More

    ಓದು- ಬರಹದಿಂದ ಬುದ್ಧಿಮತ್ತೆ ಬೆಳವಣಿಗೆ

    ಧಾರವಾಡ: ಓದುವ ಹವ್ಯಾಸವು ಬರೆಯುವ ಸಂವಹನಾ ಕೌಶಲ ಹೆಚ್ಚಿಸುತ್ತದೆ. ಇದರಿಂದ ಮಕ್ಕಳ ಬುದ್ಧಿಮತ್ತೆ ಬೆಳವಣಿಗೆಯಾಗಿ ಸೃಜನಶೀಲತೆ ಹೆಚ್ಚುತ್ತದೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಪರ ಆಯುಕ್ತ ಹಾಗೂ ಸಾಹಿತಿ ವೆಂಕಟೇಶ ಮಾಚಕನೂರ ಹೇಳಿದರು.
    ನಗರದ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಕಲಬುರ್ಗಿ ವಿಭಾಗ ಮಟ್ಟದ ಬಾಲಮಂದಿರದ ಆಯ್ದ 48 ಮಕ್ಕಳಿಗೆ ಆಯೋಜಿಸಿದ್ದ ಕಥಾಕಮ್ಮಟದ ಸಮಾರೋಪದಲ್ಲಿ ಮಕ್ಕಳು ಕಮ್ಮಟದಲ್ಲಿ ರಚಿಸಿದ ಕಥೆಗಳ ಸಂಗ್ರಹದ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಮಕ್ಕಳಲ್ಲಿಯ ಭಾವನೆಗಳನ್ನು ಕಥೆ ಬರೆಯುವುದರ ಮೂಲಕ ಅಭಿವ್ಯಕ್ತಿಗೊಳಿಸಲು ಅವಕಾಶವಿದೆ. ಇಂದು ಶಹರದ ಮಕ್ಕಳನ್ನು ಕೇವಲ ಅಕ್ಷರ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿರುವ ಸೃಜನಶೀಲತೆ ಕಮರಿ ಹೋಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
    ಅತಿಥಿಯಾಗಿ ಭಾಗವಹಿಸಿದ್ದ ಡಾ. ನಿಂಗು ಸೊಲಗಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ತಾಯಿ ಗುಣ ಶಿಕ್ಷಕರು ಮತ್ತು ಮಕ್ಕಳ ಸಂಸ್ಥೆಗಳ ಮುಖ್ಯಸ್ಥರಲ್ಲಿ ಇರಬೇಕು ಎಂದರು.
    ಕಥಾ ಕಮ್ಮಟ ಶಿಬಿರದ ನಿರ್ದೇಶಕ ಶಂಕರ ಹಲಗತ್ತಿ ಮಾತನಾಡಿ, ರಾಜ್ಯದ ಬಾಲಮಂದಿರದಲ್ಲಿಯ ಮಕ್ಕಳು ಮಾನಸಿಕವಾಗಿ ಕುಗ್ಗಿರುತ್ತಾರೆ. ಸರ್ಕಾರ ಎಲ್ಲ ಸೌಕರ್ಯಗಳನ್ನು ನೀಡಿದರೂ ಮಕ್ಕಳೊಂದಿಗೆ ಆತ್ಮೀಯವಾಗಿ ನಡೆದುಕೊಂಡಾಗ ಮಾತ್ರ ಮಾನಸಿಕ ದುರ್ಬಲತೆಯಿಂದ ಹೊರಬರಲು ಸಾಧ್ಯ ಎಂದರು.
    ಅಕಾಡೆಮಿಯ ಯೋಜನಾಧಿಕಾರಿ ಭಾರತಿ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತಣ್ಣ ಸಿ.ಎ ನಿರೂಪಿಸಿದರು. ಕಲಬುರ್ಗಿ ವಿಭಾಗದ 6 ಜಿಲ್ಲೆಗಳ ಬಾಲಮಂದಿರದ ಸಮಾಲೋಚಕರು, ರಕ್ಷಕರು ಉಪಸ್ಥಿತರಿದ್ದರು. ಮಕ್ಕಳಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts