More

    ಮಯಾಂಕ್ ಬಳಗಕ್ಕೆ ಹ್ಯಾಟ್ರಿಕ್ ಗೆಲುವು: ದೆಹಲಿ ಎದುರು ಕರ್ನಾಟಕ 6 ವಿಕೆಟ್‌ಗಳ ಜಯಭೇರಿ

    ಅಹಮದಾಬಾದ್: ಸಂಘಟಿತ ನಿರ್ವಹಣೆ ತೋರಿದ ಕರ್ನಾಟಕ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ವೇಗಿಗಳಾದ ವಿ.ಕೌಶಿಕ್ (19ಕ್ಕೆ3) ಹಾಗೂ ವಿದ್ವತ್ ಕಾವೇರಪ್ಪ (25ಕ್ಕೆ3) ಬಿಗಿ ದಾಳಿ ಮತ್ತು ಎಡಗೈ ಬ್ಯಾಟರ್ ದೇವದತ್ ಪಡಿಕಲ್ (70 ರನ್, 69 ಎಸೆತ, 3 ಬೌಂಡರಿ, 6 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ದೆಹಲಿ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಪಡೆ ಜಯದ ಓಟವನ್ನು 3ನೇ ಪಂದ್ಯಕ್ಕೆ ವಿಸ್ತರಿಸಿ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    ಸರ್ದಾರ್ ಪಟೇಲ್ ಬಿ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಮಳೆಭಾದಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ದೆಹಲಿ ತಂಡ, ಆಯೂಷ್ ಬಡೋನಿ (100 ರನ್, 106 ಎಸೆತ, 12 ಬೌಂಡರಿ, 4 ಸಿಕ್ಸರ್) ಶತಕದ ನಡುವೆಯೂ 36.3 ಓವರ್‌ಗಳಲ್ಲಿ 143 ರನ್‌ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಆರಂಭದ ನಡುವೆ ದೇವದತ್ ಪಡಿಕಲ್ ಹಾಗೂ ಅನುಭವಿ ಮನೀಷ್ ಪಾಂಡೆ (28*) ಜೋಡಿ 4ನೇ ವಿಕೆಟ್‌ಗೆ ಪೇರಿಸಿದ 57 ರನ್‌ಗಳ ಬಲದಿಂದ ಕರ್ನಾಟಕ ತಂಡ 27.3 ಓವರ್‌ಗಳಲ್ಲಿ 4 ವಿಕೆಟ್‌ಗೆ 144 ರನ್‌ಗಳಿಸಿ ಜಯಭೇರಿ ಬಾರಿಸಿತು.

    ದೆಹಲಿ: 36.3 ಓವರ್‌ಗಳಲ್ಲಿ 143 (ಪ್ರಿಯಾಂಶ್ 15, ಅನುಜ್ 1, ಯಶ್ ಧುಲ್ 11, ಆಯೂಷ್ ಬಡೋನಿ 100, ವಿದ್ವತ್ 25ಕ್ಕೆ3, ಕೌಶಿಕ್ 19ಕ್ಕೆ3, ವೈಶಾಕ್ 27ಕ್ಕೆ2, ಗೌತಮ್ 32ಕ್ಕೆ2). ಕರ್ನಾಟಕ: 27.3 ಓವರ್‌ಗಳಲ್ಲಿ 4 ವಿಕೆಟ್‌ಗೆ 144 (ಆರ್. ಸಮರ್ಥ್ 2, ಮಯಾಂಕ್ 12, ಪಡಿಕಲ್ 70, ನಿಕಿನ್ ಜೋಸ್ 13, ಮನೀಷ್ 28*, ಬಿಆರ್ ಶರತ್ 7*, ಮಯಾಂಕ್ ಯಾದವ್ 18ಕ್ಕೆ1).

    ಸಂಘಟಿತ ದಾಳಿ
    ಮೊದಲು ಬ್ಯಾಟಿಂಗ್ ಇಳಿದ ದೆಹಲಿ ತಂಡಕ್ಕೆ 2ನೇ ಓವರ್‌ನಲ್ಲಿ ವಿ.ಕೌಶಿಕ್, ಅನುಜ್ ರಾವತ್ (1) ವಿಕೆಟ್ ಉರುಳಿಸಿದರು. 47 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ದೆಹಲಿ 100ರ ಗಡಿ ದಾಟುವುದು ದುಸ್ತರ ಎನಿಸಿದಾಗ, ಕೆಳ ಸರದಿಯ ಬ್ಯಾಟರ್‌ಗಳೊಂದಿಗೆ ಏಕಾಂಗಿ ಹೋರಾಟ ನಡೆಸಿದ ಆಯೂಷ್ ಬಡೋನಿ 102 ಎಸೆತದಲ್ಲಿ ಶತಕ ಸಿಡಿಸಿದರು. 9ನೇ ವಿಕೆಟ್‌ಗೆ ಅನುಭವಿ ಇಶಾಂತ್ ಶರ್ಮ (1) ಜತೆಯಾಗಿ 38 ರನ್ ಕಲೆಹಾಕಿದರು. ಇದರಲ್ಲಿ ಬಡೋನಿ ಒಬ್ಬರೇ 37 ರನ್ ಪೇರಿಸಿದರು. ವಿದ್ವತ್, ಕಾಶಿಕ್ ದಾಳಿಗೆ ವೈಶಾಕ್ ವಿಜಯ್ ಕುಮಾರ್ (27ಕ್ಕೆ2), ಕೆ.ಗೌತಮ್ (32ಕ್ಕೆ2) ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts