More

    ಇಲಾಖೆ ವೆಬ್‌ಸೈಟ್‌ಗಳಲ್ಲಿ ಕನ್ನಡ ಕಡ್ಡಾಯ: ಅಧಿಕಾರಿಗಳಿಗೆ ನಾಗಾಭರಣ ಸೂಚನೆ

    ಶಿವಮೊಗ್ಗ: ಕೆಡಿಪಿ ಸಭೆಯ ಅಂತ್ಯದಲ್ಲಿ ಕನ್ನಡ ಅನುಷ್ಠಾನ ಚರ್ಚೆ ಮಾಡಲಾಗುತ್ತದೆ. ಇನ್ನು ಮುಂದೆ ಸಭೆಯ ಆರಂಭದಲ್ಲೇ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಚರ್ಚೆ ನಡೆಯಬೇಕು. ಪ್ರಮುಖ ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
    ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕುರಿತು ಬುಧವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಾಮಾನ್ಯ ಜನರು ಹೆಚ್ಚು ಭೇಟಿ ನೀಡುವ ಕಚೇರಿಗಳ ವೆಬ್‌ಸೈಟ್‌ಗಳಲ್ಲಿ ಕನ್ನಡ ಕಣ್ಮರೆಯಾದರೆ ಅವರು ಆಂಗ್ಲ ಭಾಷೆಯನ್ನು ಅರ್ಥೈಸಿಕೊಳ್ಳುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
    ಇದುವರೆಗೆ 11 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಸೂಚನೆ ನೀಡಿದ್ದರೂ ಪೊಲೀಸ್ ಇಲಾಖೆಗೆ ನೀಡಲಾಗುವ ಮರಣೋತ್ತರ ಪರೀಕ್ಷೆ ವರದಿಯನ್ನು ಆಂಗ್ಲ ಭಾಷೆಯಲ್ಲೇ ನೀಡಲಾಗುತ್ತದೆ. ಒಂದು ವೇಳೆ ಅನ್ಯ ರಾಜ್ಯಗಳ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಅವರಿಗೆ ಕನ್ನಡದಲ್ಲಿ ವರದಿ ನೀಡಲು ಸಾಧ್ಯವಾಗದೇ ಇದ್ದರೆ ಆಸ್ಪತ್ರೆಯ ಬೇರೆ ವೈದ್ಯರು ವರದಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಪೊಲೀಸ್ ಇಲಾಖೆಗೆ ನೀಡಬೇಕೆಂದು ತಿಳಿಸಿದರು.
    ಪದಕಣಜ ಗಮನಿಸಿ
    ಇ-ಆಫೀಸ್ ಮೂಲಕ ಪದಕಣಜದಲ್ಲಿ 6 ಲಕ್ಷ ಪದಗಳನ್ನು ಅಳವಡಿಸಲಾಗಿದೆ. ಪ್ರತಿ ಇಲಾಖೆಗೂ ಪ್ರತ್ಯೇಕ ನಿಘಂಟು ರೂಪಿಸಲಾಗಿದೆ. ಇಲಾಖೆಯ ಟೆಂಡರ್ ಜಾಹೀರಾತು ಸಹ ಕನ್ನಡದಲ್ಲೇ ಇರಬೇಕು. ಜಾಗತಿಕ ಟೆಂಡರ್ ಕರೆಯುವ ಸಂದರ್ಭದಲ್ಲಿ ಇದಕ್ಕೆ ವಿನಾಯಿತಿ ನೀಡಬಹುದು. ಇಲ್ಲವೇ ಅಂತ ಜಾಹೀರಾತನ್ನು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಕಟಿಸುವುದು ಸೂಕ್ತ ಎಂದು ಟಿ.ಎಸ್.ನಾಗಾಭರಣ ತಿಳಿಸಿದರು.
    ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಪ್ರಕಾಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸಂತೋಷ್ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಯು.ಉಮೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts