More

    ಕರಕುಶಲ ವಸ್ತು ಮಾರಾಟಕ್ಕೆ ಮೊಬೈಲ್ ವ್ಯಾನ್ ; ಚಿಲುಮೆಯಲ್ಲಿ 7 ದಿನಗಳ ವಸ್ತು ಪ್ರದರ್ಶನ ಮಾರಾಟ ಮೇಳ

    ತುಮಕೂರು: ಕರಕುಶಲ ವಸ್ತುಗಳನ್ನು ಮೊಬೈಲ್ ವ್ಯಾನ್ ಮೂಲಕ ಮಾರಾಟ ಮಾಡುವ ಚಿಂತನೆ ಇದೆ ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದರು.

    ನಗರದ ಚಿಲುಮೆ ಪೊಲೀಸ್ ಭವನದಲ್ಲಿ ರಾಜ್ಯ ಕರಕುಶಲ ನಿಗಮ ನಿಯಮಿತ ಹಾಗೂ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಸಹಭಾಗಿತ್ವದಲ್ಲಿ ಏಳು ದಿನಗಳ ಕಾಲ ಆಯೋಜಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ನಿಗಮದಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ರಾಜ್ಯದ 4 ಕಡೆ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಈ ಮೂಲಕ ಕರಕುಶಲ ಕರ್ಮಿಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದರು.
    ಈ ಮೇಳದಲ್ಲಿ ರಾಜ್ಯ, ಹೊರ ರಾಜ್ಯದಿಂದ ಕರಕುಶಲ ಕರ್ಮಿಗಳು ಭಾಗವಹಿಸುತ್ತಿದ್ದು, ಮಾರಾಟಗಾರರು ಹಾಗೂ ಗ್ರಾಹಕರ ನಡುವೆ ಉತ್ತಮ ಸಂಪರ್ಕ ಬೆಳೆಸಲು ಈ ಮೇಳ ಉತ್ತಮ ವೇದಿಕೆಯಾಗಿದೆ. ಮೇಳದ ಜತೆಗೆ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಲು ಇನ್ನು ಮೊಬೈಲ್ ವ್ಯಾನ್ ಮೂಲಕ ಮಾರಾಟ ಆರಂಭಿಸುವ ಚಿಂತನೆ ನಡೆಸಲಾಗಿದೆ. ಅಲ್ಲದೆ, ಕರಕುಶಲಕರ್ಮಿಗಳಿಗೆ ನಿಗಮದ ವತಿಯಿಂದ ಮನೆಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

    ಮಾರುಕಟ್ಟೆ ರೂಪಿಸಿಕೊಳ್ಳಿ: ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ಮೂಲಕ ಕರಕುಶಲಕರ್ಮಿಗಳು ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದೆ. ಹೊಸ ವಿನ್ಯಾಸ, ಅವಿಷ್ಕಾರಗಳೊಂದಿಗೆ ಕರಕುಶಲ ಕರ್ಮಿಗಳು ಮಾರುಕಟ್ಟೆ ರೂಪಿಸಿಕೊಳ್ಳಬೇಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ಮುಂದಿನ ಪೀಳಿಗೆಯೂ ಕರಕುಶಲತೆಯಲ್ಲಿಯೇ ನೆಮ್ಮದಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ನಾಡಿನ ಕರಕುಶಲತೆಗಳು ವಿಶ್ವದಾದ್ಯಂತ ಪರಿಚಯವಾಗಬೇಕು. ಆ ನಿಟ್ಟಿನಲ್ಲಿ ನಿಗಮಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯುತ್ತಿದೆ ಎಂದರು.
    ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎಂ.ಎನ್.ನಾಗೇಂದ್ರಪ್ಪ, ವ್ಯವಸ್ಥಾಪಕರಾದ ಮೈನಾಕ್ ಮಂಡಲ, ಪರುಶುರಾಮ್ ಮತ್ತಿತರರು ಉಪಸ್ಥಿತರಿದ್ದರು.

    50 ಮಳಿಗೆಗಳು: 7 ದಿನಗಳ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 50 ಕುಶಲಕರ್ಮಿಗಳು ಭಾಗವಹಿಸಿದ್ದು, ಅವರಿಗಾಗಿ ಉಚಿತವಾಗಿ 50 ಮಳಿಗೆಗಳನ್ನು ಒದಗಿಸಲಾಗಿದೆ. ಈ ಪ್ರದರ್ಶನದಲ್ಲಿ ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಅನುಕರಣೆ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಕಲಾಂಕರಿ ಚಿತ್ರಕಲೆ, ಮೈಸೂರು ಶೈಲಿಯ ಚಿತ್ರಕಲೆ ಸೇರಿ ಮತ್ತಿತರ ಕಡೆಗಳ ಆಕರ್ಷಕ ಕರಕುಶಲ ವಸ್ತುಗಳು ಗಮನಸೆಳೆಯುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts