಲ್ಲಿ ಆಡುವ ಅವಕಾಶ ಗೌತಮ್‌ಗೂ ಒಲಿಯಲಿಲ್ಲ. ಆರ್‌ಸಿಬಿ ಪರ ಪವನ್ ದೇಶಪಾಂಡೆ, ರಾಜಸ್ಥಾನ ಪರ ಕೆಸಿ ಕಾರ್ಯಪ್ಪ, ಸನ್‌ರೈಸರ್ಸ್‌ ಪರ ಜೆ. ಸುಚಿತ್, ಕೆಕೆಆರ್ ಪರ ಕರುಣ್ ನಾಯರ್ ಮತ್ತು ಡೆಲ್ಲಿ ಪರ ಪ್ರವೀಣ್ ದುಬೆ ಕೂಡ ಆಡುವ ಅವಕಾಶ ಪಡೆಯಲಿಲ್ಲ.

    ಇನ್ನು ದಿಗ್ಗಜ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಲ್ರೌಂಡರ್ ಅನಿರುದ್ಧ ಜೋಶಿ ಡೆಲ್ಲಿ ತಂಡಕ್ಕೆ ಬದಲಿ ಆಟಗಾರರಾಗಿ ಸೇರ್ಪಡೆಗೊಂಡಿದ್ದರೂ, ಶ್ರೇಯಸ್ ಅಯ್ಯರ್ ಫಿಟ್ ಆಗಿ ಮರಳಿದಾಗ ತಂಡದಿಂದ ಹೊರಬಿದ್ದಿದ್ದಾರೆ.

    ಐಪಿಎಲ್‌ನಲ್ಲಿರುವ 14 ಕನ್ನಡಿಗರು: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ (ಪಂಜಾಬ್), ದೇವದತ್ ಪಡಿಕಲ್, ಪವನ್ ದೇಶಪಾಂಡೆ (ಆರ್‌ಸಿಬಿ), ಶ್ರೇಯಸ್ ಗೋಪಾಲ್, ಕೆಸಿ ಕಾರ್ಯಪ್ಪ (ರಾಜಸ್ಥಾನ), ಮನೀಷ್ ಪಾಂಡೆ, ಜೆ. ಸುಚಿತ್ (ಸನ್‌ರೈಸರ್ಸ್‌), ಪ್ರಸಿದ್ಧಕೃಷ್ಣ, ಕರುಣ್ ನಾಯರ್ (ಕೆಕೆಆರ್), ರಾಬಿನ್ ಉತ್ತಪ್ಪ, ಕೆ. ಗೌತಮ್ (ಚೆನ್ನೈ), ಪ್ರವೀಣ್ ದುಬೆ (ಡೆಲ್ಲಿ); ಕೋಚ್: ಅನಿಲ್ ಕುಂಬ್ಳೆ (ಪಂಜಾಬ್).

    ಈ ಸಲ ಕಪ್ ಗೆಲ್ಲದಿದ್ದರೆ ಆರ್‌ಸಿಬಿ ಸಾರಥ್ಯಕ್ಕೂ ವಿರಾಟ್ ವಿದಾಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts