More

    ಆಡಳಿತದಲ್ಲಿ ಕನ್ನಡಕ್ಕೆ ಕಾಯಕ ವರ್ಷ; ಮುಖ್ಯಮಂತ್ರಿ ಘೋಷಣೆ

    ಬೆಂಗಳೂರು: ಆಡಳಿತದಲ್ಲಿ ಕನ್ನಡವನ್ನು ಇನ್ನಷ್ಟು ಪ್ರಭಾವಿಯಾಗಿ ಜಾರಿಗೆ ತರಲು 2021ರ ಅಕ್ಟೋಬರ್ ಅಂತ್ಯದವರೆಗೆ ಕನ್ನಡ ಕಾಯಕ ವರ್ಷವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಸರ್ಕಾರದ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಒತ್ತು ನೀಡಿರುವುದು ಮಹತ್ತರ ಬೆಳವಣಿಗೆಯಾಗಿದೆ. ಅದರ ಜತೆಗೆ ತಂತ್ರಜ್ಞಾನ ಮೂಲಕ ಕನ್ನಡದ ಅಭಿವೃದ್ಧಿಗೆ ಇನ್ನಷ್ಟು ಯೋಜನೆ ಜಾರಿಗೊಳಿಸಲಾಗುವುದು. ನವೆಂಬರ್​ನಲ್ಲಿ ಮಾತ್ರ ಕನ್ನಡಾಭಿಮಾನ ತೋರಿಸದೆ ಅದು ವರ್ಷಪೂರ್ತಿ ಇರುವಂತೆ ಮಾಡಲು, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪ್ರಭಾವಿಯಾಗಿ ಜಾರಿಗೊಳಿಸಲು ಮುಂದಿನ ಅಕ್ಟೋಬರ್​ವರೆಗೆ ಕನ್ನಡ ಕಾಯಕ ವರ್ಷ ಆಚರಿಸಲಾಗುವುದು. ಅದರ ರೂಪುರೇಷೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದರು. ಕನ್ನಡ ಭಾಷಿಕರಿಗಾಗಿ 1956ರ ನವೆಂಬರ್ 1ರಂದು ಮದ್ರಾಸ್, ಬಾಂಬೆ ಮತ್ತು ಹೈದರಾಬಾದ್ ಪ್ರಾಂತ್ಯದ ಪ್ರದೇಶಗಳು ಒಗ್ಗೂಡಿ ಮೈಸೂರು ರಾಜ್ಯ ಉದಯವಾಯಿತು. ಅದಕ್ಕೆ ಹಲವು ಮಹನೀಯರ ಹೋರಾಟವಿದೆ. ಅವರ ಹೋರಾಟದ ಫಲ ವ್ಯರ್ಥವಾಗದಂತೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕವನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

    ಪಂಪರಿಂದ ಕುವೆಂಪುವರೆಗೆ: 2 ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಹಿರಿಮೆಯನ್ನು ದಾಸರು, ಶಿವಶರಣರು, ಸಾಹಿತಿಗಳು ಇನ್ನಷ್ಟು ಹೆಚ್ಚಿಸಿದ್ದಾರೆ ಎಂದ ಯಡಿಯೂರಪ್ಪ, ‘ಆರಂಕುಶ ಇಟ್ಟೊಡೆ ನೆನೆಯುವುದೆನ್ನ ಮನಂ ಬನವಾಸಿ ದೇಶವಂ’ ಎಂದು ಪಂಪ ಹಾಗೂ ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು’ ಎಂಬ ರಸಋಷಿ ಕುವೆಂಪು ಹೇಳಿದ್ದಾರೆ. ಅವರ ಮಾತಿನಂತೆ ನಾವು ಅಭಿಮಾನ ಮತ್ತು ಕೆಲಸ ಮಾಡಬೇಕು ಎಂದರು.

    ಕರೊನಾ ಜಾಗೃತಿ: ಕನ್ನಡದ ಬಗ್ಗೆ ಮಾತನಾಡುವಾಗಲೂ ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ ಯಡಿಯೂರಪ್ಪ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿ, ಆಂತರಿಕ ಮತ್ತು ಸಾಮಾಜಿಕ ಸ್ವಚ್ಛತೆಯ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.

    ಧ್ವಜ ಅಧಿಕೃತಗೊಳಿಸಿ: ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕನ್ನಡಿಗರಿಗೆ ಪ್ರತ್ಯೇಕ ಧ್ವಜದ ಅವಶ್ಯಕತೆ ಇದೆ. ಕೆಂಪು, ಹಳದಿ ಬಣ್ಣದ ಬಾವುಟ ನೋಡಿದರೆ ರೋಮಾಂಚನವಾಗುತ್ತದೆ. ಹೀಗಾಗಿ ಕೆಂಪು, ಹಳದಿ ಬಣ್ಣದ ಬಾವುಟವನ್ನು ಕರ್ನಾಟಕದ ಅಧಿಕೃತ ಧ್ವಜವೆಂದು ಮಾನ್ಯತೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆಯುಕ್ತ ಅನ್ಬು ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ಬೆಂಗಳೂರು ನಗರ ಪೊಲೀಸ್ ಅಯುಕ್ತ ಕಮಲ್ ಪಂತ್ ಸೇರಿ ಇನ್ನಿತರರಿದ್ದರು.

    ಆಡಳಿತದಲ್ಲಿ ಕನ್ನಡಕ್ಕೆ ಕಾಯಕ ವರ್ಷ; ಮುಖ್ಯಮಂತ್ರಿ ಘೋಷಣೆ
    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸ್ಮರಣಿಕೆ ನೀಡಲಾಯಿತು. ಸಚಿವ ಸುರೇಶ್​ಕುಮಾರ್ ಇದ್ದರು.

    100 ಜನರಿಗಷ್ಟೇ ಅವಕಾಶ

    ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿ ಕನ್ನಡ ರಾಜ್ಯೋ ತ್ಸವಕ್ಕೆ ತಡೆ ನೀಡಲಾಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಕೇವಲ 100 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.

    ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ: ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸದೆ ಸರಳ ರಾಜ್ಯೋತ್ಸವ ಆಚರಿಸಲಾಯಿತು.

    ಜೊಲ್ಲೆ ಗಾಯನಕ್ಕೆ ಕನ್ನಡಿಗರು ಫಿದಾ: ವಿಜಯಪುರದಲ್ಲಿ ಡಾ.ಡಿ.ಎಸ್.ರ್ಕ ರಚಿತ ‘ಹಚ್ಚೇವು ಕನ್ನಡ ದೀಪ, ಕರುನಾಡ ದೀಪ, ಸಿರಿ ನುಡಿಯ ದೀಪ, ಒಲವೆತ್ತಿ ತೋರುವಾ ದೀಪ…. ಹಚ್ಚೇವು ಕನ್ನಡದ ದೀಪ….’ ಗೀತೆಯ ಸಾಲುಗಳನ್ನು ಸುಮಧುರ ಕಂಠದಿಂದ ಹಾಡುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಕನ್ನಡಾಭಿಮಾನ ಮೆರೆದರು.

    ಹಂಪಿ ವಿವಿ ಸಮಗ್ರ ಕೊಡುಗೆ

    ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಕುವೆಂಪು ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿ ಮತ್ತು ಡಿಜಿಟಲ್ ಆವೃತ್ತಿಯನ್ನು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಲೋಕಾರ್ಪಣೆಗೊಳಿಸಿದರು. ಹತ್ತು ಸಾವಿರ ರೂ. ಮುಖಬೆಲೆಯ ಈ ಪುಸ್ತಕಗಳ ಸರಣಿ ಸೇರಿ ಹಂಪಿ ಪ್ರಸಾರಾಂಗ ಪ್ರಕಟಿಸಿರುವ ಎಲ್ಲ ಪ್ರಕಟಣೆಗಳನ್ನು ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಲ್ಲಿ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

    ಮೋದಿ, ಷಾ ಶುಭ ಹಾರೈಕೆ

    ರಾಜ್ಯೋತ್ಸವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಸೇರಿ ಕೇಂದ್ರದ ಹಲವು ಸಚಿವರು ರಾಜ್ಯದ ಜನರಿಗೆ ಶುಭ ಹಾರೈಸಿದ್ದಾರೆ. ‘ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ

    ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಶಕ್ತಿ ಮತ್ತು ಕೌಶಲದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೆ ಏರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ‘ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಕರ್ನಾಟಕ ಸದಾ ಮಹತ್ವದ ಪಾತ್ರ ನಿಭಾಯಿಸುತ್ತ ಬಂದಿದೆ. ಮುಂಬರುವ ವರ್ಷಗಳಲ್ಲೂ ರಾಜ್ಯ ಮತ್ತಷ್ಟು ಸಮೃದ್ಧಿ ಹೊಂದಿ ಪ್ರಗತಿ ಸಾಧಿಸಲೆಂದು ಹಾರೈಸುತ್ತೇನೆ’ ಎಂದು ಷಾ ತಿಳಿಸಿದ್ದಾರೆ.

    ಟೀಕೆ: ಬ್ಯಾಂಕಿಂಗ್ ಸೇರಿ ವಿವಿಧ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಮಾತ್ರ ಬರೆಯಬೇಕೆಂಬ ಕೇಂದ್ರದ ತೀರ್ವನಕ್ಕೆ ರಾಜ್ಯದ ಜನತೆ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಟ್ವೀಟರ್​ಗೆ ಉತ್ತರಿಸಿರುವ ಜನತೆ, ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಸಿಗಲಿ ಎಂದು ಒತ್ತಾಯಿಸಿದ್ದಾರೆ. ಕೆಲವರು ಜಿಎಸ್​ಟಿ ಪರಿಹಾರದ ವಿಚಾರವನ್ನೂ ಪ್ರಸ್ತಾಪಿಸಿ ಟೀಕಿಸಿದ್ದಾರೆ.

    ಪ್ರಧಾನಿಗೆ ಸಿಎಂ ಧನ್ಯವಾದ: ರಾಜ್ಯೋತ್ಸವ ದಿನ ಕನ್ನಡದಲ್ಲಿ ಟ್ವೀಟ್ ಮಾಡಿ ಕನ್ನಡಿಗರಿಗೆ ಶುಭ ಹಾರೈಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.

    ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

    ಬೆಂಗಳೂರು: ಕರೊನಾ ನಡುವೆಯೂ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಈವರೆಗೆ 90 ಸಾವಿರ ಮಕ್ಕಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದು, ಅದು ಇನ್ನಷ್ಟು ಹೆಚ್ಚಲಿದೆ. 14 ವರ್ಷಗಳಲ್ಲೇ ಈ ದಾಖಲಾತಿ ಅತಿಹೆಚ್ಚಳ ಎಂದು ಸಚಿವ ಎಸ್.ಸುರೇಶ್​ಕುಮಾರ್ ಹೇಳಿದರು. ಕನ್ನಡದ ಮಕ್ಕಳು ಜಾಗತಿಕವಾಗಿ ಸ್ಪರ್ಧೆಗೆ ಸಜ್ಜಾಗಲು ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸ ಲಾಗಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಅನ್ಯ ಭಾಷಿಕ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಬೇಕೆಂಬ ಸಲುವಾಗಿ ಜಾರಿಗೆ ತರಲಾದ ಕನ್ನಡ ಕಲಿಕಾ ಕಾಯ್ದೆ 2017 ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲಾಗುವುದು ಎಂದರು.

    ಎನ್​ಸಿಇಆರ್​ಟಿ ಕನ್ನಡ ಪಠ್ಯ: ಪದವಿಪೂರ್ವದ ವಿಜ್ಞಾನಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಇದೇ ಮೊದಲ ಬಾರಿಗೆ ಎನ್​ಸಿಇಆರ್​ಟಿ ಪಠ್ಯವನ್ನು ಕನ್ನಡದಲ್ಲಿ ನೀಡಲಾಗಿದೆ. ಮಾತೃಭಾಷೆ ಮೂಲಕ ಕಲಿಯುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು. ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಆ ಬಗ್ಗೆ ಉಲ್ಲೇಖವಿದ್ದು, ಮಾತೃಭಾಷೆ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts