More

    86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಸಲು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ

    ಕಲಬುರಗಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಆಯೋಜಿಸಲು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
    ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅಧ್ಯಕ್ಷತೆಯ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ, ಹಾವೇರಿ, ಚಿಕ್ಕಬಳ್ಳಾಪುರ ಹೆಸರು ಪ್ರಸ್ತಾಪಕ್ಕೆ ಬಂದವು. ಸಮಗ್ರ ಚರ್ಚೆ ನಡೆಸಿದ ಬಳಿಕ ಅಂತಿಮವಾಗಿ ಹಾವೇರಿ ಜಿಲ್ಲೆಗೆ ಅವಕಾಶ ಕಲ್ಪಿಸುವ ನಿರ್ಣಯ ಕೈಗೊಳ್ಳಲಾಯಿತು.
    ಹಿಂದೊಮ್ಮೆ ಸಮ್ಮೇಳನ ಆತಿಥ್ಯ ವಿಷಯದಲ್ಲಿ ಅಪಖ್ಯಾತಿಗೆ ಗುರಿಯಾಗಿದ್ದ ಹಾವೇರಿಗೆ ಕೊನೆಗೂ ಅಖಿಲ ಭಾರತ ಅಕ್ಷರ ಜಾತ್ರೆ ಆತಿಥ್ಯ ಸಿಕ್ಕಿದೆ. ಹಿಂದಿನ ಗೊಂದಲ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ ಎಂದು ಡಾ.ಬಳಿಗಾರ ಹೇಳಿದರು.
    86ನೇ ಸಮ್ಮೇಳನದ ಆತಿಥ್ಯ ವಹಿಸಲು ಹಾವೇರಿ, ಚಿಕ್ಕಬಳ್ಳಾಪುರ ಹಾಗೂ ಮೂಡಬಿದಿರೆ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಜಿಲ್ಲಾ ಮತ್ತು ಗಡಿನಾಡು ಸೇರಿ 39 ಜಿಲ್ಲೆ ಕಸಾಪ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು. ಹಾವೇರಿ ಪರ 21 ಜನ ಒಲವು ತೋರಿದರೆ, ಚಿಕ್ಕಬಳ್ಳಾಪುರ ಪರ 18 ಜನ ಒಲವು ತೋರಿದರು. ಸಾಹಿತ್ಯ ಪರಿಷತ್ ಜತೆಗೆ ಜನಪ್ರತಿನಿಧಿಗಳೂ ಪತ್ರ ಕೊಟ್ಟಿದ್ದು, ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದು 23 ವರ್ಷವಾದರೂ ಹಾವೇರಿಯಲ್ಲಿ ಸಮ್ಮೇಳನ ನಡೆದಿಲ್ಲ. ಈ ಎಲ್ಲ ಕಾರಣದಿಂದಾಗಿ ಹಾವೇರಿಗೆ ಆತಿಥ್ಯ ನೀಡಲಾಗಿದೆ ಎಂದು ತಿಳಿಸಿದರು.
    ಕಸಾಪ ಗೌರವ ಕಾರ್ಯದರ್ಶಿಗಳಾದ ರಾಜಶೇಖರ ಹತಗುಂದಿ, ವ.ಚ. ಚೆನ್ನೇಗೌಡ, ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಲಬುರಗಿ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts