More

  ಮಕ್ಕಳಿಲ್ಲದೇ ಐದು ಶಾಲೆಗಳು ಬಂದ್

  ಕಾರವಾರ: ಇಂಗ್ಲಿಷ್ ಭಾಷೆಯ ವ್ಯಾಮೋಹ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲು ಕಾರಣವಾಗುತ್ತಿವೆ.

  ಈ ಬಾರಿ ಕಾರವಾರ ತಾಲೂಕಿನಲ್ಲಿ ಮೂರು ಸೇರಿ ಕಾರವಾರ ಶೈಕ್ಷಣಿಕ ಜಿಲ್ಲೆಯ 5 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಆ ಶಾಲೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ.
  ಕಾರವಾರದ ಸಕಲ ಬಾಳ್ನಿ, ನಗರದ ನಂದನಗದ್ದಾ ಸಂಕ್ರುಬಾಗ,ಅಂಕೋಲಾ ತಾಲೂಕಿನ ಮಾದಗಿ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಕಾರವಾರ ತಾಲೂಕಿನ ಗೋಪಶಿಟ್ಟಾ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಈ ಬಾರಿ ಜುಲೈ ಕಳೆದರೂ ಮಕ್ಕಳ ಕಲರವ ಇಲ್ಲ.

  ಅಲ್ಲದೆ, ಹೊನ್ನಾವರ ತಾಲೂಕಿನ ಹುಚ್ಚೋಡಿ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯೂ ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಹಾಕಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ತಿಳಿಸುತ್ತದೆ.

  ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಯಶವಂತಪುರ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕ್ಲೋಸ್
  ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಪಾಲಕರಲ್ಲಿ ಅಪನಂಬಿಕೆ ಇದೆ. ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತು ಉನ್ನತ ನೌಕರಿ ಮಾಡಬೇಕು ಎಂದು ಇಚ್ಛೆ ಪಡುವ ಪಾಲಕರು ಕಾರವಾರ, ಸದಾಶಿವಗಡ, ಉಳಗಾ, ಹೀಗೆ ವಿವಿಧೆಡೆ ಇರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಷ್ಟಪಟ್ಟು, ಹೆಚ್ಚಿನ ಫೀ ತುಂಬಿ ಮಕ್ಕಳನ್ನು ಕಳಿಸುತ್ತಿದ್ದಾರೆ.

  ಇದರಿಂದ ಎಲ್ಲವನ್ನೂ ಉಚಿತ ಕೊಟ್ಟರೂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.
  ಗೋವಾಕ್ಕೆ ವಿದ್ಯಾರ್ಥಿಗಳು:
  ಕಾರವಾರ ತಾಲೂಕಿನ ಗೋವಾ ಗಡಿ ಭಾಗದ ಮಾಜಾಳಿ, ಮುಡಗೇರಿ, ಹಣಕೋಣ ಗ್ರಾಪಂಗಳ ಐದಕ್ಕೂ ಹೆಚ್ಚು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಇತ್ತೀಚಿನ 10 ವರ್ಷಗಳಲ್ಲಿ ಬಾಗಿಲು ಹಾಕಿವೆ.

  See also  ಮಕ್ಕಳಿಂದ ಶೇ.70ರಷ್ಟು ಫೀಸ್​ ವಸೂಲಿ ಮಾಡಿ, ಶಿಕ್ಷಕರಿಗೆ ಶೇ.70ರಷ್ಟು ಸಂಬಳ ನೀಡಿ ಎಂದ ಹೈಕೋರ್ಟ್​

  ಇಲ್ಲಿನ ವಿದ್ಯಾರ್ಥಿಗಳು ಗೋವಾದಲ್ಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ತೆರಳುತ್ತಿದ್ದಾರೆ. ಗೋವಾದ ಖಾಸಗಿ ಶಾಲೆಗಳ ಬಸ್ ಇಲ್ಲಿಗೆ ಬಂದು ಮಕ್ಕಳನ್ನು ಕರೆದೊಯ್ಯುತ್ತದೆ.
  ಇನ್ನೂ 54 ಶಾಲೆಗಳು:
  ಇನ್ನೂ ಹಲವು ಶಾಲೆಗಳು ಮುಚ್ಚುವ ಹಂತದಲ್ಲಿವೆ. ಗೋವಾ ರಾಜ್ಯದ ಗಡಿ ತಾಲೂಕು ಕಾರವಾರದಲ್ಲೇ ಇಂಥ ಶಾಲೆಗಳ ಸಂಖ್ಯೆ ಹೆಚ್ಚಿರುವುದು ಕನ್ನಡಕ್ಕೆ ಎದುರಾಗಿರುವ ಕಂಠಕವನ್ನು ತೋರಿಸುತ್ತದೆ.
  ಕಾರವಾರ ಶೈಕ್ಷಣಿಕ ಜಿಲ್ಲೆಯ 46 ಕಿರಿಯ ಹಾಗೂ 8 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಐದಕ್ಕಿಂತ ಕಡಿಮೆ ಮಕ್ಕಳಿದ್ದಾರೆ.

  74 ಕಿರಿಯ ಹಾಗೂ 20 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಐದಕ್ಕಿಂತ ಹೆಚ್ಚು 10 ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಒಟ್ಟಾರೆ ಕಾರವಾರ ಶೈಕ್ಷಣಿಕ ಜಿಲ್ಲೆಯ 148 ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಮಕ್ಕಳಿದ್ದು, ಬರುವ ವರ್ಷಗಳಲ್ಲಿ ಮಕ್ಕಳ ದಾಖಲಾತಿ ಆಗದೇ ಇದ್ದರೆ ಅವೂ ಮುಚ್ಚುವ ಸ್ಥಿತಿಯಲ್ಲಿವೆ.  

  ಅಂಕೋಲಾದ-26, ಭಟ್ಕಳದ-13, ಹೊನ್ನಾವರದ-35, ಕಾರವಾರದ-46, ಕುಮಟಾದ-28 ಶಾಲೆಗಳು ಅತಿ ಕಡಿಮೆ ದಾಖಲಾತಿ ಹೊಂದಿವೆ.
  ಬೇರೆ ಶಾಲೆಗೆ ಶಿಕ್ಷಕರ ನಿಯೋಜನೆ
  ಕಳೆದ ವರ್ಷದ ಮಕ್ಕಳ ದಾಖಲಾತಿ ಸಂಖ್ಯೆಯನ್ನಾಧರಿಸಿ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾವಣೆ ಮಾಡುವ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 60 ಕ್ಕೂ ಅಽಕ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾಯಿಸಲಾಗಿದೆ. ಈಗ ಬಂದಾಗಿರುವ ಶಾಲೆಗಳ ಶಿಕ್ಷಕರು ಹೆಚ್ಚುವರಿ ವ್ಯಾಪ್ತಿಗೆ ಸೇರಿಲ್ಲ. ಅಂಥ ಶಿಕ್ಷಕರನ್ನು ಸಮೀಪದ, ಮಕ್ಕಳ ಸಂಖ್ಯೆ ಹೆಚ್ಚಿರುವ, ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಿಯೋಜಿಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಣಾಧಿಕಾರಿಗಳು.  ದಾಖಲಾತಿ ಇಲ್ಲದ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಮುಂದಿನ ವರ್ಷ ಮಕ್ಕಳು ದಾಖಲಾದರೆ ಮತ್ತೆ ತೆರೆಯಲಾಗುವುದು. ಎರಡು ಶಾಲೆಗಳ ಶಿಕ್ಷಕರನ್ನು ಈಗಾಗಲೇ ಶಿರವಾಡ ಕೆಪಿಎಸ್ ಶಾಲೆಗೆ ನಿಯೋಜಿಸಲಾಗಿದೆ. ಇನ್ನೊಂದು ಶಾಲೆಯ ಶಿಕ್ಷಕರು ಭಟ್ಕಳದಲ್ಲಿ ಹೆಚ್ಚುವರಿಯಾಗಿ ಕಾರವಾರಕ್ಕೆ ವರ್ಗಾವಣೆಯಾಗಿದ್ದಾರೆ. ಅವರಿನ್ನೂ ಹಾಜರಾಗಿಲ್ಲ.
  ಚಂದ್ರಹಾಸ ರಾಯ್ಕರ್
  ಬಿಇಒ ಕಾರವಾರ
  .

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts