More

    ಕನ್ನಡಿಗರಲ್ಲಿ ಭಾಷೆ, ನೆಲ, ಜಲದ ಬಗ್ಗೆ ಕನ್ನಡಗರಲ್ಲಿ ನಿರಾಭಿಮಾನ: ವಿ.ಶ್ರೀನಿವಾಸಪ್ರಸಾದ್ ಬೇಸರ

    ಮೈಸೂರು: ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರಿಗೆ ಸ್ವಾಭಿಮಾನ ಬರಬೇಕು. ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪಕ್ಷಾತೀತ, ಧರ್ಮಾತೀತವಾಗಿ ವಿರೋಧಿಸಿ ಹೋರಾಟ ನಡೆಸಬೇಕು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
    ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಮತ್ತು ಸಮಾನತೆ ಪ್ರಕಾಶನ ಸಹಯೋಗದಲ್ಲಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಲೇಖಕ ಸಿ.ನಾಗಣ್ಣ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಆರ್ಥಿಕ, ಸಾಮಾಜಿಕ ಎಲ್ಲ ಕ್ಷೇತ್ರಗಳಲ್ಲಿ ರಾಜ್ಯ ಪ್ರಗತಿ ಸಾಧಿಸಿ ರಾಷ್ಟ್ರದ ಮುಂಚೂಣಿಯ ಸ್ಥಾನ ಪಡೆದಾಗ ಏಕೀಕರಣದ ಉದ್ದೇಶ ಈಡೇರಲಿದೆ. ಆ ಮೂಲಕ ಕೆಂಗಲ್ ಹನುಮಂತಯ್ಯ ಅವರ ಕನಸನ್ನು ನನಸಾಗಿಸಲಾಗಿದೆ. ಆದರೆ ಕನ್ನಡಿಗರಲ್ಲಿ ಭಾಷೆ, ನೆಲ, ಜಲದ ಬಗ್ಗೆ ನಿರಾಭಿಮಾನವಿದೆ ಎನ್ನುವ ಕೊರಗಿದೆ ಎಂದು ಹೇಳಿದರು.
    ರಾಜ್ಯದಲ್ಲಿ ಆಡಳಿತ ಭಾಷೆ ಸಂಪೂರ್ಣ ಕನ್ನಡವಾಗಬೇಕು. ನ್ಯಾಯಾಂಗ, ಕಾರ್ಯಾಂಗ, ಶಿಕ್ಷಣದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ಕೇವಲ ಒಂದು ದಿನಕ್ಕೆ ಕನ್ನಡ ರಾಜ್ಯೋತ್ಸವ ಸೀಮಿತವಾಗಬಾರದು. ಕನ್ನಡ ಭಾಷೆಗೆ ಆದ್ಯತೆ ಕೊಟ್ಟು ಅನುಷ್ಠಾನಕ್ಕೆ ತರಲು ಹೋರಾಟ ಮಾಡಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ ಇಲ್ಲಿಯವರೆಗೆ ಜಾರಿ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದೇನೆ ಎಂದರು.
    68 ವರ್ಷಗಳ ಹಿಂದೆ ಕರ್ನಾಟಕದ ರಾಜ್ಯ ಏನಾಗಿತ್ತು ಎಂಬುದರ ಕುರಿತು ನಾವು ಅವಲೋಕನ ಮಾಡಬೇಕು. ಕನ್ನಡವನ್ನು ಮಾತಾಡುವ ಜನರು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದರು. 1956ರಲ್ಲಿ 19 ಜಿಲ್ಲೆಗಳನ್ನು ಒಳಗೊಂಡು ಮೈಸೂರು ಪ್ರಾಂತ್ಯವಾಯಿತು. ಡಿ.ದೇವರಾಜ ಅರಸು ಮುಖ್ಯಮಂತ್ರಿಯಾದ ನಂತರ 1973ರಲ್ಲಿ ಕರ್ನಾಟಕ ರಾಜ್ಯವಾಯಿತು ಎಂದರು.
    ಭಾಷೆ ಎಂಬುದು ಅತಿ ಸೂಕ್ಷ್ಮ ವಿಚಾರವಾಗಿದ್ದು ಎನ್ನುವುದಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ತಮಿಳು ಭಾಷಿಕರನ್ನು ಕೆಣಕಿದ್ದರಿಂದ 1973ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಆದರೆ ಇದುವರೆವಿಗೂ ಅಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ನಿಂದ ಸಾಧ್ಯವಾಗಿಲ್ಲ. ರಾಜ್ಯದಲ್ಲಿಯೂ ಗೋಕಾಕ್ ಚಳವಳಿಯಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆದ್ದರಿಂದ ಆಡಳಿತ ನಡೆಸುವರು ಭಾಷೆಯ ಸದಾ ಎಚ್ಚರವಾಗಿರಬೇಕು ಎಂದು ಘಟನೆಗಳನ್ನು ನೆನಪು ಮಾಡಿಕೊಂಡರು.
    ಲೇಖಕ ಪ್ರೊ.ಸಿ.ನಾಗಣ್ಣ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು. ಬೋಧಿದತ್ತ ಕಲ್ಯಾಣ ಸಿರಿ ಭಂತೇಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಿದ್ವಾಂಸ ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ನೀಲಗಿರಿ ತಳವಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts