More

    ಕನಕಪುರದ ವೈದ್ಯ ದಂಪತಿಗೆ ಕರೊನಾ: ಚಿಕಿತ್ಸೆ ಪಡೆದ 507 ಮಂದಿ ಪತ್ತೆ

    ರಾಮನಗರ: ಜಿಲ್ಲೆಯಲ್ಲಿ ಗುರುವಾರ ಮತ್ತೆ 10 ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಕನಕಪುರದ ವೈದ್ಯ ದಂಪತಿ ಸೇರಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಮಾಗಡಿಯಲ್ಲಿ 4 ಮತ್ತು ಕನಕಪುರದಲ್ಲಿ 5 ಪ್ರಕರಣಗಳು ಹಾಗೂ ಬಿಡದಿ ಆಂಧ್ರ ಮೂಲದ ಕಾರ್ಮಿಕನಿಗೆ ಸೋಂಕು ಪತ್ತೆಯಾಗಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆ ಏರಿಕೆಯಾದಂತಾಗಿದೆ.

    ಕನಕಪುರದಲ್ಲಿ ವೈದ್ಯ ದಂಪತಿಗೆ ಸೋಂಕು ದೃಢಪಟ್ಟಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇವರ ಬಳಿ ಚಿಕಿತ್ಸೆ ಪಡೆದ ನೂರಾರು ಮಂದಿ ಕ್ವಾರಂಟೈನ್‌ಗೆ ಒಳಗಾಗುವ ಸಾಧ್ಯತೆ ಇದೆ. ಸೋಮವಾರ 90 ವರ್ಷದ ವೃದ್ಧರೊಬ್ಬರು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದರು. ಸಾವಿಗೂ ಮುನ್ನ ವೃದ್ಧ ಕನಕಪುರದ ಎಂ.ಜಿ. ರಸ್ತೆಯಲ್ಲಿರುವ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯ ದಂಪತಿಯನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಇದೀಗ ದಂಪತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದಲ್ಲದೆ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದು ಕ್ವಾರಂಟೈನ್‌ಗೆ ಒಳಗಾಗಿದ್ದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ.
    ಮಾಗಡಿಯಲ್ಲಿ ಸೋಂಕು ದೃಢಪಟ್ಟಿದ್ದ ಮೆಕಾನಿಕ್ ಸಂಪರ್ಕದಲ್ಲಿದ್ದ ನಾಲ್ವರು ಕುಟುಂಬ ಸದಸ್ಯರಿಗೂ ಸೋಂಕು ಪತ್ತೆಯಾಗಿದೆ. ಮೆಕಾನಿಕ್ ತಂದೆ, ತಾಯಿ, ಹೆಂಡತಿ ಮತ್ತು ಮಗು ಸೋಂಕು ದೃಢಪಟ್ಟಿದ್ದು, ಎಲ್ಲರನ್ನೂ ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    507 ಮಂದಿ ಪತ್ತೆ: ಸೋಂಕಿತ ಕನಕಪುರದ ವೈದ್ಯೆ ಸ್ತ್ರೀರೋಗ ತಜ್ಞರಾಗಿದ್ದು, ಇವರ ಬಳಿ ಗರ್ಭಿಣಿಯರೇ ಹೆಚ್ಚಾಗಿ ಚಿಕಿತ್ಸೆಗೆ ಆಗಮಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಗುರುವಾರದ ಸಂಜೆ ಹೊತ್ತಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿ, ವೈದ್ಯರ ಕುಟುಂಬ ಸದಸ್ಯರು ಹಾಗೂ ಚಿಕಿತ್ಸೆ ಪಡೆದ ರೋಗಿಗಳು ಸೇರಿ ಒಟ್ಟು 507 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಇವರಲ್ಲಿ 27 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಮತ್ತೊಂದೆಡೆ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಕನಕಪುರ ನಗರಸಭೆ, ಜೂ.6ರಿಂದ ಇಲ್ಲಿಯವರೆಗೆ ಈ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿರುವ ಎಲ್ಲರೂ ಸ್ವಯಂಪ್ರೇರಿತರಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು ಹಾಗೂ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಿದೆ.

    ಸೋಂಕಿತನ ಕುಟುಂಬದ ನಾಲ್ವರಿಗೆ ಪಾಸಿಟಿವ್ : ಮಾಗಡಿ ಪಟ್ಟಣದ 13ನೇ ವಾರ್ಡ್‌ನ ಗಾಡಿ ವೆಂಕಟಪ್ಪ ರಸ್ತೆ ನಿವಾಸಿ (ಮೆಕಾನಿಕ್) ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಮಂದಿಯಲ್ಲಿ ಕರೊನಾ ಪತ್ತೆಯಾಗಿದೆ. ಸೋಂಕಿತನ 24 ವರ್ಷದ ಪತ್ನಿ, 74 ವರ್ಷದ ತಾಯಿ, 84 ವರ್ಷದ ತಂದೆ ಹಾಗೂ 3 ವರ್ಷದ ಮಗಳಲ್ಲಿ ಸೋಂಕು ದೃಢಪಟ್ಟಿದೆ. ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಈ ನಾಲ್ವರ ಗಂಟಲು ದ್ರವವನ್ನು ಜೂ.15ರಂದು ಪರೀಕ್ಷೆಗೆ ಕಳಿಸಲಾಗಿದ್ದು, ಗುರುವಾರದಂದು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಲ್ಲರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಸೀಲ್‌ಡೌನ್ ಪ್ರದೇಶದ ಕಾರ್ಯವ್ಯಾಪ್ತಿ ಕಮಾಂಡರ್ ಆಗಿ ಮುಖ್ಯಾಧಿಕಾರಿ ಮಹೇಶ್ ಅವರನ್ನು ಜಿಲ್ಲಾಡಳಿತ ನೇಮಿಸಿದೆ. ಕಳೆದ ನಾಲ್ಕು ದಿನಗಳಲ್ಲಿ 7 ಮಂದಿಗೆ ಕರೊನಾ ದೃಢಪಟ್ಟಿದ್ದು, ಪಟ್ಟಣದ ಜನತೆ ಭಯಭೀತರಾಗಿದ್ದಾರೆ.

    ಕ್ವಾರಂಟೈನ್‌ನಲ್ಲಿದ್ದ ಯುವತಿಗೆ ತಪ್ಪಿದ ಪರೀಕ್ಷೆ: ಜೂ.17ರಂದು 15 ವರ್ಷದ ಬಾಲಕಿಗೂ ಪಾಸಿಟಿವ್ ಬಂದಿದೆ. ಈಕೆಯ ಸೋದರಿ ಸೇರಿ ನಾಲ್ವರನ್ನು ಹುಲಿಕಟ್ಟೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸೋಂಕಿತೆಯ ಸೋದರಿ ಪಿಯುಸಿ ಓದುತ್ತಿದ್ದು ಗುರುವಾರ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ಇತರ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಜುಲೈನಲ್ಲಿ ಅವಕಾಶ ನೀಡುವುದಾಗಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts