More

    ಕನ್ನಡ ಸಂಘಟನೆಗಳ ಒಗ್ಗಟ್ಟು ಪ್ರದರ್ಶನ

    ಬೆಳಗಾವಿ: ಮಹಾನಗರ ಪಾಲಿಕೆ ಮುಂಭಾಗದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನೆಟ್ಟಿರುವ ಧ್ವಜಸ್ತಂಭ ತೆರವಿಗೆ ಕನ್ನಡಪರ ಹೋರಾಟಗಾರರು ಮಂಗಳವಾರವೂ ಆಸ್ಪದ ನೀಡಲಿಲ್ಲ. ಹೋರಾಟಗಾರರ ಜತೆ ಜಿಲ್ಲಾಡಳಿತ, ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಧಾನ ಸಭೆಗಳೂ ಫಲ ನೀಡಲಿಲ್ಲ.

    ಮಹಾನಗರ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಿಸಬೇಕು ಎಂಬ ದಶಕಗಳ ಕನಸು ನನಸಾದ ಸಂಭ್ರಮದಲ್ಲಿರುವ ಹೋರಾಟಗಾರರು, ಅಧಿಕಾರಿಗಳು ಧ್ವಜಸ್ತಂಭ ತೆಗೆದು ಹಾಕಲು ಪ್ರಯತ್ನಿಸಿದರೆ ಅದನ್ನು ತಡೆಯುವುದಕ್ಕಾಗಿ ಸೋಮವಾರ ರಾತ್ರಿಯಿಂದ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಧ್ವಜ ತೆರವು ಮಾಡದೆ ಅದನ್ನು ರಕ್ಷಣೆ ಮಾಡುವ ಭರವಸೆ ನೀಡುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ. ಪೊಲೀಸರು ನಮ್ಮ ವಿರುದ್ಧ ಕೇಸ್ ದಾಖಲಿಸಿದರೂ ಜಗ್ಗುವುದಿಲ್ಲ. ನಮ್ಮ ಹೋರಾಟಕ್ಕೆ 6 ಕೋಟಿ ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ. ಎಲ್ಲ ಸಂಘಟನೆಗಳ ಕಾರ್ಯಕರ್ತರು ರಕ್ಷಣೆ ಕಾರ್ಯ ದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

    ಕರ್ನಾಟಕ ರಕ್ಷಣಾ ವೇದಿಕೆಯ ಎರಡೂ ಬಣದ ಕಾರ್ಯಕರ್ತರು ಮಂಗಳವಾರ ಧ್ವಜ ನೆಟ್ಟಿರುವ ಹೋರಾಟಗಾರರಿಗೆ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪೊಲೀಸರು ಅಧಿಕಾರಿಗಳು, ಸಿಬ್ಬಂದಿ ಕಾರ್ಯಕರ್ತರನ್ನು ಚದುರಿಸಲು ಪ್ರಯತ್ನಿಸಿದರು ಆದರೆ, ಹೋರಾಟ ತೀವ್ರ ರೂಪ ಪಡೆದುಕೊಳ್ಳುವ ಲಕ್ಷಣ ಕಂಡಿದ್ದರಿಂದ ಹಿಂದೆ ಸರಿದರು. ನಾಡಧ್ವಜ ರಕ್ಷಣೆ ಮಾಡುವುದು ಸರ್ಕಾರದ ಹೊಣೆಗಾರಿಕೆ. ಮುಂದಿನ ಎರಡು ದಿನ ಸ್ಥಳದಲ್ಲಿಯೇ ಇದ್ದು ಧ್ವಜ ರಕ್ಷಣೆ ಮಾಡುತ್ತೇವೆ. ಅಲ್ಲದೆ ಧ್ವಜಕ್ಕೆ ಶಾಶ್ವತ ಕಟ್ಟೆ ನಿರ್ಮಿಸಿದ ಬಳಿಕವೇ ಸ್ಥಳದಿಂದ ಹೋಗುತ್ತೇವೆ ಎಂದು ಹೋರಾಟಗಾರ ಶ್ರೀನಿವಾಸ ತಾಳೂರಕರ್ ತಿಳಿಸಿದ್ದಾರೆ.

    ಧ್ವಜ ಹಾರಿಸಿದ್ದಕ್ಕೆ ಎಂಇಎಸ್ ವಿರೋಧ: ಪಾಲಿಕೆ ಕಟ್ಟಡದ ಮುಂಭಾಗದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನೆಟ್ಟಿರುವ ನಾಡಧ್ವಜವನ್ನು ಡಿ.31ರ ಒಳಗೆ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಎಂಇಎಸ್ ನೇತೃತ್ವದಲ್ಲಿ ಪಾಲಿಕೆಯ ಮಾಜಿ ಮೇಯರ್, ಸದಸ್ಯರು, ಕಾರ್ಯಕರ್ತರು ನಗರದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು. ಕನ್ನಡ ಧ್ವಜ ತೆರವುಗೊಳಿಸದಿದ್ದರೆ ಪಾಲಿಕೆ ಆವರಣದಲ್ಲಿಯೇ ಭಗವಾ ಧ್ವಜ ನೆಡಲಾಗುವುದು ಎಂದು ಉದ್ಘಟತನ ಪ್ರದರ್ಶಿಸಿದರು. ಆದರೆ, ನಗರ ಪೊಲೀಸರು ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಳಿಕ ವಾಪಸ್ ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts