More

    ಮೀಸಲು ಕ್ಷೇತ್ರದಲ್ಲಿ ದಲಿತರಿಗೆ ರಕ್ಷಣೆಯಿಲ್ಲ; ಕರ್ನಾಟಕ ರೈತ ಸಂಘದ ಅಧ್ಯಕ್ಷ ಡಿ.ಎಚ್. ಪೂಜಾರ್ ಆರೋಪ

    ಕಾರಟಗಿ: ಕನಕಗಿರಿ ಕ್ಷೇತ್ರದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲೆಯಲ್ಲಿ ಬೃಹತ್ ಜಾಥಾ ನಡೆಸಲಾಗುವುದು ಎಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ್ ಹೇಳಿದರು.

    ಮೀಸಲು ಕ್ಷೇತ್ರವಾಗಿದ್ದರೂ ದಲಿತರಿಗೆ ರಕ್ಷಣೆಯಿಲ್ಲದಂತಾಗಿದೆ. ಕ್ಷೇತ್ರದಲ್ಲಿ ದಲಿತರ ಕೊಲೆ, ಅತ್ಯಾಚಾರಕ್ಕೆ ಮತ ಬ್ಯಾಂಕ್ ರಾಜಕೀಯ ಕಾರಣವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಕಕ್ಕರಗೋಳ ಗ್ರಾಮದ ರಾಘವೇಂದ್ರನ ಬಳಿಕ ಬರಗೂರು ಗ್ರಾಮದಲ್ಲಿ ದಲಿತ ಯುವಕನ ಕೊಲೆಯಾಗಿದೆ. ಶ್ರೀರಾಮನಗರ ಹಾಗೂ ಮರಳಿ ಗ್ರಾಮಗಳಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿವೆ. ಪೊಲೀಸರು ಪ್ರತಿದೂರು ದಾಖಲಿಸುವ ಮೂಲಕ ಆರೋಪಿಗಳನ್ನು ರಕ್ಷಿಸಿ ದಲಿತರ ಶೋಷಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

    ದಲಿತರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ಶಾಸಕ ಬಸವರಾಜ ದಢೇಸುಗೂರು ರಾಜೀನಾಮೆ ನೀಡಬೇಕೆಂದು ಡಿ.ಎಚ್.ಪೂಜಾರ್ ಒತ್ತಾಯಿಸಿದರು. ಮಾದಿಗ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹುಸೇನಪ್ಪ ಹಂಚಿನಾಳ ಮಾತನಾಡಿ, ಜು.12ರಂದು ಬರಗೂರು ಗ್ರಾಮದ ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭಗೊಳ್ಳಲಿದೆ. ಎಂಟು ದಿನ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ದೌರ್ಜನ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜು.19ರಂದು ಕೊಪ್ಪಳ ಚಲೋ ನಡೆಸಲಾಗುವುದು ಎಂದು ತಿಳಿಸಿದರು.

    ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಸಣ್ಣ ಹನುಮಂತ, ಆನಂದ ಭಂಡಾರಿ, ಮರಿಸ್ವಾಮಿ ಬರಗೂರು, ಯಮನೂರಪ್ಪ, ಹನುಮಂತ ಮ್ಯಾಗಡೆ, ಕರಿಹನುಮಂತಪ್ಪ ಬರಗೂರು, ಮಹಾದೇವಪ್ಪ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts