More

  ಪ್ರಾದೇಶಿಕತೆಯ ಅಸ್ತಿತ್ವಕ್ಕೆ ದ್ವಿಭಾಷಾ ಸೂತ್ರ ಸೂಕ್ತ

  ಕೋಲಾರ: ತ್ರಿಭಾಷಾ ಸೂತ್ರ ಎನ್ನುವುದು ರಾಷ್ಟ್ರೀಯ ಪಕ್ಷಗಳ ದಬ್ಬಾಳಿಕೆಯಾಗಿದೆ. ಪ್ರಾದೇಶಿಕತೆಯ ಅಸ್ತಿತ್ವಕ್ಕೆ ದ್ವಿಭಾಷಾ ಸೂತ್ರ ಸೂಕ್ತ ಎಂದು ವಿಮರ್ಶಕ ಡಾ. ಚಂದ್ರಶೇಖರ ನಂಗಲಿ ಅಭಿಪ್ರಾಯಪಟ್ಟರು.

  ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ನಡೆದ 18ನೇ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿ, ದ್ವಿಭಾಷಾ ಸೂತ್ರದಿಂದ ಪ್ರಾದೇಶಿಕತೆಯ ಅಸ್ಮಿತೆಗೆ ಬಲ ಸಿಗುತ್ತದೆ. ಆದರೆ ತ್ರಿಭಾಷಾ ಸೂತ್ರ ಜಾರಿಗೊಳಿಸಲು ರಾಷ್ಟ್ರೀಯ ಪಕ್ಷಗಳು ಹಪಹಪಿಸುತ್ತಿರುವುದು ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ಟೀಕಿಸಿದರು.

  ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಸಾಕು ಎಂದರು.

  ನಮ್ಮದು ಅಪರಿಮಿತದ ಕತ್ತಲೆಯ ಭಾರತ, ಅಯೋಧ್ಯೆಯ ರಾಮಮಂದಿರದಿಂದ ಹಿಡಿದು ಇತ್ತೀಚಿನ ಪೌರತ್ವ ತಿದ್ದುಪಡಿ ವಿಷಯವನ್ನು ಗಮನಹರಿಸಿದರೆ ಅಖಂಡ ಭಾರತದ ಕನಸು ನನಸಾಸುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ. ಮುಂದಿನ ದಿನಗಳಲ್ಲಾದರೂ ಇದೆಲ್ಲವೂ ಕರಗಿ ವಿಪರೀತದ ಬೆಳಕಾಗಲಿ ಎಂದರು.

  ಭಾರತದ ಮಣ್ಣು, ನೀರು ಗಾಳಿ, ಬೆಳಕು ಅನ್ಯಾಕ್ರಾಂತವಾಗಿದೆ. ಇಂದು ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ನೆಲ, ಜಲವನ್ನು ವಿಷಕ್ರಾಂತವನ್ನಾಗಿಸುತ್ತಿದೆ. ಮನುಷ್ಯ ಮನಸ್ಸು ಮಾಡಿದರೆ ಭೂಮಿಯ ತಾಪಮಾನ ಕಡಿಮೆ ಮಾಡಬಹುದು. ಆದರೆ ಸಂಕಲ್ಪ ಶಕ್ತಿಯ ಕೊರತೆಯನ್ನು ಕಾಣುತ್ತಿದ್ದೇವೆ. ಜನರನ್ನು ಜಾಗೃತಿಗೊಳಿಸುವಂತಹ ಕೆಲಸ ಸಾಹಿತಿ, ಬರಹಗಾರರಿಂದ ಆಗಬೇಕು ಎಂದು ಹೇಳಿದರು.

  ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಭಾರತ ದೇಶ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿರುವುದರಿಂದ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳುವುದು ಅನಿವಾರ್ಯ. ಮುಂದಿನ ದಿನಗಳಲ್ಲಿ ದ್ವಿಭಾಷಾ ನೀತಿ ಕುರಿತು ಚರ್ಚೆಗಳಾಗುವ ಸಂದರ್ಭಗಳು ಒದಗಿಬರಬಹುದು. ಇಂಗ್ಲಿಷ್ ಕಲಿಯದಿದ್ದರೆ ಕೆಲಸ ಸಿಗಲ್ಲ ಎಂಬುದು ಸತ್ಯ ಆಗಿದ್ದರೂ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರ ಸಾಧನೆ ದೊಡ್ಡದಾಗಿ ಬೆಳೆಯುತ್ತದೆ ಎಂದು ನುಡಿದರು.

  ಕನ್ನಡ ಬದುಕು ಮತ್ತು ಜೀವನದ ಭಾಷೆಯಾಗಿದೆ. ಆದರೆ ಪುಸ್ತಕಗಳನ್ನು ಓದುವ ಅಭ್ಯಾಸ ಕಡಿಮೆಯಾಗುತ್ತಿರುವುದು ದುರ್ದೈವದ ಸಂಗತಿ, ಸಾಹಿತ್ಯ ಎನ್ನುವುದು ಜನರ ಬದುಕಿಗೆ ಸಂಬಂಧಿಸಿದ್ದು. ಒಳ್ಳೆಯ ರಾಜಕಾರಣಿಗಳು ಹೊರಹೊಮ್ಮಲು ಸಾಹಿತಿಗಳ ಮಾರ್ಗದರ್ಶನ ಅಗತ್ಯ ಎಂದರು.

  ಸಾಹಿತಿ ಮಾ.ವೆಂ.ತಮ್ಮಯ್ಯ ಆಶಯ ನುಡಿಗಳನ್ನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಸಿ.ಎಂ. ಗೋವಿಂದರೆಡ್ಡಿ, ಕಸಾಪ ಮಾಜಿ ಅಧ್ಯಕ್ಷ ರಾಂಪ್ರಸಾದ್, ಬಿಇಒ ಮಾಧವರೆಡ್ಡಿ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉದಯಕುಮಾರ್, ಕನ್ನಡಪರ ಒಕ್ಕೂಟಗಳ ಅಧ್ಯಕ್ಷ ಅ.ಕೃ.ಸೋಮಶೇಖರ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಜ.ಮು ಚಂದ್ರು, ದಾಸ ಸಾಹಿತ್ಯ ಪರಿಷತ್ ಅಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ವಾಣಿ ಪ್ರಹ್ಲಾದರಾವ್, ರಾಜ್ಯ ಯುವ ಬರಹಗಾರರ ಒಕ್ಕೂಟದ ಅಧ್ಯಕ್ಷ ಹೂಹಳ್ಳಿ ನಾಗರಾಜ್, ಸಮಾಜ ಸೇವಕ ಸಿಎಂಆರ್ ಶ್ರೀನಾಥ್, ಮುಖ್ಯಶಿಕ್ಷಕ ಜಿ.ಶ್ರೀನಿವಾಸ್, ಕನ್ನಡ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ್, ನಗರಸಭೆ ಆಯುಕ್ತ ಶ್ರೀಕಾಂತ್ ಇತರರು ಭಾಗವಹಿಸಿದ್ದರು.

  ಪ್ರಮುಖ ನಿರ್ಣಯಗಳು: ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಶಾಶ್ವತ ನೀರಾವರಿ ಯೋಜನೆ ತುರ್ತಾಗಿ ಜಾರಿಯಾಗಬೇಕು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳ ಬಲವರ್ಧನೆಗೊಳಿಸಿ ಉತ್ತಮ ಶಿಕ್ಷಣ ನೀಡಬೇಕು ಎಂಬ ಮೂರು ಅಂಶಗಳ ನಿರ್ಣಯವನ್ನು 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಂಡಿಸಿದರು. ಕನ್ನಡ ಮನಸ್ಸುಗಳು ಈ ನಿರ್ಣಯನ್ನು ಅಂಗೀಕರಿಸಿದವು. ಕಳೆದ ಐದಾರು ಸಮ್ಮೇಳನಗಳಲ್ಲಿ ಯಾವುದೇ ನಿರ್ಣಯಗಳನ್ನು ಅಂಗೀಕರಿಸಿರಲಿಲ್ಲ. ಈ ಬಾರಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಮೂರು ನಿರ್ಣಯಗಳು ಸಭಿಕರ ಗಮನ ಸೆಳೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts