More

    ಇಂದು ಕರ್ನಾಟಕ-ತಮಿಳುನಾಡು ; ದೇಶೀಯ ಟಿ20 ಕಿರೀಟಕ್ಕಾಗಿ ಕೋಟ್ಲಾದಲ್ಲಿ ಸದರ್ನ್ ಡರ್ಬಿ

    ನವದೆಹಲಿ: ದೇಶೀಯ ಕ್ರಿಕೆಟ್‌ನ ಸಂಪ್ರಾದಾಯಿಕ ಎದುರಾಳಿಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಸಯ್ಯದ್ ಮುಷ್ತಾಕ್ ಟ್ರೋಫಿ ಟಿ20 ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಸೋಮವಾರ ಎದುರಾಗಲಿವೆ. ಫಿರೋಜ್ ಷಾ ಕೋಟ್ಲಾ ಆವರಣದ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ‘ಸದರ್ನ್ ಡರ್ಬಿ’ ದೇಶೀಯ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. 2019ರಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಕರ್ನಾಟಕ ತಂಡ 1 ರನ್‌ನಿಂದ ತಮಿಳುನಾಡು ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ತಮಿಳುನಾಡು ತಂಡ ಹಾಲಿ ಚಾಂಪಿಯನ್ ಆಗಿದ್ದರೂ ಎರಡು ವರ್ಷಗಳ ಹಿಂದೆ ಅನುಭವಿಸಿದ್ದ ಸೋಲು ಇನ್ನೂ ಕಾಡುತ್ತಿದೆ. ಯಾರೇ ಗೆದ್ದರೂ 3ನೇ ಬಾರಿ ಟ್ರೋಫಿ ಜಯಿಸಿದಂತಾಗುತ್ತದೆ. ಕರ್ನಾಟಕ ತಂಡ ಟೂರ್ನಿಯಲ್ಲಿ ತಮಿಳುನಾಡು ತಂಡದ ಎದುರು 2017ರಿಂದಲೂ ಅಜೇಯ ಸಾಧನೆ ಮಾಡಿದೆ.

    * ಆತ್ಮವಿಶ್ವಾಸದಲ್ಲಿ ಮನೀಷ್ ಪಾಂಡೆ ಬಳಗ
    ಸ್ಟಾರ್ ಆಟಗಾರರ ಅನುಪಸ್ಥಿತಿ ನಡುವೆಯೂ ಅನನುಭವಿಗಳೇ ಕರ್ನಾಟಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಬಂಗಾಳ, ಸೆಮೀಸ್‌ನಲ್ಲಿ ವಿದರ್ಭ ತಂಡವನ್ನು ರೋಚಕವಾಗಿ ಮಣಿಸಿರುವ ಕರ್ನಾಟಕ ಬಲಿಷ್ಠ ತಂಡದ ಸವಾಲಿಗೆ ಸನ್ನದ್ಧವಾಗಿದೆ. ಎಡಗೈ ಬ್ಯಾಟರ್ ರೋಹನ್ ಕದಂ, ನಾಯಕ ಮನೀಷ್ ಪಾಂಡೆ, ಅನುಭವಿ ಕರುಣ್ ನಾಯರ್, ಅಭಿನವ್ ಮನೋಹರ್ ಉತ್ತಮ ಲಯದಲ್ಲಿದ್ದಾರೆ. ವಿದರ್ಭ ಎದುರು ಭರ್ಜರಿ ಬ್ಯಾಟಿಂಗ್ ಮೂಲಕವೇ ಕರ್ನಾಟಕದ ಆರಂಭಿಕರು ಗಮನಸೆಳೆದಿದ್ದರು. ಆದರೆ, ತಂಡವನ್ನು ದಿಢೀರ್ ಕುಸಿತದ ಭೀತಿ ಕಾಡುತ್ತಿದೆ. ವಿದರ್ಭ ಎದುರಿನ ಕಡೇ ಓವರ್‌ನಲ್ಲಿ ಕರ್ನಾಟಕ ಸತತ 4 ಎಸೆತಗಳಲ್ಲಿ 4 ವಿಕೆಟ್ ಕೈಚೆಲ್ಲಿತು. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಮನೀಷ್ ಬಳಗ ಬಲಿಷ್ಠವಾಗಿಯೇ ಇದೆ. ಸ್ಪಿನ್ನರ್‌ಗಳಾದ ಜೆ.ಸುಚಿತ್, ಲೆಗ್ ಸ್ಪಿನ್ನರ್ ಕೆಸಿ ಕಾರ್ಯಪ್ಪ ಇದುವರೆಗೂ ಎದುರಾಳಿ ತಂಡಗಳಿಗೆ ಕಡಿವಾಣ ಹಾಕಲು ಯಶಸ್ವಿಯಾಗಿದ್ದಾರೆ. ವೇಗಿಗಳಾದ ವೈಶಾಕ್ ವಿಜಯ್‌ಕುಮಾರ್, ಎಂಬಿ ದರ್ಶನ್ ಹಾಗೂ ವಿದ್ಯಾಧರ್ ಪಾಟೀಲ್ ಕೊಂಚ ದುಬಾರಿಯಾದರೂ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

    * ಸತತ 2ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ತ.ನಾಡು
    ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ತಮಿಳುನಾಡು ತಂಡ ಬಲಿಷ್ಠ ಆಟಗಾರರ ಬೆಂಬಲ ಹೊಂದಿದೆ. ಎನ್.ಜಗದೀಶನ್, ನಿಶಾಂತ್, ಸಾಯಿ ಸುದರ್ಶನ್ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದರೆ, ನಾಯಕ ವಿಜಯ್ ಶಂಕರ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ, ತಂಡದ ಆಲ್ರೌಂಡರ್ ಶಾರುಖ್ ಖಾನ್ ಇದುವರೆಗೆ ಸ್ಫೋಟಿಸಿಲ್ಲ. ಕೇರಳದಿಂದ ವಲಸೆ ಬಂದಿರುವ ವೇಗಿ ಸಂದೀಪ್ ವಾರಿಯರ್ ಜತೆಗೆ ಪಿ.ಸರವಣ ಕುಮಾರ್, ಸಾಯಿ ಕಿಶೋರ್, ಎಂ.ಅಶ್ವಿನ್, ಆರ್. ಸಂಜಯ್ ಯಾದವ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿಯೇ ಇದೆ.

    ಪಂದ್ಯ ಆರಂಭ: ಮಧ್ಯಾಹ್ನ 12.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1.

    ಮುಖಾಮುಖಿ: 10, ಕರ್ನಾಟಕ: 6, ತಮಿಳುನಾಡು: 3, ಟೈ: 1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts