More

    ಜನಮನ ಸೆಳೆದ ಕರಿ ನೀರ ವೀರ ನಾಟಕ ಪ್ರದರ್ಶನ

    ಶಿಕಾರಿಪುರ: ರಂಗಕರ್ಮಿ, ನಟ ನಿರ್ದೇಶಕ, ನಾಟಕಕಾರ ಕಾರ್ಯಪ್ಪ ಅವರ ರಂಗಭೂಮಿ ಟ್ರಸ್ಟ್ ಮತ್ತು ಸುಗಂಧ ಬಳಗದ ಸಹಯೋಗದಲ್ಲಿ ಮಂಗಳವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಪ್ರದರ್ಶನಗೊಂಡ ಸ್ವಾತಂತ್ರ ಸೇನಾನಿ ಸಾವರ್ಕರ್ ಕುರಿತ ಕರಿ ನೀರ ವೀರ ನಾಟಕ ಜನಮನ ಸೆಳೆಯಿತು.
    ಸಾವರ್ಕರ್ ಅವರ ಬದುಕಿನ ನೋವು ನಲಿವು, ಅವರ ಜೀವನದ ಮಹತ್ತರ ಘಟನೆಗಳು, ಬ್ರಿಟಿಷ್ ಸರ್ಕಾರದ ವಿರುದ್ಧ ನಡೆದ ಅವರ ಸ್ವಾತಂತ್ರ ಹೋರಾಟದ ಚಿತ್ರಣವನ್ನು ಸಮರ್ಥವಾಗಿ ರಂಗಭೂಮಿಯ ಮೇಲೆ ತರಲಾಗಿತ್ತು. ಸುಮಾರು 22ಕ್ಕೂ ಹೆಚ್ಚು ಕಲಾವಿದರಿಂದ ಅಭಿನಯಿಸಲ್ಪಟ್ಟ ಈ ನಾಟಕದಲ್ಲಿ ಪ್ರತಿಯೊಂದು ಪಾತ್ರಕ್ಕೂ ಕಲಾವಿದರು ಜೀವ ತುಂಬಿದರು. ಸಾವರ್ಕರ್ ಪಾತ್ರದಲ್ಲಿನ ಕಲಾವಿದನ ಮನೋಜ್ಞ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
    ಈಗಾಗಲೇ ರಾಜ್ಯಾದ್ಯಂತ 23 ಪ್ರದರ್ಶನಗಳನ್ನು ಪೂರೈಸಿ ಶಿಕಾರಿಪುರದಲ್ಲಿ ಈ ನಾಟಕ 24ನೇ ಪ್ರದರ್ಶನ ಕಾಣುತ್ತಿದೆ. ಹಿಂದಿನ 23 ಶೋಗಳಿಗೂ 200 ರೂ. ಟಿಕೆಟ್ ದರವನ್ನು ನಿಗದಿಪಡಿಸಲಾಗಿತ್ತು. ಆದರೆ ಶಿಕಾರಿಪುರದಲ್ಲಿ ಉಚಿತ ಪ್ರದರ್ಶನ ನೀಡುತ್ತಿದ್ದಾರೆ.
    ಸಾವರ್ಕರ್ ಎನ್ನುವುದು ಕೇವಲ ಒಂದು ವ್ಯಕ್ತಿಯಲ್ಲ. ಅದೊಂದು ಅದ್ಭುತವಾದ ಶಕ್ತಿ, ರಾಷ್ಟ್ರಪ್ರೇಮದ ಸಾಕ್ಷಿರೂಪ, ಅಖಂಡ ಭಾರತದ ಕನಸು ಕಂಡ ಮಹಾನುಭಾವ ಎಂದು ರಂಗಭೂಮಿಯ ಮೇಲೆ ಪರಿಚಯಿಸಲಾಗುತ್ತದೆ. ಇದೊಂದು ಅಪರೂಪದ ನಾಟಕ.
    ಸುಬ್ರಹ್ಮಣ್ಯ ಮತ್ತು ಗಜಾನನ ನಾಯ್ಕ ಸಂಗೀತ ಇಡೀ ನಾಟಕಕ್ಕೆ ಕಳಶಪ್ರಾಯವಾಗಿತ್ತು. ಸಂಭಾಷಣೆ ಸಾವರ್ಕರ್ ಅವರ ವಾಸ್ತವ ಬದುಕಿಗೆ ಕೈಗನ್ನಡಿ ಹಿಡಿದಂತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts