More

    ಕನ್ನಡ ರಕ್ಷಣೆಗಾಗಿ ರಾಜಕಾರಣಿಗಳು ಜೈಲಿಗೆ ಹೋಗಿಲ್ಲ: ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯ

    ಕೆ.ಆರ್.ಪೇಟೆ: ಕನ್ನಡ ನಾಡು, ನುಡಿ ರಕ್ಷಣೆಗಾಗಿ ಯಾವ ರಾಜಕೀಯ ಪಕ್ಷದವರೂ ಜೈಲಿಗೆ ಹೋಗಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯಪಟ್ಟರು.
    ಪಟ್ಟಣದ ಪುರಸಭೆಯ ಆವರಣದಲ್ಲಿ ತಾಲೂಕು ಕರವೇ ವತಿಯಿಂದ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 25 ವರ್ಷಗಳಿಂದ ನಮ್ಮ ನಾಡಿನ ಭಾಷೆ, ನೆಲ, ಜಲಕ್ಕಾಗಿ ಬೆಂಗಳೂರು, ಬಳ್ಳಾರಿ ಜೈಲುವಾಸ ಅನುಭವಿಸಿದ್ದೇನೆ. ಆಗ ಯಾವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ನನ್ನ ನೆರವಿಗೆ ಬರಲಿಲ್ಲ. ರಾಜಕಾರಣಿಗಳು ತಮ್ಮ ತೆವಲು ತೀರಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಅದರೆ ನಮ್ಮ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ ಎಂದರು.
    ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ನಾಡಿನೆಲ್ಲಡೆ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಕರವೇ ಕನ್ನಡ ನಾಡಿನ, ನೆಲ, ಜಲ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತು ಕೆಲಸ ಮಾಡುತ್ತಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಅಭಿಮಾನಿ ಪಡೆಯನ್ನು ಹೊಂದಿ ನಾಡನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದರು.
    ಮಾತಿನ ಚಕಮಕಿ: ಜೆಡಿಎಸ್ ಮುಖಂಡ ಬಸ್ ಸಂತೋಷ್ ತಮ್ಮ ಮಾತಿನ ಮಧ್ಯೆ ‘ಆಲಿಬಾಬ ಮತ್ತು ಅವರ ನಲವತ್ತು ಮಂದಿ ಕಳ್ಳರಂತೆ ತಾಲೂಕಿನಲ್ಲೂ ಒಬ್ಬ ಆಲಿಬಾಬ ಮತ್ತು ನಾಲ್ಕು ಮಂದಿ ಕಳ್ಳರಿದ್ದಾರೆ’ ಎಂದು ಹೇಳಿದರು. ವೇದಿಕೆಯಲ್ಲಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಇದರಿಂದ ಆಕ್ರೋಶಗಂಡು ‘ಏನು ಹೇಳತ್ತಿದ್ದಿಯಾ’ ಎಂದು ಪ್ರಶ್ನಿಸಿದರು. ಸಂತೋಷ್ ಪ್ರತಿಕ್ರಿಯಿಸಿ, ತಾಲೂಕಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದಾಗಿ ಹೇಳಿದರು. ಆಗ ಇಬ್ಬರ ನಡುವೆ ವೇದಿಕೆ ಮೇಲೆ ಮಾತಿನ ಚಕಮಕಿ ನಡೆಯಿತು. ಈ ನಡುವೆ, ಟಿ.ಎ.ನಾರಾಯಣಗೌಡ ಪ್ರತಿಕ್ರಿಯಿಸಿ, ಇದು ರಾಜಕೀಯ ವೇದಿಕೆಯಲ್ಲ. ಇಂತಹ ವೇದಿಕೆಗೆ ರಾಜಕಾರಣಿಗಳನ್ನು ಕರೆಯಬಾರದೆಂದು ಆಯೋಜಕರಿಗೆ ಕಿವಿಮಾತು ಹೇಳಿದರು.
    ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ, ಆರ್‌ಟಿಒ ಅಧಿಕಾರಿ ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ್, ಗುತ್ತಿಗೆದಾರ ಎ.ಆರ್.ರಘು, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ವಿಜಯ್‌ಕುಮಾರ್, ಕಿರಣ್, ಲೋಕೇಶ್, ನಾಟನಹಳ್ಳಿ ಗಂಗಾಧರ್, ಎಂ.ಪಿ.ಲೋಕೇಶ್, ಬಸವೇಗೌಡ, ಬಿ.ಎನ್.ದಿನೇಶ್, ಬಸ್ತಿರಂಗಪ್ಪ, ತಾಲೂಕು ರಕ್ಷಣಾ ವೇದಿಕೆಯ ಅಧ್ಯಕ್ಷ ಡಿ.ಎಸ್.ವೇಣು, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts