More

  ಗಡಿ ಕ್ಯಾತೆ ಬಿಡಿ, ಕೆರಳಿಸುವ ಕೆಲಸ ಮಾಡ್ಬೇಡಿ

  ಬೆಂಗಳೂರು: ಮಹಾರಾಷ್ಟ್ರದಲ್ಲಿ ‘ಅಘಾಡಿ’ ಸರ್ಕಾರ ರಚನೆಯಾಗುತ್ತಿದ್ದಂತೆ ಗಡಿ ತಕರಾರು ಹೆಚ್ಚಿದೆ. ಆ ರಾಜ್ಯದ ರಾಜಕೀಯ ಮುಖಂಡರು ದಿನಕ್ಕೊಂದು ಕ್ಯಾತೆ ತೆಗೆಯುತ್ತಿದ್ದು, ಇದೀಗ ಕರ್ನಾಟಕದ ಕಡೆಯಿಂದ ತೀಕ್ಷ್ಣ ಪ್ರತಿಕ್ರಿಯೆ ಹೊರಬಿದ್ದಿದೆ.

  ‘ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರ ಮಹಾಜನ್ ವರದಿಯಲ್ಲೇ ಇತ್ಯರ್ಥ ಆಗಿದೆ. ಈ ವಿಚಾರವಾಗಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡುವುದು ಸೂಕ್ತ’ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್​ಗೆ ಉಪಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥನಾರಾಯಣ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಡಿ ವಿಚಾರವಾಗಿ ಪದೇಪದೆ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸ ಕೈ ಬಿಡಬೇಕು. ಈ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದು ಅನಗತ್ಯ. ಇಂಥ ವಿಷಯ ಬಿಟ್ಟು, ಮಾಡಬೇಕಿರುವ ಉತ್ತಮ ಕಾರ್ಯಗಳನ್ನು ಕೈಗೆತ್ತಿಕೊಂಡರೆ ಒಳ್ಳೆಯದು’ ಎಂದು ಕಿವಿಮಾತು ಹೇಳಿದರು.

  ಸಂಜಯ್ ರಾವತ್ ತಿಳಿವಳಿಕೆ ಇರುವ ವ್ಯಕ್ತಿ. ಇಂಥ ಕ್ಷುಲ್ಲಕ ವಿಷಯದಲ್ಲಿ ಹೆಸರು ಹಾಳು ಮಾಡಿಕೊಳ್ಳಬಾರದು. ಮಾನವೀಯತೆಗೆ, ಒಳ್ಳೆಯ ಕಾರ್ಯಗಳಿಗೆ ಗಡಿ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಅನಗತ್ಯ ವಿವಾದ ಎಳೆದು ತಂದು ಸಮಾಜದ ಶಾಂತಿ ಹಾಳುಗೆಡವಬಾರದು ಎಂದು ಮನವಿ ಮಾಡಿದರು.

  ಯಾರು ಏನೇ ಹೇಳಿದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಮಹಾರಾಷ್ಟ್ರದ ಯಾವುದೇ ಜನ ಏನೇ ಮಾತಾಡಿದರೂ ಅದು ಮುಗಿದು ಹೋದ ಅಧ್ಯಾಯ. ಈ ಬಗ್ಗೆ ಮಾತಾಡೋದನ್ನು ಮಹಾರಾಷ್ಟ್ರ ಮುಖಂಡರು ನಿಲ್ಲಿಸಲಿ.

  | ವಿ.ಎಸ್.ಉಗ್ರಪ್ಪ ಮಾಜಿ ಸಂಸದ

  ಷಾರಿಂದ ವಿವಾದ ಇತ್ಯರ್ಥ!

  ಬೆಳಗಾವಿ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮನಸ್ಸು ಮಾಡಿದರೆ, ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದ ಬಗೆಹರಿಸಬಹುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದರು. ಗಡಿ ತಕರಾರು ಗೃಹ ಸಚಿವಾಲಯ ವ್ಯಾಪ್ತಿಗೆ ಬರುತ್ತದೆ. ದೀರ್ಘ ಕಾಲದಿಂದ ಬಾಕಿಯಿರುವ ಗಡಿ ಸಮಸ್ಯೆ ಪರಿಹಾರಕ್ಕೆ ಅವರು ಗಮನ ನೀಡಬೇಕು ಎಂದರು.

  ಗಡಿ ತಕರಾರು ಒತ್ತಟ್ಟಿಗಿರಲಿ. ಭಾಷಾ ವಿವಾದಕ್ಕೆ ಕೈ ಹಾಕಬೇಡಿ ಎನ್ನುವುದು ಕರ್ನಾಟಕ ಸಿಎಂಗೆ ನನ್ನ ಮನವಿ.

  | ಸಂಜಯ್ ರಾವತ್ ರಾಜ್ಯಸಭೆ ಸದಸ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts