More

    ‘ಲೋಕ’ ಟಿಕೆಟ್​​​ಗೆ ಬಿಜೆಪಿ ಮಾಜಿ ಸಚಿವರಿಂದ ಲಾಬಿ

    ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಕೆ ಸುಧಾಕರ್, ಸಿಟಿ ರವಿ ಸೇರಿದಂತೆ ಅನೇಕರು ಮುಂದಿನ ವರ್ಷ ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ.

    ಹಾಗೆಯೇ ಜಿ.ಎಂ.ಸಿದ್ದೇಶ್ವರ್, ಮಂಗಳಾ ಸುರೇಶ ಅಂಗಡಿ, ಬಿ.ಎನ್.ಬಚ್ಚೇಗೌಡ, ಜಿಎಸ್ ಬಸವರಾಜ್, ಡಿ.ವಿ.ಸದಾನಂದಗೌಡ, ಪಿ.ಸಿ. ಗದ್ದಿಗೌಡರ, ಕರಡಿ ಸಂಗಣ್ಣ, ಶಿವಕುಮಾರ್ ಚನಬಸಪ್ಪ ಉದಾಸಿ ಸೇರಿದಂತೆ ಕನಿಷ್ಠ 10 ಹಾಲಿ ಬಿಜೆಪಿ ಸಂಸದರು ಕಣಕ್ಕಿಳಿಯುವ ಸಾಧ್ಯತೆಯಿಲ್ಲ. ಆದರೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉತ್ತರ ಕನ್ನಡ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ಸಿಗದಿರಬಹುದು.

    ಈಗಾಗಲೇ ಟಿಕೆಟ್ ಸಿಗದೇ ಇರುವ ಸಂಶಯವಿದ್ದರಿಂದ, ಕೇಂದ್ರನಾಯಕರ ಸೂಚನೆಯ ಮೇರೆಗೆ, ವಯೋಮಾನದ ಕಾರಣದಿಂದಾಗಿ ಸದಾನಂದ ಗೌಡ, ಜಿಎಸ್​​​​ ಬಸವರಾಜು, ಬಚ್ಚೇಗೌಡ ಅವರುಗಳು ಈಗಾಗಲೇ ಗೌರವ ಪೂರ್ವಕ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಗದಗ–ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿರುವುದು ಕೂಡ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆಯೇ ಉದಾಸಿ ತಾವೇ ವ್ಯಾಪಾರ ವಹಿವಾಟಿನ ಮೇಲೆ ಗಮನ ಕೇಂದ್ರಕರಿಸಲು ಬಯಸಿದ್ದರು ಎನ್ನಲಾಗಿದೆ.

    2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ತನ್ನ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ. ನಳಿನ್ ಕುಮಾರ್ ಕಟೀಲ್ (ಮಂಗಳೂರು), ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ) ಸುರೇಶ್ ಅಂಗಡಿ (ಬೆಳಗಾವಿ), ಕರಡಿ ಸಂಗಣ್ಣ ಅಮರಪ್ಪ (ಕೊಪ್ಪಳ), ಸಿದ್ದೇಶ್ವರ (ದಾವಣಗೆರೆ) ಮತ್ತು ಪಿಸಿ ಗದ್ದಿಗೌಡರ್ (ಬಾಗಲಕೋಟೆ) ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಅಷ್ಟೊಂದು ಸಕ್ರಿಯವಾಗಿರದ ಕಟ್ಟಾ ಹಿಂದುತ್ವವಾದಿ ಮತ್ತು ಸಂಘಪರಿವಾರದ ನಿಷ್ಠಾವಂತ ವ್ಯಕ್ತಿ ಅನಂತಕುಮಾರ್ ಆರೋಗ್ಯ ಸಮಸ್ಯೆಗಳಿವೆ ಎಂದು ಮೂಲಗಳು ಹೇಳಿವೆ.

    ಟಿಕೆಟ್ ಸಿಗುವ ಅವಕಾಶವೇ ಹೆಚ್ಚು!
    ಇನ್ನು ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡಿರುವ ಮಾಜಿ ಸಚಿವರಾದ ಸುಧಾಕರ್ ಮತ್ತು ನಿರಾಣಿ ಚಿಕ್ಕಬಳ್ಳಾಪುರ ಮತ್ತು ಬಾಗಲಕೋಟೆ ಕ್ಷೇತ್ರಗಳಿಂದ ಕಣಕ್ಕೆ ಇಳಿಯಲು ಕ್ರಮವಾಗಿ ಪ್ರಯತ್ನ ನಡೆಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಕಠಿಣ ಪೈಪೋಟಿ ಇಲ್ಲದೇ ಇರುವುದರಿಂದ ನಿರಾಣಿ ಮತ್ತು ಸುಧಾಕರ್ ಇಬ್ಬರಿಗೂ ಟಿಕೆಟ್ ಪಡೆಯುವ ಹೆಚ್ಚಿನ ಅವಕಾಶ ಹೆಚ್ಚಿದೆ.

    ಯಾರು ಎಲ್ಲಿಂದ?
    ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಈ ಕ್ಷೇತ್ರ ಬಿಜೆಪಿಗೆ ಸೇಫ್​​​. ಪ್ರಸ್ತುತ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಬಿಜೆಪಿಯ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಕೂಡ ಹಾವೇರಿಯಿಂದ ಸೀಟು ಪಡೆಯಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಇಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಕೂಡ ಆಕಾಂಕ್ಷಿಯಾಗಿದ್ದರಲ್ಲದೆ, ಈಶ್ವರಪ್ಪ ತಮ್ಮ ಪುತ್ರನೊಂದಿಗೆ ಎರಡು ಬಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಹಾಗೆಯೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದಾವಣಗೆರೆಯಿಂದ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.

    ವಿ ಸೋಮಣ್ಣ ನಿರ್ಧಾರವೇನು?
    ವಿ ಸೋಮಣ್ಣ ಅವರು ತುಮಕೂರಿನಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಸೇರ್ಪಡೆ ಇನ್ನೂ ನಿರ್ಧಾರವಾಗಿಲ್ಲ, ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸೋಮಣ್ಣ ಅವರು ಬಿಜೆಪಿಯಲ್ಲಿ ಮುಂದುವರಿಯಬೇಕೇ ಅಥವಾ ಕಾಂಗ್ರೆಸ್ ಸೇರಬೇಕೇ ಎಂಬ ಬಗ್ಗೆ ತಮ್ಮ ಅನುಯಾಯಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಸೋಮಣ್ಣ ಅವರು ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧಕ-ಬಾಧಕಗಳನ್ನು ಅಳೆದು ತೂಗಿ ಡಿಸೆಂಬರ್‌ನಲ್ಲಿ ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.

    ನಿಜ್ಜರ್​​​​ ನಂತರ ಪನ್ನು ಹತ್ಯೆಯ ಭಯ; ಅಮೆರಿಕದ ಗುರುದ್ವಾರದಲ್ಲಿ ಭಾರತೀಯ ರಾಯಭಾರಿಯನ್ನು ತಳ್ಳಾಡಿದ ಖಲಿಸ್ತಾನಿ ಬೆಂಬಲಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts