More

    ಮೈಸೂರಿನ ತಾಯಿ ಭುವನೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಕನ್ನಡಾಂಬೆ ದೇಗುಲದ ವಿಶೇಷತೆಗಳಿವು

    ಮೈಸೂರು: ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಡಗರ ಸಂಭ್ರಮ ಮನೆ ಮಾಡಿದೆ. ಕರ್ನಾಟಕ ಏಕೀಕರಣಕ್ಕೆ 50 ವರ್ಷ ಸಂದಿರುವ ಹಿನ್ನೆಲೆ ಈ ಬಾರಿ ರಾಜ್ಯೋತ್ಸವದ‌ ಸಂಭ್ರಮ ಹೆಚ್ಚಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇದಕ್ಕೆ ಕಾರಣ ಮೈಸೂರಿನಲ್ಲಿರುವ ಕನ್ನಡಾಂಬೆ ತಾಯಿ ಭುವನೇಶ್ವರಿಯ ವಿಶೇಷ ದೇಗುಲ. ಮೈಸೂರು ರೈಲು ನಿಲ್ದಾಣದಿಂದ 3 ಕಿಮೀ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿಮೀ ದೂರದಲ್ಲಿರುವ ಭುವನೇಶ್ವರಿ ದೇವಸ್ಥಾನವು ಮೈಸೂರು ಅರಮನೆಯ ಉತ್ತರ ಭಾಗದಲ್ಲಿದೆ. 

    ಅರಮನೆಯ ಆವರಣದಲ್ಲಿರುವ ಜೈ ಭುವನೇಶ್ವರಿ ದೇವಸ್ಥಾನದಲ್ಲಿ‌ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌ ಸಿ ಮಹದೇವಪ್ಪ ಅವರು ಪೂಜೆ ನೆರವೇರಿಸಿದರು. ಅಂದಹಾಗೆ ಈ ವಿಶೇಷ ಸಂದರ್ಭದಲ್ಲಿ ಅರಮನೆಯ ಬಲರಾಮ ದ್ವಾರದಿಂದ ಓವಲ್ ಮೈದಾನದವರೆಗೆ ಜೈಭುವನೇಶ್ವರಿ ಪ್ರತಿಮೆ ಮೆರವಣಿಗೆ ಮಾಡಲಾಗುತ್ತಿದೆ.

    ಅಗ್ರಪೂಜೆ ಕನ್ನಡಾಂಬೆಗೆ
    ಮೈಸೂರಿನಲ್ಲಿ ಭುವನೇಶ್ವರಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ವಿವಿಧ ಅಭಿಷೇಕ, ಸಂಕಲ್ಪ ಪೂಜೆ ಹಾಗೂ ಅರ್ಚನೆ ಸೇರಿ ಹಲವು ಪೂಜೆಯನ್ನು ನೆರವೇರಿಸಲಾಗುತ್ತದೆ. ಈ ದೇಗುಲವನ್ನು 1951ರಲ್ಲಿ ಯದುವಂಶದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಅವರು ಕಟ್ಟಿಸಿದರು. ಇದನ್ನು ಭುವನೇಶ್ವರಿ ಅಮ್ಮನವರ ದೇವಾಲಯ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನ ಚೋಳ ಶೈಲಿಯ ಗೋಪುರವನ್ನು ಹೊಂದಿದೆ. ಇಲ್ಲಿನ ಪ್ರಧಾನ ದೇವರು ಕನ್ನಡಾಂಬೆ ತಾಯಿ ಭುವನೇಶ್ವರಿ. ಖ್ಯಾತ ಶಿಲ್ಪಿ ಸಿದ್ದಲಿಂಗಸ್ವಾಮಿ ಈ ವಿಗ್ರಹವನ್ನು ಆಕರ್ಷಕವಾಗಿ ಕೆತ್ತಿದ್ದಾರೆ. ದೇಗುಲದಲ್ಲಿ ಸೂರ್ಯ, ಮಹಾವಿಷ್ಣು, ಮಹೇಶ್ವರ, ರಾಜರಾಜೇಶ್ವರಿ, ತಾಯಿ ಚಾಮುಂಡೇಶ್ವರಿ ಗಣಪತಿ ವಿಗ್ರಹಗಳಿವೆ. ಆದರೆ ಇಲ್ಲಿ ಅಗ್ರಪೂಜೆ ಕನ್ನಡಾಂಬೆಗೆ ಸಲ್ಲುತ್ತದೆ.

    ದೊಡ್ಡ ಸೂರ್ಯ ಮಂಡಲ
    ಈ ದೇವಾಲಯದಲ್ಲಿ ದೊಡ್ಡ ಸೂರ್ಯ ಮಂಡಲವಿದೆ. ಈ ತಾಮ್ರದ ಫಲಕ ಹಿಂದೆ ರಾಜರ ಜತೆಗೆ ಇತ್ತು. ಇದನ್ನು ಜಯಚಾಮರಾಜ ಒಡೆಯರ್‌ ಅವರು ದೇವಾಲಯಕ್ಕೆ ನೀಡಿದರು ಎಂದು ಹೇಳಲಾಗಿದೆ. ಫೆಬ್ರವರಿ/ಮಾರ್ಚ್‌ನಲ್ಲಿ ನಡೆಯುವ ರಥಸಪ್ತಮಿ ಸಂದರ್ಭ ಇದಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ದೇಗುಲದೊಳಗಿದೆ ಹಲವು ಸಸ್ಯರಾಶಿ
    ದೇಗುಲದಲ್ಲಿರುವ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದಾಳೆ. ಅದರಲ್ಲಿ ಎರಡು ಕೈಗಳಲ್ಲಿ ಅಂಕುಶ ಮತ್ತು ಕುಣಿಕೆಯಿವೆ. ದೇವಸ್ಥಾನದ ವಾಸ್ತುಶಿಲ್ಪ ಅಪರೂಪ. ಒಳ ಆವರಣದಲ್ಲಿ ಪವಿತ್ರವಾದ ಮರ ಗಿಡಗಳಿವೆ. ಯದುವಂಶದ ರಾಜರು ವಿಜಯದಶಮಿಯ ದಿನ ಪೂಜಿಸುವ ಬನ್ನಿ ಮರ, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮರ, ಸೇವಂತಿಗೆ ಮರ, ತೆಂಗು ಬಾಳೆ ದಾಸವಾಳದ ಹೂವಿನ ಗಿಡಿ ಸೇರಿ ಹಲವು ಸಸ್ಯರಾಶಿಯೇ ಇಲ್ಲಿದೆ‌. ಆಕರ್ಷಕ ಬಾವಿ ಕೂಡ ದೇಗುಲದ ಒಳ ಆವರಣದಲ್ಲಿದೆ.

    ಕನ್ನಡ ರಾಜ್ಯೋತ್ಸವ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts