More

    ನಿಷ್ಪ್ರಯೋಜಕವಾಗುತ್ತಿದೆ ಅತಿಥಿಗೃಹ

    -ಸಂದೀಪ್ ಸಾಲ್ಯಾನ್ ಬಂಟ್ವಾಳ
    ಬಾಗಿಲು ತೆರೆದುಕೊಂಡು ಎಲ್ಲರನ್ನು ಮುಕ್ತವಾಗಿ ಸ್ವಾಗತಿಸುವ ಕೊಠಡಿಗಳು… ಅದರೊಳಗೆ ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿಯಾಗಿ ಉಳಿದಿರುವ ಮದ್ಯದ ಬಾಟಲು, ಸಿಗರೇಟು ತುಂಡುಗಳು… ಸುತ್ತಲೂ ಬೆಳೆದಿರುವ ಗಿಡಗಂಟಿಗಳು…

    ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದಲ್ಲಿರುವ ಪರ್ವತ ಕ್ಷೇತ್ರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆಯಂದ ನಿರ್ಮಾಣಗೊಂಡಿರುವ ಅತಿಥಿಗೃಹದಲ್ಲಿ ಕಂಡುಬರುತ್ತಿರುವ ದೃಶ್ಯಗಳಿವು… ಮನುಷ್ಯರು ಉಳಿದುಕೊಳ್ಳಲು ನಿರ್ಮಿಸಿದ ಅತಿಥಿಗೃಹ ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ನಿರ್ವಹಣೆ ಕೊರತೆಯಿಂದ ವಸತಿಗೃಹ ನಿಷ್ಪ್ರಯೋಜಕವಾಗುತ್ತಿದೆ.

    ನಿಸರ್ಗ ಸೌಂದರ್ಯದ ಮಧ್ಯೆ ಭಕ್ತರೊಂದಿಗೆ ಪ್ರವಾಸಿಗರನ್ನು ಸೆಳೆಯುವ ತಾಣವಾಗಿರುವ ಕಾರಿಂಜ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸುವ ಚಿಂತನೆಯೂ ನಡೆಯುತ್ತಿದೆ. ಪ್ರವಾಸಿಗರು ಬಂದಾಗ ಅವರು ಉಳಿದುಕೊಳ್ಳುವ ಅತಿಥಿಗೃಹವನ್ನು ನೋಡಿದಾಗ ಅಲ್ಲಿಂದ ಓಡುವ ಎನಿಸುವಂತಿದೆ.

    ಪ್ರವಾಸಿಗರು ಹಾಗೂ ದೇವಳಕ್ಕೆ ಬರುವ ಭಕ್ತರು ಉಳಿದುಕೊಳ್ಳುವ ನಿಟ್ಟಿನಲ್ಲಿ 1997ರಲ್ಲಿ ಅತಿಥಿಗೃಹ ನಿರ್ಮಿಸಲಾಗಿದೆ. ವಿಶಾಲ ಕೆರೆಯ ಪಕ್ಕ, ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿ ಇರುವ ಅತಿಥಿಗೃಹ ಪ್ರಸ್ತುತ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಮೂರ‌್ನಾಲ್ಕು ಕೊಠಡಿಗಳ ಬಾಗಿಲು ತೆರೆದುಕೊಂಡಿದೆ. ಅಲ್ಲಲ್ಲಿ ಮದ್ಯದ ಬಾಟಲಿಗಳು ಬಿದ್ದುಕೊಂಡಿವೆ. ಸ್ವಚ್ಛತೆ ಮರೀಚಿಕೆಯಾಗಿದೆ. ಕಬ್ಬಿಣದ ಬೆಂಚುಗಳು ತಲೆಕೆಳಗಾಗಿ ಬಿದ್ದುಕೊಂಡಿವೆ.

    ಪೊದೆಗಳ ಮಧ್ಯೆ ಶೌಚಗೃಹ: ಅತಿಥಿಗೃಹದ ಪಕ್ಕ ಇರುವ ಸಾರ್ವಜನಿಕ ಶೌಚಗೃಹ ಪೊದೆಗಳ ಮಧ್ಯೆ ಮರೆಯಾಗಿದೆ. ಜನರು ಶೌಚಗೃಹದ ಒಳ ಹೋಗಲು ಭಯಪಡುವಂತಾಗಿದೆ. ಅರಣ್ಯದ ಪಕ್ಕದಲ್ಲಿರುವ ಈ ಶೌಚಗೃಹದೊಳಗೆ ಹಾವು ಮೊದಲಾದ ವಿಷಜಂತುಗಳಿದ್ದರೂ ಅಚ್ಚರಿಯಿಲ್ಲ. ಆಟಿ ಅಮಾವಾಸ್ಯೆ, ವಾರ್ಷಿಕ ಜಾತ್ರೆ ಸಂದರ್ಭ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಸಾರ್ವಜನಿಕ ಶೌಚಗೃಹ ಬಳಕೆಗೆ ಸಿಗದೆ ಜನರು ಬಯಲು ಶೌಚಗೃಹವನ್ನೇ ಅವಲಂಬಿಸಬೇಕಾಗುತ್ತದೆ. ಕೆಲ ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಸ್ವಾಸ್ಥೃ ಪಥ ಹಾಗೂ ಸ್ತ್ರೋತ್ರವನಗಳು ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ.

    ಕಾರಿಂಜ ಕ್ಷೇತ್ರದ ಐತಿಹಾಸಿಕ ಹಿನ್ನೆಲೆಗೆ ಧಕ್ಕೆಯಾಗದಂತೆ, ಕೃತಕತೆಯನ್ನು ತಂದುಕೊಳ್ಳದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಶೌಚಗೃಹ ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಲಿದ್ದೇವೆ. ಅದಕ್ಕೆ ಬೇಕಾದ ಅನುದಾನವನ್ನು ಪ್ರವಾಸೋದ್ಯಮ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯಿಂದ ತರಿಸಿಕೊಳ್ಳಲಿದ್ದೇವೆ.
    ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts