More

    ರಾಮನವಮಿ ಉತ್ಸವ ಸಮಿತಿಯಿಂದ ಕರಸೇವಕರಿಗೆ ಸನ್ಮಾನ; ಉಮೇಶ ವಂದಾಲ

    ವಿಜಯಪುರ: ಕೋಟ್ಯಂತರ ಹಿಂದುಗಳ ಆರಾಧ್ಯ ದೈವ ಶ್ರೀ ರಾಮಚಂದ್ರನ ಮೂರ್ತಿ ಉದ್ಘಾಟನೆ ಹಿನ್ನೆಲೆ ಜ.22 ರಂದು ನಗರದ ರಾಮ ಮಂದಿರ ಮುಂಭಾಗದಲ್ಲಿ ಕರಸೇವಕರಿಗೆ ಸನ್ಮಾನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.

    ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಆ ಮೂಲಕ ಬಹುದಿನದ ಕನಸೊಂದು ಈಡೇರಲಿದೆ. ರಾಮಮಂದಿರ ಲೋಕಾರ್ಪಣೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸುವ ನಿಟ್ಟಿನಲ್ಲಿ ರಾಮನವಮಿ ಉತ್ಸವ ಸಮಿತಿ ನಿರ್ಧರಿಸಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಸಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ರಾಮನವಮಿ ಉತ್ಸವ ಸಮಿತಿ ಹಾಗೂ ರಾಮ ಮಂದಿರ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ 6ಕ್ಕೆ ಪೂಜಾ ಕಾರ್ಯಕ್ರಮ ನೆರವೇರಲಿದೆ. ಬಳಿಕ 10ಕ್ಕೆ 511 ಹಿಂದೂ ಕಾರ್ಯಕರ್ತರು ಹಾಗೂ ಕರ ಸೇವಕರಿಗೆ ಸನ್ಮಾನ ಜರುಗಲಿದ್ದು, ಸನ್ಮಾನದಲ್ಲಿ ಕಾರ್ಯಕರ್ತರಿಗೆ ಕಟ್ಟಿಗೆಯಿಂದ ನಿರ್ಮಾಣ ಮಾಡಿರುವ ರಾಮಮಂದಿರವನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದರು.

    ನಂತರ ವಿಜಯಪುರ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯಶ್ರೀ ಕಟ್ಟಿ ನೇತೃತ್ವದಲ್ಲಿ ಕೋಲಾಟ ಕಾರ್ಯಕ್ರಮ, ಮನಿಶಾ ಕುಲಕರ್ಣಿ ಅವರಿಂದ ಭಕ್ತಿಗೀತೆ, ಭೀಮರಾವ ಜೋಶಿ (ತೆಲಗಿ) ಹಾಗೂ ಭಾರತಿ ಕುಂದಲಗಾರ ಅವರಿಂದ ಸಂಗೀತ, ರವಿಂದ್ರನಾಥ ಟ್ಯಾಗೂರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.

    ಹುಲಜಂತಿ ಮಾಳಿಂಗರಾಯ ಸ್ವಾಮೀಜಿ, ಬುರಣಾಪುರದ ಯೊಗೇಶ್ವರಿ ಮಾತಾ, ಮನಗೂಳಿಯ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅನೇಕರು ದೇಣಿಕೆ ನೀಡಿದ್ದಾರೆ. ಕೆಲವು ಮುಸ್ಲಿಂ ಕುಟುಂಬಗಳು ಹಣ ನೀಡಿರುವುದನ್ನು ನಾವು ಕಾಣಬಹುದು. ಹೃದಯ ವೈಶಾಲ್ಯತೆ ಇರುವ ಮುಸ್ಲಿಂರೂ ನಮ್ಮ ಭಾರತದಲ್ಲಿದ್ದಾರೆ. ಅಂಥ ವ್ಯಕ್ತಿಗಳು ಇನ್ನೂ ಹೆಚ್ಚಾಗಬೇಕಿದೆ ಎಂದರು.

    ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ಹಾಗೂ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗಾಗಿ ರಾಮ ಮೂರ್ತಿಯನ್ನು ದರ್ಶನಕ್ಕೆ ಇಡಲಾಗುತ್ತಿದ್ದು, ನಗರವಾಸಿಗಳು ಶ್ರೀರಾಮ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
    ಮುಖಂಡರಾದ ಶಿವಾನಂದ ಭುಯ್ಯರ, ಸಂತೋಷ ಯಂಕಪ್ಪಗೋಳ, ಮಾದಣ್ಣ ಕಟಾವಿ, ಸಚೀನ ಸವನಳ್ಳಿ, ಅಶೋಕ ಪೆದ್ದಿ, ಅಮಿತ್ ಅವಜಿ, ಸಂಗಮೇಶ ಉಕ್ಕಲಿ, ಸಮೀರ್ ಕುಲಕರ್ಣಿ, ನಾರಾಯಣ ಹಜೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts