More

    ತುಂಗಭದ್ರಾ ಎಡದಂಡೆ ಕಾಲುವೆಗೆ ಏ.20ರವರೆಗೆ ನೀರು ಹರಿಸಲು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯ

    ಕಾರಟಗಿ: ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಅನ್ನದಾತರ ಹಿತದೃಷ್ಟಿಯಿಂದ ಸರ್ಕಾರ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಗೆ ಏ.20ರವರೆಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದರು.

    ಶಾಸಕ ಬಸವರಾಜ ದಢೇಸುಗೂರು ಹಾಗೂ ಸರ್ಕಾರದ ಮೇಲಿನ ಭರವಸೆ ಮೇರೆಗೆ ರೈತರು ಎರಡನೇ ಬೆಳೆಗೆ ಭತ್ತ ನಾಟಿ ಮಾಡಿದ್ದಾರೆ. ಸದ್ಯ ಭತ್ತ ತೆನೆ ಬಿಚ್ಚುವ ಹಂತದಲ್ಲಿದೆ. ಈ ವೇಳೆ ನೀರಿನ ಸಮಸ್ಯೆ ಎದುರಾದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ನೀರು ನಿರ್ವಹಣೆ ಮಾಡದ ಕಾರಣ ಟೇಲ್‌ಎಂಡ್ ಭಾಗಕ್ಕೆ ನೀರು ತಲುಪುತ್ತಿಲ್ಲ. ಕೇವಲ 2500 ಕ್ಯೂಸೆಕ್ ನೀರು ಹರಿಸಿದರೆ ಸಾಲುವುದಿಲ್ಲ. ಈ ಬೆಳೆಗೆ ಏ. 20ರವರೆಗೆ ನೀರು ಹರಿಸದಿದ್ದರೆ ರೈತರ ಶೇ. 40 ಭತ್ತ ಹಾನಿಗೊಳಗಾಗಲಿದೆ. ಈ ಸಂಬಂಧ ಸರ್ಕಾರ ರೈತರಿಗೆ ಸಮಸ್ಯೆಯಾಗದ ರೀತಿ ಶೀಘ್ರ ಕ್ರಮ ವಹಿಸಬೇಕು. ಈ ಸಂಬಂಧ ಏ.1 ರಂದು ಡಿಸಿ ಪಿ. ಸುನಿಲ್ ಕುಮಾರ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಭದ್ರಾ ಜಲಾಶಯದಿಂದ 5 ಟಿಎಂಸಿ ನೀರು ತೆಗೆದುಕೊಳ್ಳುವುದಾಗಿ ಬಿಜೆಪಿ ನಾಯಕರು ಮೊಬೈಲ್‌ನಲ್ಲಿ ಸಂದೇಶ ಹಾಕಿರುವುದು ಸ್ವಾಗತಾರ್ಹ ವಿಚಾರ. 5 ಟಿಎಂಸಿ ನೀರು ದೊರೆತರೆ ಏ. 25ರವರೆಗೆ ಕಾಲುವೆಗೆ ನೀರು ಹರಿಸಬಹುದು. ಆದಷ್ಟು ಶೀಘ್ರ ಇದನ್ನು ಶಾಸಕರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

    ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಯಾವುದೇ ಸಭೆ ನಡೆಸಿಲ್ಲ. ಕೇವಲ ಜಿಲ್ಲೆಯ ಹಿರಿಯ ಅಧಿಕಾರಿಗಳ ತಲೆಗೆ ವಹಿಸಿದರೆ ಹೇಗೆ? ರೋಗ ತಡೆಗಟ್ಟುವ ನಿಟ್ಟಿನಲ್ಲಿ ಡಿಸಿ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಗೆ ಸೋಂಕು ಪತ್ತೆಯಾಗಿಲ್ಲ. ಸರ್ಕಾರದ ಲಾಕ್‌ಡೌನ್ ಆದೇಶಕ್ಕೆ ಸಾರ್ವಜನಿಕರು ಸಾಥ್ ನೀಡಬೇಕು ಎಂದರು.

    ರೈತ ಸಂಘದ ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ, ಮುಖಂಡ ಖಾಜಾ ಹುಸೇನ್ ಮುಲ್ಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts