More

    ಉದ್ಧಟತನಕ್ಕೆ ಕನ್ನಡಿಗರ ಚಾಟಿ: ಗಡಿ ಕ್ಯಾತೆಗೆ ಪಕ್ಷಾತೀತ ಖಂಡನೆ, ಮಹಾ ಕ್ಷುಲ್ಲಕ ರಾಜಕಾರಣಕ್ಕೆ ಆಕ್ರೋಶ

    ಬೆಂಗಳೂರು: ಅಖಂಡ ಕರ್ನಾಟಕದ ಅವಿಭಾಜ್ಯ ಭಾಗವಾಗಿರುವ ಬೆಳಗಾವಿ, ಕಾರವಾರ, ನಿಪ್ಪಾಣಿಗಳು ‘ಕರ್ನಾಟಕ ಆಕ್ರಮಿತ ಪ್ರದೇಶಗಳೆಂಬ’ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬೇಜವಾಬ್ದಾರಿಯುತ ಹಾಗೂ ರಾಜಕೀಯ ದುರುದ್ದೇಶದ ಹೇಳಿಕೆಯ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದಾರೆ. ನಾಡು, ನುಡಿ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಒಗ್ಗಟ್ಟಿನ ಕೂಗು ಪಕ್ಷಾತೀತವಾಗಿ ಪ್ರತಿಧ್ವನಿಸಿರುವಂತೆಯೇ ರಾಜ್ಯದ ಹಲವೆಡೆ ಪ್ರತಿಭಟನೆ ಆರಂಭವಾಗಿದೆ. ಈ ನಡುವೆ ಮಹಾರಾಷ್ಟ್ರದ ಗಡಿ ತಗಾದೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಂಗಳವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರದಲ್ಲಿ ವಿಲೀನಗೊಳಿಸುವುದೇ ನನ್ನ ಆದ್ಯತೆ’ ಎಂದು ಉದ್ಧವ್ ಠಾಕ್ರೆ ಭಾನುವಾರ ಟ್ವೀಟ್ ಮಾಡಿ ಕನ್ನಡಿಗರನ್ನು ಕೆಣಕಿದ್ದರು. ಅವರ ಈ ನಡೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದ ಎಲ್ಲ ಸಚಿವರು, ಪಕ್ಷಾತೀತವಾಗಿ ಎಲ್ಲ ಶಾಸಕರು, ಮುಖಂಡರು, ಕನ್ನಡ ಸಂಘಟನೆಗಳಿಂದಲೂ ಖಂಡನೆ ವ್ಯಕ್ತವಾಗಿದೆ.

    ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಗುರುತಿಸುವುದು ಸಂವಿಧಾನಬದ್ಧವಾಗಿ ಮುಗಿದುಹೋದ ವಿಚಾರ. ಈ ಕುರಿತು ಮುಖ್ಯಮಂತ್ರಿಯೊಬ್ಬರು ಹೇಳಿಕೆ ನೀಡುವುದು ಅನಪೇಕ್ಷಿತ. ರಾಜಕಾರಣಿಗಳು ಸ್ವಾರ್ಥಸಾಧನೆಗಾಗಿ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ರಾಷ್ಟ್ರ ಮಟ್ಟದಲ್ಲೂ ಠಾಕ್ರೆ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.

    ‘ಉದ್ಧವ್ ಠಾಕ್ರೆ ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ’ ಎಂದು ಸಿಎಂ ಯಡಿಯೂರಪ್ಪ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ‘ಪ್ರ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ’ ಎಂದು ಬಿಎಸ್​ವೈ ಹೇಳಿದ್ದಾರೆ.

    ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಪಕ್ಷದ ಚೌಕಟ್ಟಿನ ಹೊರಗೆ ನಿಂತು ಹರಿತ ಮಾತುಗಳಲ್ಲಿ ಉದ್ಧವ್​ರನ್ನು ತರಾಟೆಗೆ ತೆಗೆದುಕೊಂಡರು. ಉದ್ಧವ್ ಠಾಕ್ರೆ ಅವರ ಅಧಿಕ ಪ್ರಸಂಗತನದ ಹೇಳಿಕೆ ಖಂಡನೀಯ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ, ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ ಎಂದು ಅವರು ಪ್ರತಿಕ್ರಿಯಿಸಿದರು. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿಎಂ ಎನ್ನುವುದನ್ನು ಮರೆಯಬೇಡಿ. ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ ಎಂದು ಮಹಾರಾಷ್ಟ್ರದಲ್ಲಿ ತಮ್ಮದೇ ಪಕ್ಷ ಪಾಲುದಾರನಾಗಿರುವ ಸರ್ಕಾರದ ಮುಖ್ಯಮಂತ್ರಿಯನ್ನು ಛೇಡಿಸಿದರು.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಂತವಾಗಿರುವ ಬೆಳಗಾವಿ ಪರಿಸ್ಥಿತಿ ಕದಡುವ ಪ್ರಯತ್ನ ಇದು, ಆದರೆ ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಮಹಾಜನ್ ವರದಿಯೇ ಅಂತಿಮ. ರಾಜ್ಯದ ಒಂದಿಂಚೂ ಭೂಮಿ ಬಿಡಲ್ಲ. ಸೊಲ್ಲಾಪುರ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ. ಆ ಭಾಗಗಳನ್ನು ನಾವು ಸೇರಿಸಿಕೊಳ್ಳೋಕೆ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಗುಡುಗಿದರು. ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ನವರು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವಂತೆ ಅವರ ಪಕ್ಷದ ಹೈಕಮಾಂಡ್ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

    ಉಸ್ತುವಾರಿಗಳಿಗೆ ಸಂಕಟ: ಗಡಿ ಸಂಘರ್ಷ ಕಾವೇರಿರುವ ಸಂದರ್ಭದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿಯ ಮಹಾರಾಷ್ಟ್ರ ಉಸ್ತುವಾರಿಗಳಿಗೆ ಉಭಯ ಸಂಕಟ ಶುರುವಾಗಿದೆ. ಬಿಜೆಪಿಯಿಂದ ಸಿ.ಟಿ.ರವಿ ಹಾಗೂ ಕಾಂಗ್ರೆಸ್​ನಿಂದ ಎಚ್.ಕೆ. ಪಾಟೀಲ್ ಮಹಾರಾಷ್ಟ್ರದ ಹೊಣೆಗಾರಿಕೆ ಹೊತ್ತಿದ್ದಾರೆ. ಈ ವಿಚಾರ ಇಟ್ಟುಕೊಂಡು ಏನೇ ಅಭಿಪ್ರಾಯ ನೀಡಿದರೂ ಆ ರಾಜ್ಯದಲ್ಲಿ ಅವರವರದೇ ಪಕ್ಷದಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ. ಈ ಕಾರಣಕ್ಕೆ ಈ ವಿಚಾರ ಬೇಗ ಮುಗಿಯಲಿ ಎಂದೇ ಆಶಿಸಿದ್ದಾರೆ. ಈ ನಡುವೆಯೂ ಸಿ.ಟಿ.ರವಿ ಮಾತನಾಡಿದ್ದು, ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಗಡಿ ಅನ್ಯಾಯವಾಗಿದ್ದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಾಂಗ್ರೆಸನ್ನು ಪ್ರಶ್ನಿಸಲಿ ಎಂದಿದ್ದಾರೆ. ಜತೆಗೆ ಕಾಂಗ್ರೆಸ್ ಹೆಗಲ ಮೇಲೆ ಕುಳಿತು ಸಿಎಂ ಆಗಿ ವಿವಾದ ಮಾಡುವುದು ಅನ್ಯಾಯ ಮಾಡಿದವರ ಹೆಗಲ ಮೇಲೆ ಕುಳಿತು ಮಾತನಾಡಿದಂತೆ ಎಂದು ಠಾಕ್ರೆಯವರನ್ನು ಮಾತಿನಲ್ಲೇ ಚುಚ್ಚಿದ್ದಾರೆ.

    ಬಳ್ಳಾರಿಗಾಗಿ ಆಂಧ್ರದ ಕಿರಿಕ್

    ಬಳ್ಳಾರಿ: ಅತ್ತ ಮಹಾರಾಷ್ಟ್ರದ ಬಳಿಕ ಇತ್ತ ಆಂಧ್ರದಲ್ಲಿ ಬಳ್ಳಾರಿ ಪರ ಕೂಗು ಪ್ರತಿಧ್ವನಿಸಿದೆ. ಬಳ್ಳಾರಿ ಜಿಲ್ಲೆ ವಿಭಜನೆಯ ಲಾಭ ಪಡೆಯಲು ಮುಂದಾಗಿರುವ ಆಂಧ್ರದ ರಾಜಕೀಯ ಮುಖಂಡರು ಬಳ್ಳಾರಿಯನ್ನು ಆಂಧ್ರಕ್ಕೆ ಸೇರ್ಪಡೆ ಮಾಡಿ, ಜಿಲ್ಲೆಯಾಗಿ ಮುಂದುವರಿಸುವಂತೆ ವರಾತ ತೆಗೆದಿದ್ದಾರೆ. ಆಂಧ್ರದ ಕರ್ನಲು ಜಿಲ್ಲೆ ವ್ಯಾಪ್ತಿಯ ಆಲೂರು ತಾಲೂಕನ್ನು ಬಳ್ಳಾರಿಗೆ ಸೇರ್ಪಡೆ ಮಾಡಬೇಕು. ಈ ಮೂಲಕ ಆಲೂರು ತಾಲೂಕು ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಹೊಳಗುಂದದ ಪ್ರಮುಖ ಮುಖಂಡ ಗಡಿಗಿ ಬಸವರಾಜ ಎಂಬುವವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಬ್ರಿಟಿಷರ ಆಡಳಿತದಲ್ಲಿ ಬಳ್ಳಾರಿ ಆಂಧ್ರದಲ್ಲಿತ್ತು ಎಂದು ಅವರು ವಾದಿಸಿದ್ದಾರೆ.

    ಸುಪ್ರೀಂಕೋರ್ಟ್ ಮೊರೆ?: ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಸಲಹೆಯಂತೆ ಗಡಿ ತಗಾದೆ ತೆಗೆದಿರುವ ಮಹಾರಾಷ್ಟ್ರ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಹಾಕುವ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    ನಮ್ಮಲ್ಲಿನ ಒಂದಿಂಚು ಜಾಗವನ್ನೂ ಬಿಟ್ಟುಕೊಡಲ್ಲ. ತಮ್ಮ ಖುರ್ಚಿ ಉಳಿಸಿಕೊಳ್ಳಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯಕ್ಕಾಗಿ ಹೇಳಿಕೆ ನೀಡುವುದನ್ನು ಬಿಡಲಿ.

    | ಬಿ.ಎಸ್.ಯಡಿಯೂರಪ್ಪ ಸಿಎಂ

    ಉದ್ಧವ್ ಠಾಕ್ರೆಯವರೇ, ಕನ್ನಡಿಗರು ಶಾಂತಿ ಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ.

    | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

    ಉದ್ಧವ್ ಠಾಕ್ರೆ ಹೇಳಿಕೆ ಚೀನಾದ ವಿಸ್ತರಣಾ ವಾದವನ್ನು ಧ್ವನಿಸುತ್ತಿದೆ. ಬೆಳಗಾವಿಯಲ್ಲಿ ಸಹಬಾಳ್ವೆ ನಡೆಸುತ್ತಿರುವವರಲ್ಲಿ ವಿಷ ಬೀಜ ಬಿತ್ತುವುದನ್ನು ದೇಶದ್ರೋಹಿ ಕೃತ್ಯ ಎಂದೆನ್ನಬೇಕಾಗುತ್ತದೆ.

    | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

    ರಾಜ್ಯದ ನಾಯಕರ ವಾದ

    • ಠಾಕ್ರೆ ಒಮ್ಮೆ ಇತಿಹಾಸ ಅವಲೋಕಿಸಿದರೆ ಯಾರು ಯಾರ ಪ್ರದೇಶ ಆಕ್ರಮಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಯಾರು ಯಾರ ಪ್ರದೇಶ ಬಿಟ್ಟುಕೊಡಬೇಕೆಂಬುದೂ ತಿಳಿಯುತ್ತದೆ.
    • ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದದ ಮಾತುಗಳು ಸೌಹಾರ್ದಕ್ಕೆ ಧಕ್ಕೆ ತರಲಿದೆ.
    • ಆ ಸರ್ಕಾರಕ್ಕೆ ಜನಬೆಂಬಲ ಇಲ್ಲ. ಜನರ ಬೆಂಬಲ ಕಳೆದುಕೊಂಡು ಠಾಕ್ರೆ ಭಾವನಾತ್ಮಕವಾದ ವಿಚಾರ ಮಾತಾಡ್ತಾರೆ. ಪಾಕಿಸ್ತಾನದಲ್ಲಿ ರಾಜಕೀಯ ಅತಂತ್ರ ಆದಾಗ ಅಲ್ಲಿನ ಪ್ರಧಾನಿ ಹೀಗೆ ಹೇಳಿಕೆ ಕೊಡ್ತಾರೆ
    • ದೇಶಕ್ಕೆ ಸ್ವಾತಂತ್ರ್ಯಬಂದು ಎಪ್ಪತ್ತು ವರ್ಷಗಳಾದರೂ ಇನ್ನೂ ಗಡಿ ವಿಷಯ ಇಟ್ಟುಕೊಂಡು ರಾಜಕಾರಣ ಮಾಡುವ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಮಾರಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts