More

    ಅನಕ್ಷರಸ್ಥರು ನಾಡಿನ ಬಹುದೊಡ್ಡ ಶಕ್ತಿ

    ನರಗುಂದ: ಹಳಗನ್ನಡ ಸಾಹಿತ್ಯವನ್ನು ದೂರವಿಡುವ ಸನ್ನಿವೇಶ ಸರ್ಕಾರದಿಂದಲೇ ನಡೆಯುತ್ತಿದೆ. ಇದು ಅತ್ಯಂತ ದುರ್ದೈವದ ಸಂಗತಿ. ಆಂಗ್ಲ ಮಾಧ್ಯಮವು ಮಕ್ಕಳಿಗೆ ವೃದ್ಧಾಶ್ರಮದ ಸಂಸ್ಕೃತಿ ಕಲಿಸುತ್ತದೆ. ಹೀಗಾಗಿ ನಮ್ಮ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

    ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡೋತ್ಸವ ಉಪನ್ಯಾಸ ಮಾಲೆ ಹಾಗೂ ಕನ್ನಡ ಕಾಯಕ ವರ್ಷದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕನ್ನಡ ಭಾಷೆ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಅನಕ್ಷರಸ್ಥರು ಈ ನಾಡಿನ ಬಹುದೊಡ್ಡ ಶಕ್ತಿಯಾಗಿದ್ದು, ಶಾಲಾ, ಕಾಲೇಜುಗಳ ಮೆಟ್ಟಿಲು ಹತ್ತಿರುವ ಅಕ್ಷರಸ್ಥರಿಂದಲೇ ಕನ್ನಡ ಭಾಷೆ ಕ್ಷೀಣಿಸುತ್ತಿರುವುದು ಖೇದಕರ ಸಂಗತಿ. ಸಮಾಜದಲ್ಲಿರುವ ಜಾತಿ, ಮೂಢನಂಬಿಕೆ, ಜ್ಯೋತಿಷದ ವಿರುದ್ಧ ಮಾತನಾಡುವವರನ್ನು ಕೆಲವರು ಮನೆಹಾಳರಂತೆ ಬಿಂಬಿಸಿ ಅವರಿಗೆ ದೇಶದ್ರೋಹದ ಪಟ್ಟ ಕಟ್ಟುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಸವಣ್ಣನವರ ಪ್ರತಿಬಿಂಬದಂತೆ ತಮ್ಮ ಜೀವನದುದ್ದಕ್ಕೂ ಸಮಾಜಕ್ಕಾಗಿಯೇ ಸೇವೆ ಸಲ್ಲಿಸಿರುವ ಕನ್ನಡದ ವೈಚಾರಿಕತೆಯ ಜಗದ್ಗುರು ಲಿ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರನ್ನು ಗದುಗಿನ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯಕ್ಕೆ ಇಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

    ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ಮಾತನಾಡಿ, ಜಗತ್ತನ್ನೇ ಶೋಧಿಸಿದರೂ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದಿರುವುದು ನಮ್ಮ ದೇಶದಲ್ಲಿ ಮಾತ್ರ. ಕನ್ನಡಿಗರ ಸ್ವಭಾವ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಂತದ್ದು. ಹೀಗಾಗಿ ಕರ್ನಾಟಕದಲ್ಲಿ ಐತಿಹಾಸಿಕ ಪರಂಪರೆ ಇನ್ನೂ ಜೀವಂತಿಕೆಯಾಗಿ ಉಳಿದುಕೊಂಡಿದೆ. ನಮ್ಮ ಭಾಷೆ, ವೇಷಭೂಷಣಗಳಿಗೆ ಆದ್ಯತೆ ನೀಡಬೇಕು. ಬಡವರ ಹಿತದೃಷ್ಟಿಯಿಂದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ವತಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಂಡರೆ ಅವುಗಳನ್ನು ಉಚಿತವಾಗಿ ನಡೆಸಿಕೊಡಲಾಗುವುದು ಎಂದು ತಿಳಿಸಿದರು.

    ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆಶುಕವಿ ರಾಮಣ್ಣ ಬ್ಯಾಟಿ, ಬಿ.ಎಫ್. ದಂಡಿನ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ, ಸವದತ್ತಿಯ ಸಾಹಿತಿ ವೈ.ಎಂ. ಯಾಕೊಳ್ಳಿ, ಅನೀಲ ವೈದ್ಯ ಅವರು ಶ್ರೀಮಠದಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಭೈರನಹಟ್ಟಿ ಗ್ರಾಪಂ ಆಡಳಿತಾಧಿಕಾರಿ ಬಿ.ಎಸ್. ಪೊಲೀಸ್ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ, ಕ.ಸಾ.ಪ ತಾಲೂಕು ಅಧ್ಯಕ್ಷೆ ಮಂಗಳಾ ಪಾಟೀಲ, ಮಂಜು ಮೆಣಸಗಿ, ಅಜ್ಜು ಪಾಟೀಲ, ಮಹಾಂತೇಶ ಹಿರೇಮಠ, ಎಸ್.ಬಿ.ದಂಡಿನ, ಎಸ್.ಆರ್. ಹಿರೇಮಠ, ಬಿ.ಬಿ. ಕುಂಬಾರ, ಸೋಮು ಹೊಂಗಲ, ಶಂಕರಗೌಡ ಶಿರಿಯಪ್ಪಗೌಡ್ರ, ಶಿವಾನಂದ ಬನಹಟ್ಟಿ, ರವಿ ಮೆಣಸಗಿ ಉಪಸ್ಥಿತರಿದ್ದರು. ಶಿವಪುತ್ರಪ್ಪ ಹೂಗಾರ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts