ಕನ್ನೇರಮಡು ಗ್ರಾಮದಲ್ಲಿ ಶಿಲಾವೃತ್ತ ಸಮಾಧಿಗಳ ಪತ್ತೆ

2 Min Read
ಕನ್ನೇರಮಡು ಗ್ರಾಮದಲ್ಲಿ ಶಿಲಾವೃತ್ತ ಸಮಾಧಿಗಳ ಪತ್ತೆ (1)
ಕನ್ನೇರಮಡು ಗ್ರಾಮದಲ್ಲಿ ಪತ್ತೆಯಾಗಿರುವ ಶಿಲಾಸಮಾಧಿಗಳು.

ಕನಕಗಿರಿ: ಗಂಗಾವತಿ ತಾಲೂಕಿನ ಕನ್ನೇರಮಡು ಹಳೇ ಗ್ರಾಮದಲ್ಲಿ ಪಾಳು ಬಿದ್ದ ಪಂಚಲಿಂಗೇಶ್ವರ ದೇವಾಲಯದ ಆಗ್ನೇಯ ದಿಕ್ಕಿನ ನೆಲಮಟ್ಟದಲ್ಲಿ ವೃತ್ತಕಾರವಾಗಿ ಜೋಡಿಸಿರುವ ಶಿಲಾವೃತ್ತ ಮಾದರಿಯ ಮೂರು ಬೃಹತ್ ಶಿಲಾಯುಗ ಕಾಲದ ಸಮಾಧಿಗಳು ಪತ್ತೆಯಾಗಿವೆ.

ಇದನ್ನೂ ಓದಿ:http://ಕನ್ನೇರಮಡು ಗ್ರಾಮದಲ್ಲಿ ಶಿಲಾವೃತ್ತ ಸಮಾಧಿಗಳ ಪತ್ತೆ
ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮೆಹಬೂಬ್ ಸಾಬ್ ಹಾಗೂ ಶಾಸನಶಾಸ್ತ್ರ ವಿಭಾಗದ ಡಿ.ವೀರೇಶ ಅವರು ಕನ್ನಡ ವಿವಿಯ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ಎಸ್.ವೈ.ಸೋಮಶೇಖರ್ ಹಾಗೂ ಸಂಶೋಧಕ ಎಚ್.ಆರ್.ಪಾಂಡುರಂಗ ಕಳಸ ಮಾರ್ಗದರ್ಶನದಲ್ಲಿ ಶಿಲಾ ಸಮಾಧಿಗಳನ್ನು ಶೋಧನೆ ಮಾಡಿದ್ದು, ಕನ್ನೇರಮಡು ಗ್ರಾಮದ ಪ್ರಾಗೈತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ.

ಪ್ರಸ್ತುತ ದೊರೆತಿರುವ ಸಮಾಧಿಗಳು ಒಂದೂವರೆ ಅಡಿಗಳಷ್ಟು ಮಾತ್ರ ಹೊರಗೆ ಕಾಣುತ್ತಿದ್ದು, ಉಳಿದ ಭಾಗ ಮಣ್ಣಿನಲ್ಲಿ ಸೇರಿಕೊಂಡಿದೆ. ನೂತನ ಶಿಲಾಯುಗ ಸಂಸ್ಕೃತಿಯ ಅಂತ್ಯ ಹಾಗೂ ಬೃಹತ್ ಶಿಲಾ ಸಂಸ್ಕೃತಿಯ ಆದಿಭಾಗದ ಸಂಯುಕ್ತ ಹಂತದಲ್ಲಿ ಇದ್ದಿರಬಹುದೆಂದು ಊಹಿಸಲಾಗಿದೆ.

ಸಂಸ್ಕೃತಿಯ ಆದಿ ಭಾಗದ ಜನರು ಬಹುಮಟ್ಟಿಗೆ ಅಲೆಮಾರಿ ಜೀವನವನ್ನು ನಡೆಸುತ್ತಿದ್ದರು. ಆದ್ದರಿಂದ ಶವಸಂಸ್ಕಾರದ ಕಲ್ಪನೆಗಳ ನೆಲೆಗಳು ಬಹಳ ಇದ್ದರೂ ವಾಸ್ತವ್ಯದ ನೆಲೆಗಳು ತೀರಾ ಕಡಿಮೆ. ಇದು ಕಬ್ಬಿಣ ಯುಗದ ಬೃಹತ್ ಶಿಲಾ ಸಂಸ್ಕೃತಿಯ ಆರಂಭಕಾಲದ ಮಾನವರ ಸಮಾಧಿ ನೆಲೆಯಾಗಿತ್ತೆಂದು ಹೇಳಬಹುದಾಗಿದೆ. ಇನ್ನೂ ಹೆಚ್ಚಿನ ಸೂಕ್ಷ್ಮ ಸಂಶೋಧನೆ ಅಗತ್ಯವಿದೆಯೆಂದು ಸಂಶೋಧನಾರ್ಥಿಗಳಾದ ಮೆಹಬೂಬ್ ಸಾಬ್ ಹಾಗೂ ಡಿ.ವೀರೇಶ ಅಭಿಪ್ರಾಯಪಟ್ಟಿದ್ದಾರೆ.

ಶಿಲಾವೃತ್ತ ಸಮಾಧಿ-01
ವೃತ್ತಾಕಾರದಲ್ಲಿರುವ ಸಮಾಧಿಯು 1.75 ಮೀ. ಅಗಲ, 2.30 ಮೀ. ಉದ್ದ ಹಾಗೂ 7.20 ಮೀ. ಸುತ್ತಳತೆ ಹೊಂದಿದೆ. 17 ಕಣಶಿಲೆಯ ಸಣ್ಣಬಂಡೆಗಳಿಂದ ನಿರ್ಮಿಸಲ್ಪಟ್ಟಿದ್ದು, ಇದು ಮೂರು ಸಮಾಧಿಗಳ ಪೈಕಿ ಬೃಹತ್ ಸಮಾಧಿಯಾಗಿದೆ.
ಶಿಲಾವೃತ್ತ ಸಮಾಧಿ-02
ಶೋಧಿಸಲ್ಪಟ್ಟಿರುವ ಸಮಾಧಿಗಳ ಪೈಕಿ ಇದು ಚಿಕ್ಕ ಸಮಾಧಿಯಾಗಿದೆ. ವೃತ್ತಕಾರವಾಗಿದ್ದು 11 ಕಣಶಿಲೆಯ ಪುಟ್ಟ ಬಂಡೆಗಳಿಂದ ನಿರ್ಮಿಸಲ್ಪಟ್ಟಿದೆ. 1.14 ಮೀ. ಅಗಲ, 1.15 ಮೀ. ಉದ್ದ ಹಾಗೂ 3.91 ಮೀ. ಸುತ್ತಳತೆ ಹೊಂದಿದೆ.
ಶಿಲಾವೃತ್ತ ಸಮಾಧಿ-03

ಈ ಶಿಲಾವೃತ್ತ ಸಮಾಧಿಯು ಕಣಶಿಲೆಯ 8 ಸಣ್ಣಬಂಡೆಗಳಿಂದ ಆವೃತವಾಗಿದೆ. 1.20 ಮೀ. ಅಗಲ, 1.25 ಮೀ. ಉದ್ದ ಹಾಗೂ 4.60 ಮೀ. ಸುತ್ತಳತೆ ಹೊಂದಿದೆ.

See also  ಗ್ರಾಮ ಪಂಚಾಯಿತಿ ಕದನದಲ್ಲಿ ಮಹಿಳೆಯರಿಗೆ ಮಣೆ
Share This Article