More

    ಅರಳುವ ಮುನ್ನವೇ ಕಮರಿದ ಕನಸು: ಗೆಳೆಯರನ್ನು ಬಹಳ ಹಚ್ಚಿಕೊಂಡಿದ್ದ ಸುಹಾಸ್

    ಪಂಪಾರಡ್ಡಿ ಅರಳಹಳ್ಳಿ ಕಾರಟಗಿ

    ಇಬ್ಬರು ಪ್ರಾಣ ಸ್ನೇಹಿತರು ಸೇರಿ ಮೂವರು ದೇಶ ಕಾಯುವ ಸೈನಿಕರಾಗುವ ಕನಸು ಕಂಡಿದ್ದ ಬಾಲಕನೊಬ್ಬನ ಕನಸು ಅರಳುವ ಮುನ್ನವೇ ಕಮರಿ ಭಾನುವಾರ ಪ್ರಾಣಬಿಟ್ಟಿದ್ದು, ಎಲ್ಲರ ಮನಕಲಕುವಂತೆ ಮಾಡಿತು.

    ಇಲ್ಲಿನ ಜೆಪಿ ನಗರದ ವೀರೇಶ ಸೌದ್ರಿ-ಉಷಾ ದಂಪತಿಯ ದ್ವಿತೀಯ ಪುತ್ರ ಸುಹಾಸ್ ಸೌದ್ರಿ (13) ತೀವ್ರ ಅನಾರೋಗ್ಯದಿಂದ ಭಾನುವಾರ ಕೊನೆಯುಸಿರೆಳೆದಿದ್ದಾನೆ. ಇದರ ಹಿಂದಿನ ದಿನ ಜು.30ರಂದು ತಾನು ಕಲಿಯುತ್ತಿದ್ದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಗೆ ನಿತ್ರಾಣ ಸ್ಥಿತಿಯಲ್ಲೇ ತೆರಳಿ ನೂರಾರು ಗೆಳೆಯರಿಂದ ‘ಸ್ನೇಹಿತರ ದಿನ’ದ ಬ್ಯಾಂಡ್ ಕಟ್ಟಿಸಿಕೊಂಡಿದ್ದ. ಗೆಳೆಯರು ಕಣ್ಣೀರಿಡುತ್ತಲೇ ಸುಹಾಸ್ ಬೇಗ ಗುಣಮುಖವಾಗಲಿಯೆಂದು ಹರಸಿದ್ದರು. ಆದರೆ, ಸುಹಾಸ್‌ನ ಕನಸುಗಳು ಮತ್ತು ಸ್ನೇಹಿತರ ಮೊರೆಯನ್ನು ಲೆಕ್ಕಿಸದ ಯಮರಾಯ ಮಾರನೇ ದಿನವೇ ಆತನನ್ನು ಕರೆದೊಯ್ದಿದಿರುವುದು ಎಲ್ಲರಿಗೂ ನುಂಗಲಾರದ ತುತ್ತಾಗಿದೆ.

    2009ರ ಏ.4ರಂದು ಸುಹಾಸ್ ಜನಿಸಿದ್ದ. ಮೂತ್ರ ಸಮಸ್ಯೆಯಿಂದಾಗಿ ಹುಟ್ಟಿದ ಮಾರನೇ ದಿನವೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಸಮಸ್ಯೆ ಬಿಗಡಾಯಿಸಿದ್ದರಿಂದ ಎಂಟು ತಿಂಗಳ ಮಗುವಿದ್ದಾಗಲೇ ಮತ್ತೊಂದು ಶಸ್ತ್ರಚಿಕಿತ್ಸೆಗೊಳಗಾಗಿದ್ದರೂ ಅದೃಷ್ಟ ಕೈಗೊಡಲಿಲ್ಲ. ಮೂತ್ರ ಸಮಸ್ಯೆಯಿಂದ ದಿನೇದಿನೆ ಅವನ ಎರಡು ಕಿಡ್ನಿಗಳು ವೈಫಲ್ಯವಾದವು. ಹುಟ್ಟುತ್ತಲೇ ಗಂಭೀರ ಕಾಯಿಲೆಯಿಂದ ಸುಹಾಸ್ ಬಳಲುತ್ತಿದ್ದ. ಶಾಲೆಯಲ್ಲಿ ಗೆಳೆಯರೊಂದಿಗೆ ಕನಸು ಕಟ್ಟಿಕೊಂಡಿದ್ದಲ್ಲದೆ, ಸದಾ ಜೀವನೋತ್ಸಾಹದಿಂದ ದಿನದೂಡುತ್ತಿದ್ದ. ಹಾಗಾಗಿ ಸಾವಿನಂಚಿನಲ್ಲೂ ಸ್ನೇಹಿತರನ್ನು ಭೇಟಿ ಮಾಡುವ ಜತೆಗೆ 13 ವರ್ಷಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ. ತೀವ್ರ ಅನಾರೋಗ್ಯಕ್ಕಿಡಾಗಿದ್ದರೂ ಸ್ನೇಹಿತರಿಂದ ವಾಟ್ಸಾೃಪ್‌ನಲ್ಲಿ ಹೋಮ್‌ವರ್ಕ್‌ಗಳನ್ನು ತರಿಸಿಕೊಂಡು ಪೂರ್ಣಗೊಳಿಸುತ್ತಿದ್ದ. ಶಾಲೆಗೆ ಬಂದಾಗ ವಿಷಯ ಶಿಕ್ಷಕರಿಗೆ ತೋರಿಸುವುದಾಗಿ ಹೇಳುತ್ತಿದ್ದ. ಆದರೂ ತರಗತಿಯಲ್ಲಿ ಪ್ರಥಮ ಶ್ರೇಣಿಯಲ್ಲಿದ್ದರಿಂದ ಶಿಕ್ಷಕರ ಅಚ್ಚುಮೆಚ್ಚಿನ ಶಿಷ್ಯನೂ ಆಗಿದ್ದ.

    ಸಫಲವಾಗದ ಚಿಕಿತ್ಸೆ
    ಜೂ.27ರವರೆಗೆ ಸುಹಾಸ್ ಶಾಲೆಗೆ ಹಾಜರಾಗಿದ್ದ. ಆ ಬಳಿಕ ತೀವ್ರ ಅನಾರೋಗ್ಯಕ್ಕೀಡಾಗಿದ್ದ. ಬೆಳಗಾವಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರು ಫಲಕಾರಿಯಾಗಲಿಲ್ಲ. ಎರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದ ಸುಹಾಸ್‌ಗೆ ತಂದೆ ವೀರೇಶ ಸೌದ್ರಿ ಒಂದು ಕಿಡ್ನಿ ನೀಡಲು ನಿರ್ಧರಿಸಿದ್ದರು. ವೈದ್ಯಕೀಯ ಕಾರಣಗಳಿಂದಾಗಿ ಅದೂ ಸಾಧ್ಯವಾಗಲಿಲ್ಲ.

    ನನಸಾಗದ ಆಶಯ
    ಸುಹಾಸ್ ಮೃತಪಟ್ಟರೆ ಆತನ ದೇಹವನ್ನು ಕೊಪ್ಪಳ ಗವಿಮಠದ ಮೆಡಿಕಲ್ ಕಾಲೇಜ್‌ಗೆ ದಾನ ಮಾಡಲು ಪಾಲಕರು ನಿರ್ಧರಿಸಿದ್ದರು. ಆ.1ರ ಸೋಮವಾರ ಕಾಲೇಜಿಗೆ ಬಂದು ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸುವಂತೆ ಕಾಲೇಜ್ ಆಡಳಿತ ಮಂಡಳಿ ತಿಳಿಸಿತ್ತು. ಆದರೆ, ವಿಧಿ ಭಾನುವಾರವೇ ಸುಹಾಸ್ ಹಾಗೂ ಪಾಲಕರ ಕನಸುಗಳನ್ನು ಸುಳ್ಳಾಗಿಸಿ ತನ್ನಾಟ ಮೆರೆದಿತ್ತು.

    ಸುಹಾಸ್ ಅತ್ಯಂತ ಉತ್ಸಾಹಿ. ಅವನಿಗೆ ದಿನಕ್ಕೆ 20ಮಾತ್ರೆಗಳು ನೀಡುತ್ತಿದ್ದೆವು. ಅವನಿಗೆ ನಾವೇ ಹೆಚ್ಚು ಹಿಂಸೆ ಕೊಟ್ಟೆವು ಅನಿಸುತ್ತಿದೆ. ದೇಹದಲ್ಲಿ ಎಷ್ಟೆಲ್ಲ ನೋವುಗಳಿದ್ದವು. ಅಷ್ಟು ಚಿಕ್ಕವನಾದರು ಸಹ ಒಂದು ದಿನವೂ ಅದನ್ನು ತೋರ್ಪಡಿಸಲಿಲ್ಲ.
    | ವೀರೇಶ ಸೌದ್ರಿ, ಸುಹಾಸ್ ತಂದೆ

    ನಾವು ಮೂವರು, ಮುಂದೆ ಒಟ್ಟಿಗೆ ಸೈನ್ಯ ಸೇರಿಕೊಂಡು ದೇಶದ ಸೇವೆ ಮಾಡೋಣವೆಂದು ಸುಹಾಸ್ ಪದೇಪದೆ ಹೇಳುತ್ತಲೇ ಇದ್ದ. ಈಗ ಅವನಿಲ್ಲ. ಅವನ ಕನಸನ್ನು ನಾವಿಬ್ಬರು ನನಸು ಮಾಡುತ್ತೇವೆ.
    | ರಘುನಂದನ್‌ಸಿಂಗ್, ಚನ್ನಬಸವ, ಸುಹಾಸ್ ಆಪ್ತ ಸ್ನೇಹಿತರು

    ಸುಹಾಸ್ ಬುದ್ಧಿವಂತ ಮತ್ತು ಹೃದಯವಂತ. ತಾನೊಬ್ಬ ಅನಾರೋಗ್ಯ ಪೀಡಿತನೆಂದು ಎಂದೂ ತೋರಿಸಿಕೊಳ್ಳಲಿಲ್ಲ. ಅವನು ಬದುಕಿದ್ದರೆ ಮಹತ್ವದ ಸಾಧನೆ ಮಾಡುತ್ತಿದ್ದ. ಅವನಿಲ್ಲ ಎನ್ನುವ ದುಃಖ ಈಗಲೂ ತಡೆಯಲಾಗುತ್ತಿಲ್ಲ.
    | ಶೈನಾಜ್ ಬೇಗಂ, ಸುಹಾಸ್ ನೆಚ್ಚಿನ ಶಿಕ್ಷಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts