More

    ಕನ್ನಡ ವಿವಿಗೆ 100 ಕೋಟಿ ರೂ. ಮೀಸಲಿಡಲು ಆಗ್ರಹಿಸಿ ಸಂಶೋಧನಾರ್ಥಿಗಳ ಕಾಲ್ನಡಿಗೆ ಜಾಥಾ

    ಹೊಸಪೇಟೆ: ಕನ್ನಡ ವಿವಿಗೆ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡುವುದು ಹಾಗೂ ಡಿಎಂಎಫ್ ಅನುದಾನದಡಿ ತಕ್ಷಣ 10 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿವಿ ಸಂಶೋಧನಾರ್ಥಿಗಳು ಹಾಗೂ ಸಿಬ್ಬಂದಿ ಗುರುವಾರ ತಹಸಿಲ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ತಹಸೀಲ್ದಾರ್ ಎಚ್.ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು.

    ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿ, ಏಷ್ಯಾದಲ್ಲೇ ಭಾಷೆಗಾಗಿ ಇರುವ ಏಕೈಕ ವಿವಿ ಎಂಬ ಹೆಗ್ಗಳಿಕೆ ಪಡೆದಿರುವ ಕನ್ನಡ ವಿವಿಗೆ ಅನುದಾನ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಮಠ ಮಾನ್ಯಗಳಿಗೆ ಕೋಟಿಗಟ್ಟಲೆ ಹಣ ನೀಡುವ ಸರ್ಕಾರ, ಕನ್ನಡ ವಿವಿ ಉಳಿವಿಗೆ ಅನುದಾನ ನೀಡಲು ಮೀನಮೇಷ ಎಣಿಸುತ್ತಿರುವುದು ದುರಂತ. ಈ ಭಾಗದಲ್ಲಿ ಸಂಸದ, ಶಾಸಕರಿದ್ದರೂ ಅನುದಾನ ತರಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿವಿ ಸಿಬ್ಬಂದಿ, ಸಂಶೋಧನಾರ್ಥಿಗಳು ಮನೆ ಬಾಡಿಗೆ ಕಟ್ಟಲು ಪರದಾಡುವಂತಾಗಿದೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

    ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಜಂಬಯ್ಯ ನಾಯಕ ಮಾತನಾಡಿ, 10 ತಿಂಗಳಿಂದ ವಿವಿ ಕಾಯಂ ನೌಕರರಿಗೆ ವೇತನ ನೀಡಿಲ್ಲ. 2 ವರ್ಷದಿಂದ ಸಂಶೋಧನಾರ್ಥಿಗಳಿಗೆ ಸಹಾಯ ಧನ ಮತ್ತು ಗುತ್ತಿಗೆ ನೌಕರರಿಗೆ ವೇತನ ಕೊಟ್ಟಿಲ್ಲ. ಅಲ್ಪಸಂಖ್ಯಾತ ಸಂಶೋಧನಾ ವಿದ್ಯಾರ್ಥಿಗಳಿಗೆ ಮೊದಲಿನಂತೆ ಮಾಸಿಕ 25 ಸಾವಿರ ರೂ. ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು.

    ಎಸ್‌ಎಫ್‌ಐ ಸಂಚಾಲಕರಾದ ಕ. ಸಂಗಮೇಶ, ದೊಡ್ಡ ಬಸವರಾಜ, ಸಹ ಸಂಚಾಲಕರಾದ ರಾಗಿಣಿ, ವಿ.ಪಂಪಾಪತಿ, ಎಸ್.ಕೆ. ರಾಜೇಶ, ಸಂಶೋಧನಾರ್ಥಿಗಳಾದ ದಾದಾ ಹಯಾಥ್, ವಿ.ಮಹೇಶ, ವಿವಿ ಸಿಬ್ಬಂದಿ, ಗುತ್ತಿಗೆ ನೌಕರರು ಹಾಗೂ ಸಮುದಾಯ ಕರ್ನಾಟಕ, ಭಾರತ ಪ್ರಜಾಸತ್ತಾತ್ಮಕ ಯುವಜನರ ಫೆಡರೇಷನ್ ಹಾಗೂ ರಾಜ್ಯ ದೇವದಾಸಿ ಮಹಿಳಾ ವಿಮೋಚನೆ ಸಂಘದ ಪದಾಧಿಕಾರಿಗಳು ಭಾಗಹಿಸಿದ್ದರು.

    ಕುಸಿದು ಬಿದ್ದ ವಿದ್ಯಾರ್ಥಿನಿ
    ಕಾಲ್ನಡಿಗೆ ಜಾಥಾ ವೇಳೆ ರೋಟರಿ ವೃತ್ತದ ಬಳಿ ಸಂಶೋಧನಾ ವಿದ್ಯಾರ್ಥಿನಿ ಅಭಿಲಾಷಾ ಎಂಬುವರು ಬಿಸಿಲಿನ ತಾಪಕ್ಕೆ ಕುಸಿದು ಬಿದ್ದರು. ತಕ್ಷಣ ಸ್ನೇಹಿತರು, ಮುಖಂಡರು ನೆರಳಿಗೆ ಕರೆದೊಯ್ದು ಉಪಚಾರ ಮಾಡಿ ನೀರು ಕುಡಿಸಿದ ಬಳಿಕ ಚೇತರಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts