More

    ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಜಾರಿಗೊಳಿಸಿ: ಕಾರಟಗಿಯಲ್ಲಿ ಶಾಸಕ ದಢೇಸುಗೂರುಗೆ ಕಸಾಪ ತಾಲೂಕು ಘಟಕ ಮನವಿ

    ಕಾರಟಗಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-22 ಕರಡನ್ನು ಮುಂದಿನ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸುವಂತೆ ಒತ್ತಾಯಿಸಿ ಶಾಸಕ ಬಸವರಾಜ ದಢೇಸುಗೂರುಗೆ ಕಸಾಪ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು.

    ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ನೇತೃತ್ವದ ಆಯೋಗ ಸಿದ್ಧಪಡಿಸಿದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-22 ಕರಡು ಪ್ರತಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಪಕ್ಷಬೇಧ ಮರೆತು ಎಲ್ಲ ಶಾಸಕರು ಬೆಂಬಲಿಸಬೇಕು. ಕನ್ನಡ ಭಾಷೆಯ ಅಸ್ಮಿತೆ ಉಳಿಸುವ ಜತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಸಬೇಕಿದೆ. ರಾಜ್ಯದಲ್ಲಿ ಕನ್ನಡ ಭಾಷೆ ಬಲಪಡಿಸಲು ಈ ವಿಧೇಯಕ ಜಾರಿಯಿಂದ ಅನುಕೂಲವಾಗಲಿದೆ. ಎಸ್ಸೆಸ್ಸೆಲ್ಸಿ ತತ್ಸಮಾನ ಪರೀಕ್ಷೆಗಳವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡ ಭಾಷೆಯ ಬೋಧನೆ, ಉದ್ಯೋಗ, ನ್ಯಾಯಾಂಗದಲ್ಲಿ ಸರ್ಕಾರಿ ಅನುದಾನ ಹಾಗೂ ಅನುದಾನ ರಹಿತ ಸಂಸ್ಥೆಗಳ ಕಾರ್ಯಕ್ರಮದ ಕರಪತ್ರ ಮತ್ತು ಬ್ಯಾನರ್‌ಗಳಲ್ಲಿ ಕಡ್ಡಾಯವಾಗಿ ಅರ್ಧದಷ್ಟು ಬರಹ ಕನ್ನಡದಲ್ಲಿಯೇ ಇರಬೇಕು ಎನ್ನುವುದನ್ನು ಕರಡು ಪ್ರತಿಪಾದಿಸಲಿದೆ ಎಂದರು.

    100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಾರದವರಿಗೆ ಕನ್ನಡ ಕಲಿಸುವ ಕಾರ್ಯಾಗಾರ ನಡೆಸುವುದು ಇದರ ಉದ್ದೇಶ. ನಾಡು, ಭಾಷೆ ಬಗ್ಗೆ ಕೀಳರಿಮೆ ಮಾಡಿದರೆ, ನಿರ್ಲಕ್ಷ್ಯ ತೋರಿದರೆ ತೆರಿಗೆ ವಿನಾಯಿತಿ, ಧನ ಸಹಾಯ ಸೇರಿದಂತೆ ಸರ್ಕಾರ ನೀಡುವ ಇತರ ಸೌಲಭ್ಯಗಳನ್ನು ತಡೆಹಿಡಿಯುವ ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ಕಾರಣ ಕೇಳಿ ನೋಟಿಸ್ ನೀಡಲು ಅವಕಾಶ ಇರುತ್ತದೆ. ತಪ್ಪಿತಸ್ಥರ ವಿರುದ್ಧ ದಂಡ ವಿಧಿಸುವುದರ ಜತೆಗೆ ಪರವಾನಗಿ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ. ಆದ್ದರಿಂದ ಈ ವಿಧೇಯಕವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts